ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನಂಚಿನಲ್ಲಿವೆ 2,845 ಭಾಷೆಗಳು: ಮಹೇಶ ಜೋಶಿ

Published 6 ಮಾರ್ಚ್ 2024, 15:38 IST
Last Updated 6 ಮಾರ್ಚ್ 2024, 15:38 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವದಲ್ಲಿ 7,000ಕ್ಕೂ ಹೆಚ್ಚು ಭಾಷೆಗಳು ಬಳಕೆಯಲ್ಲಿವೆ. ನಿತ್ಯದ ಬದುಕಿನಲ್ಲಿ ಮಾತನಾಡುವವರ ಸಂಖ್ಯೆ ಇಳಿಮುಖವಾದ ಕಾರಣ 2,845 ಭಾಷೆಗಳು ನಶಿಸುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ಹೇಳಿದರು. 

ನೃಪತುಂಗ ವಿಶ್ವವಿದ್ಯಾಲಯ ಹಾಗೂ ಭಾರತೀಯ ಶಿಕ್ಷಣ ಮಂಡಲ ಬುಧವಾರ ಹಮ್ಮಿಕೊಂಡಿದ್ದ ಭಾರತೀಯ ಭಾಷಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

3,116 ಭಾಷೆಗಳಿಗೆ ಲಿಪಿಯೇ ಇಲ್ಲ. ಭಾರತದಲ್ಲಿ 445 ಪ್ರಮುಖ, 1,600 ಉಪ ಭಾಷೆಗಳಿದ್ದರೂ ಹಲವು ಭಾಷೆಗಳು ಕಣ್ಮರೆಯಾಗುತ್ತಿವೆ. ಪ್ರತಿಯೊಂದು ಭಾಷೆಯ ಜನರೂ ಮಾತೃಭಾಷಾ ಪ್ರೀತಿ ಬೆಳೆಸಿಕೊಂಡರೆ ಆಯಾ ಭಾಷೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬಹುದು. ಬಹುಕಾಲದವರೆಗೆ ಉಳಿಸಬಹುದು ಎಂದರು. 

ಕರ್ನಾಟಕದಲ್ಲಿ ಕನ್ನಡವನ್ನು ಶೇ 94ರಷ್ಟು ಜನರು ಬಳಸುತ್ತಿದ್ದಾರೆ. ಕನ್ನಡ ಭಾಷಾ ಸಾಹಿತ್ಯ, ಸಂಸ್ಕೃತಿ, ಜಾನಪದ ಸೇರಿದಂತೆ ವಿವಿಧ ಪ್ರಕಾರಗಳು ಭಾಷಾ ಶ್ರೀಮಂತಿಕೆಗೆ ಮೆರಗು ನೀಡಿವೆ ಎಂದು ಬಣ್ಣಿಸಿದರು. 

ಪ್ರಾಸ್ತಾವಿಕ ಮಾತನ್ನಾಡಿದ ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಪ್ರಾಂತ ಸಂಚಾಲಕ ವೀರಣ್ಣ ಕಮ್ಮಾರ್, ‘ಭಾರತೀಯ ಭಾಷೆಗಳನ್ನು ಉತ್ತೇಜಿಸಲು ಹಲವು ಪ್ರಯತ್ನಗಳು ನಡೆದಿವೆ. ಯುವಜನರು ಹಾಗೂ ಜನಸಾಮಾನ್ಯರಲ್ಲಿ ಭಾರತೀಯ ಭಾಷೆಗಳನ್ನು ಮಹತ್ವದ ಸಾಧನಗಳನ್ನಾಗಿ ಮಾಡಲು ಆಧುನಿಕ ತಂತ್ರಜ್ಞಾನ, ಉದ್ಯೋಗದ ಜತೆ ಬೆಸೆಯಲಾಗುತ್ತಿದೆ. ಇದರಿಂದ ಆಯಾ ಭಾಷೆಯ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಭಾರತೀಯ ಭಾಷಾ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡಿದೆ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಪ್ರಗತಿಯಲ್ಲಿ ಭಾಷೆಗಳು ಮಹತ್ವದ ಪಾತ್ರ ವಹಿಸಿವೆ. ಭವಿಷ್ಯದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧಿಸಲು ಬುನಾದಿಯಾಗಿವೆ ಎಂದು ಹೇಳಿದರು. 

ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ಎಸ್‌.ಬಳ್ಳಿ, ಕುಲಸಚಿವೆ ಕೆ.ಆರ್.ಕವಿತಾ, ಜ್ಯೋತಿರ್ಗಮಯ ಸಂಸ್ಥೆಯ ಸ್ಥಾಪಕಿ ಆಂಟೋನಿಯೋ ಪುನೀತಾ, ಭಾರತೀಯ ಭಾಷಾ ಸಮ್ಮೇಳನದ ಸಂಚಾಲಕ ವಿ.ರಾಮಚಂದ್ರ, ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷ ಸತೀಶ್‌ ವಾಸು ಕೈಲಾಸ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT