ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರಪತಿ ಆಡಳಿತ ಜಾರಿ ಮಾಡಿ: ಅಶೋಕ

Published : 19 ಆಗಸ್ಟ್ 2024, 16:01 IST
Last Updated : 19 ಆಗಸ್ಟ್ 2024, 16:01 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕಾನೂನು ಸುವ್ಯವಸ್ಥೆ ಹಾಳುಗೆಡವಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಿಂಸೆಗೆ ಪ್ರಚೋದನೆ ನೀಡುತ್ತಿರುವುದರಿಂದ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ರಾಜ್ಯಪಾಲರಿಗೆ ಮನವಿ ಮಾಡಿದರು.

ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ನಡೆದ ಬಿಜೆಪಿ– ಜೆಡಿಎಸ್‌ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಆದರೆ, ಅವರು ಕಲ್ಲು ಹೊಡೆಯಿರಿ, ಟೈರ್‌ ಸುಟ್ಟು ಹಾಕಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎಂದು ಕಿಡಿಕಾರಿದರು.

‘ಬಿಜೆಪಿ– ಜೆಡಿಎಸ್ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದೆ. ತಮ್ಮವರು ಪ್ರತಿಭಟನೆ ಮಾಡುತ್ತಾರೆ, ಸಹಕಾರ ನೀಡಿ ಎಂದು ಕಾಂಗ್ರೆಸ್ ನಾಯಕರು, ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪೊಲೀಸರ ಕೈ ಕಟ್ಟಿ ಹಾಕಿ ಕಾನೂನು ಸುವ್ಯವಸ್ಥೆ ಹಾಳುಗೆಡವಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ’ ಎಂದರು.

‘ವಿಧಾನಸಭೆಯಲ್ಲಿ ಮುಡಾ ಹಗರಣ ಕುರಿತು ಬಿಜೆಪಿ ಚರ್ಚಿಸಲು ಮುಂದಾದಾಗ ಮುಖ್ಯಮಂತ್ರಿ ಚರ್ಚೆಗೆ ನಿಲ್ಲದೇ ಪಲಾಯನ ಮಾಡಿದರು. ಅಲ್ಲಿ 224 ಶಾಸಕರು, ಮಾಧ್ಯಮದವರು, ಅಧಿಕಾರಿಗಳಿದ್ದರೂ ಉತ್ತರ ನೀಡುವ ಧೈರ್ಯ ತೋರಲಿಲ್ಲ. ವಿರೋಧ ಪಕ್ಷವಾಗಿ ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಜನಜಾಗೃತಿ ಮೂಡಿಸಲು ಪಾದಯಾತ್ರೆ ಮಾಡಿದೆವು. ಆದರೆ, ಕಾಂಗ್ರೆಸ್‌ ಪಕ್ಷ ಸರ್ಕಾರದ ಅಧಿಕಾರ ಬಳಸಿಕೊಂಡು ಸಮಾವೇಶ ಮಾಡಿದೆ. ಇದನ್ನು ಸರ್ಕಾರ ಎಂದು ಕರೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ಹಗರಣಗಳ ಕುರಿತು ಬಿಜೆಪಿ ಮತ್ತು ಜೆಡಿಎಸ್‌ ಮಾತ್ರ ಪ್ರತಿಭಟಿಸುತ್ತಿಲ್ಲ. ನಮಗಿಂತಲೂ ಮೊದಲು ಮಾಧ್ಯಮಗಳು ಹಗರಣಗಳನ್ನು ಬೆಳಕಿಗೆ ತಂದಿವೆ. ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಟಿ.ಜೆ.ಅಬ್ರಹಾಂ ಕೋರಿದ್ದಾರೆಯೇ ಹೊರತು ಬಿಜೆಪಿ ಕಾರ್ಯಕರ್ತರು ಕೋರಿಕೆ ಸಲ್ಲಿಸಿಲ್ಲ ಎಂದು ಹೇಳಿದರು.

‘ರಾಜ್ಯಪಾಲರ ಚಿತ್ರ ಸುಡುವುದು ಸಂವಿಧಾನಕ್ಕೆ ಮಾಡುವ ಅಪಚಾರ. ಕಳೆದ ವರ್ಷ ಮಾಡಿದ್ದ ಪ್ರತಿಭಟನೆಗೆ ಈಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇಂತಹ ದ್ವೇಷ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರು ಎಷ್ಟು ದಿನ ಅಧಿಕಾರದಲ್ಲಿರುತ್ತಾರೆ’ ಎಂದು ಅಶೋಕ ಪ್ರಶ್ನಿಸಿದರು.

