ಬೆಂಗಳೂರು: ‘ಇಡೀ ವಿಶ್ವಕ್ಕೆ ಬೆಳಕು ನೀಡುವುದಕ್ಕಾಗಿಯೇ ಭಾರತ ಸ್ವತಂತ್ರವಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ತಿಳಿಸಿದರು.
ಸಮರ್ಥ ಭಾರತ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ‘ಜಗತ್ತಿಗೆ ಈಗ ಭಾರತದ ಅವಶ್ಯವಿದೆ. ಅದಕ್ಕಾಗಿ ನಾವು ತಯಾರಾಗಬೇಕು. ಈ ವೇಳೆ ಧ್ವಜದ ಸ್ವರೂಪದ ಬಗ್ಗೆ ಯೋಚನೆ ಮಾಡಿ, ನಿರಂತರ ಕ್ರಿಯಾಶೀಲರಾಗಿರಬೇಕು. ತ್ಯಾಗವನ್ನು ಮಾಡುವುದು ಸ್ವಾರ್ಥಕ್ಕಾಗಿ ಅಲ್ಲ ಎನ್ನುವುದನ್ನು ಧ್ವಜದಲ್ಲಿನ ಕೇಸರಿ ಬಣ್ಣ ಸಾರುತ್ತದೆ. ಮನದ ವಿಕಾರವನ್ನು ನಿರ್ಮೂಲನೆಗೊಳಿಸಲು ಬಿಳಿಯ ಬಣ್ಣವಿದೆ. ಹಸಿರು ಬಣ್ಣ ನಮ್ಮ ಸಮೃದ್ಧಿಯನ್ನು ಸೂಚಿಸುತ್ತದೆ. ಇದನ್ನು ಅರಿತು ನಡೆಯಬೇಕು. ನಾವು ಸಬಲರಾಗದಿದ್ದರೆ, ನಮ್ಮನ್ನು ಒಡೆಯುವ ಶಕ್ತಿಗಳು ಬಲಶಾಲಿಯಾಗುತ್ತವೆ’ ಎಂದು ಹೇಳಿದರು.
‘ನಮ್ಮ ಅಸ್ಮಿತೆಯ ಆಧಾರದಲ್ಲಿ ದೇಶವನ್ನು ಕಟ್ಟಬೇಕು. ನಮಗೆ ಸ್ವಾಧೀನತೆ ಸಿಕ್ಕಿದೆ. ಆದರೆ, ಸ್ವಾತಂತ್ರ್ಯ ಸಿಕ್ಕಿಲ್ಲ. ಜ್ಞಾನ, ಕರ್ಮದ ಆಧಾರದಲ್ಲಿ ಕೆಲಸ ಮಾಡಿದರೆ ಸ್ವಾತಂತ್ರ್ಯ ಸಿಗುತ್ತದೆ. ನಮ್ಮ ಜಲ, ಅರಣ್ಯ, ಜಾನುವಾರುಗಳನ್ನು ಸುಖಿಯಾಗಿಡಬೇಕು. ಈ ಎಲ್ಲಾ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು’ ಎಂದು ತಿಳಿಸಿದರು.
‘ನಮ್ಮ ಪೂರ್ವಜರ ಹಲವು ವರ್ಷಗಳ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಎನ್ನುವುದು ನಿರಂತರ ಪ್ರಕ್ರಿಯೆ. ಇಡೀ ಜಗತ್ತಿಗೆ ಉಪಕಾರ ಮಾಡುವ ದೇಶ ನಮ್ಮದಾಗಿ, ವಿಶ್ವಕ್ಕೆ ಗುರುವಾಗಬೇಕು. ಆದ್ದರಿಂದ ರಾಷ್ಟ್ರಧ್ವಜದ ಆಶಯಕ್ಕೆ ಅನುಗುಣವಾಗಿ ನಾವು ನಡೆದುಕೊಳ್ಳಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.