ಸಿದ್ದರಾಮಯ್ಯ ತಾವು ಸತ್ಯ ಹರಿಶ್ಚಂದ್ರ ಆಗಬೇಕಿದ್ದರೆ ಗೌರವದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಾರ್ವಜನಿಕರಿಗೆ ತಪ್ಪು ಮಾಹಿತಿ ಕೊಡುವ ಅಗತ್ಯವಿಲ್ಲ
ಡಿ.ವಿ.ಸದಾನಂದಗೌಡ ಮಾಜಿ ಮುಖ್ಯಮಂತ್ರಿ
ಹಗರಣ ಮಾಡಿ ದಾಖಲೆ ಸಮೇತ ಸಿಕ್ಕಿಬಿದ್ದಿದ್ದೀರಿ. ಅದಕ್ಕಾಗಿ ನಗರಾಭಿವೃದ್ಧಿ ಸಚಿವರು ಮೈಸೂರಿಗೆ ಹೋಗಿ ಕಡತಗಳನ್ನು ತಮ್ಮೊಂದಿಗೆ ಹೊತ್ತೊಯ್ದಿದ್ದಾರೆ. ದಾಖಲೆಗಳನ್ನು ನಾಶ ಮಾಡಿರುವ ಸಾಧ್ಯತೆ ಇದೆ.
- ಆರಗ ಜ್ಞಾನೇಂದ್ರ ಶಾಸಕ
ಮುಖ್ಯಮಂತ್ರಿಗಳೇ ಬ್ಲ್ಯಾಕ್‌ಮೇಲ್‌ ರಾಜಕಾರಣ ಬಿಡಿ. ಕೂಡಲೇ ರಾಜೀನಾಮೆ ಕೊಡಿ. ತನಿಖೆ ಎದುರಿಸಿ ತಪ್ಪೇ ಮಾಡಿಲ್ಲ ಎಂಬುದು ಸಾಬೀತಾದರೆ ಮತ್ತೆ ಮುಖ್ಯಮಂತ್ರಿ ಆಗಬಹುದು
ಸಿ.ಟಿ.ರವಿ ವಿಧಾನಪರಿಷತ್ ಸದಸ್ಯ.
ಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೆ ಎನ್‌ಡಿಎ ಅಂಗ ಪಕ್ಷಗಳಾದ ನಾವು ಹೋರಾಟ ಮಾಡಲಿದ್ದೇವೆ. ಅಹಿಂದದಲ್ಲಿ ‘ದ’ ಅಕ್ಷರವನ್ನು ನುಂಗಿ ಹಾಕಿದ್ದಾರೆ. ಇನ್ನೆರಡು ಅಕ್ಷರಗಳನ್ನು ಯಾವತ್ತು ನುಂಗುತ್ತಾರೋ ಗೊತ್ತಿಲ್ಲ
ಕೃಷ್ಣಾರೆಡ್ಡಿ ಜೆಡಿಎಸ್ ಮುಖಂಡ
ಜೆಡಿಎಸ್‌ ಪ್ರಾಡಕ್ಟ್‌ ಆಗಿದ್ದ ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಅವರ ಸ್ಮರಣ ಶಕ್ತಿ ಕಡಿಮೆ ಆಗಿದೆ. ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು.
–ಟಿ.ಎ.ಶರವಣ ವಿಧಾನಪರಿಷತ್‌ ಸದಸ್ಯ ಜೆಡಿಎಸ್‌

ಸಮಾಜವಾದಿಯ ಮುಖವಾಡ ಕಳಚಿದೆ: ವಿಜಯೇಂದ್ರ

‘ಸಮಾಜವಾದಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದೆ. ಅವರು ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಭ್ರಷ್ಟ ಕಾಂಗ್ರೆಸ್ ಮತ್ತು ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟ ಇದೀಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಮೈಸೂರಿನ ಮುಡಾ ಹಗರಣ ವಾಲ್ಮೀಕಿ ನಿಗಮದ ಹಗರಣಗಳು ಪ್ರಮುಖವಾದವು. ಮುಡಾದಲ್ಲಿ ಸುಮಾರು ₹5 ಸಾವಿರ ಕೋಟಿಯ ನಿವೇಶನಗಳನ್ನು ನುಂಗಿ ಹಾಕಿದ್ದಾರೆ ಎಂದರು.

ಭಂಡತನ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ ಸಿದ್ದರಾಮಯ್ಯನವರು ಗೂಂಡಾಗಿರಿಗೆ ಇಳಿದಿದ್ದಾರೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT