ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಹುತ್ವದ ರಕ್ಷಣೆಗೆ ಎದ್ದುನಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
Published : 15 ಸೆಪ್ಟೆಂಬರ್ 2024, 16:00 IST
Last Updated : 15 ಸೆಪ್ಟೆಂಬರ್ 2024, 16:00 IST
ಫಾಲೋ ಮಾಡಿ
Comments

ಬೆಂಗಳೂರು: ‘ಪ್ರಜಾಪ್ರಭುತ್ವವು ಬಹುತ್ವವನ್ನು ಪ್ರತಿಪಾದಿಸುತ್ತದೆ. ಆದರೆ, ಇಂದು ಏಕತೆಯ ಹೆಸರಿನಲ್ಲಿ ಬಹುತ್ವದ ನಾಶಕ್ಕೆ ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಯತ್ನಿಸುತ್ತಿವೆ. ಬಹುತ್ವದ ರಕ್ಷಣೆಗೆ ನಾವೆಲ್ಲರೂ ನಿಲ್ಲಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ವಿಧಾನಸೌಧದಲ್ಲಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಾನತೆ, ಸಾಮಾಜಿಕ ನ್ಯಾಯ ವಿರೋಧಿಸುವವರು ಏಕತೆಯ ಬಣ್ಣದ ಮಾತುಗಳನ್ನು ಆಡುತ್ತಿದ್ದಾರೆ. ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವು ವಿವಿಧತೆಯಲ್ಲಿ ಏಕತೆಯನ್ನು ಸಂಭ್ರಮಿಸುತ್ತದೆ. ಆದರೆ, ಬಿಜೆಪಿಯಂತಹ ಸಮಾನತೆ ವಿರೋಧಿ ಶಕ್ತಿಗಳು ವಿವಿಧತೆಯನ್ನು ನಾಶ ಮಾಡಿ, ಏಕತೆ ಸ್ಥಾಪನೆಗೆ ಮುಂದಾಗಿವೆ. ಈ ಶಕ್ತಿಗಳ ವಿರುದ್ಧ ನಾವು ಹೋರಾಡಬೇಕು’ ಎಂದರು.

‘ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಾಧ್ಯವಾದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಅಂಬೇಡ್ಕರ್ ಅವರು ಹೇಳಿದ್ದರು. ಅಸಮಾನತೆ ಮತ್ತು ತಾರತಮ್ಯ ಇರುವವರೆಗೂ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಆದರೆ, ಇದನ್ನು ಸಾಧಿಸುವ ಹಾದಿಗೆ ಕೆಲ ದುಷ್ಟಶಕ್ತಿಗಳು ಅಡ್ಡಿಯಾಗಿವೆ. ಅವರನ್ನು ತೊಡೆದುಹಾಕದೆ ಮಹಿಳೆಯರು, ದಲಿತರು ಮತ್ತು ಹಿಂದುಳಿದವರಿಗೆ ಸಮಾನ ಅವಕಾಶ ಸಿಗುವುದಿಲ್ಲ’ ಎಂದರು.

‘ಜನರಲ್ಲಿ ಸಮಾನತೆ ಮತ್ತು ಜಾತ್ಯತೀತ ಮನೋಭಾವಗಳನ್ನು ಬೆಳೆಸಲೆಂದೇ ಶಾಲಾ–ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರುಗಳಾದ ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಮಾನವ ಸರಪಳಿಯಲ್ಲಿ ಭಾಗಿಯಾದರು.

ಭದ್ರತಾ ವೈಫಲ್ಯ ಸಿ.ಎಂರತ್ತ ನುಗ್ಗಿದ ಯುವಕ

ವಿಧಾನಸೌಧದ ಆವರಣದಲ್ಲಿ ಕಾರ್ಯಕ್ರಮ ನಡೆಯುವಾಗ ಯುವಕನೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ನುಗ್ಗಿದ ಘಟನೆ ನಡೆಯಿತು. ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಮಾತನಾಡುತ್ತಿದ್ದ ವೇಳೆ ಮುಂಭಾಗದಿಂದ ಒಮ್ಮೆಗೇ ವೇದಿಕೆಗೆ ಜಿಗಿದ. ತಕ್ಷಣವೇ ಎಚ್ಚೆತ್ತ ಮುಖ್ಯಮಂತ್ರಿ ಭದ್ರತಾ ಸಿಬ್ಬಂದಿ ಯುವಕನನ್ನು ಅಲ್ಲಿಯೇ ತಡೆದರು. ಈ ಮಧ್ಯೆಯೇ ಆತ ಸಿದ್ದರಾಮಯ್ಯ ಅವರತ್ತ ಶಾಲು ಎಸೆದ. ಭದ್ರತಾ ಸಿಬ್ಬಂದಿ ಆತನನ್ನು ವೇದಿಕೆಯಿಂದ ಎಳೆದೊಯ್ದರು. ಸ್ಥಳದಲ್ಲೇ ಇದ್ದ ವಿಧಾನಸೌಧ ಭದ್ರತಾ ವಿಭಾಗದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಚಾರದ ಗೀಳು ಎರಡನೇ ಬಾರಿ ಕೃತ್ಯ: ಯುವಕನನ್ನು ಕನಕಪುರದ ಚಾಮುಂಡಿನಗರ ನಿವಾಸಿ ಮಹದೇವಪ್ಪ ನಾಯಕ (24) ಎಂದು ಗುರುತಿಸಲಾಗಿದೆ. ಬೆಂಗಳೂರಿನ ವಾಹನ ಮಾರಾಟ ಮಳಿಗೆಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿರುವ ಆತ ‘ನಾನು ಸಿದ್ದರಾಮಯ್ಯ ಅವರ ಅಭಿಮಾನಿ. ಅವರಿಗೆ ಶಾಲು ಹಾಕಲು ವೇದಿಕೆ ಹತ್ತಿದೆ’ ಎಂದು ಹೇಳಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘7ನೇ ವೇತನ ಆಯೋಗ ಜಾರಿ ಸಂಬಂಧ ಸರ್ಕಾರಿ ನೌಕರರ ಸಂಘವು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಸನ್ಮಾನ ಕಾರ್ಯಕ್ರಮದಲ್ಲೂ ಈತ ಇದೇ ರೀತಿ ವೇದಿಕೆಗೆ ನುಗ್ಗಿದ್ದ. ಆಗ ಸದಾಶಿವನಗರ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಮಾನಸಿಕ ಸ್ಥಿಮಿತ ಇದ್ದಂತೆ ಕಾಣಲಿಲ್ಲ. ಹೀಗಾಗಿ ಆತನ ತಂದೆಯನ್ನು ಕರೆಸಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿತ್ತು. ನಂತರ ಬಿಟ್ಟು ಕಳುಹಿಸಲಾಗಿತ್ತು’ ಎಂದು ಆಧಿಕಾರಿಗಳು ತಿಳಿಸಿದ್ದಾರೆ.

‘ಸಮಾಜ ಕಲ್ಯಾಣ ಇಲಾಖೆ ನೀಡಿದ್ದ ಪಾಸ್ ಬಳಸಿಯೇ ಆತ ವಿಧಾನಸೌಧ ಆವರಣ ಪ್ರವೇಶಿಸಿದ್ದಾನೆ. ಆತನ ಬಳಿ ಅಪಾಯಕಾರಿ ವಸ್ತುಗಳು ಪತ್ತೆ ಆಗಿಲ್ಲ. ಆದರೆ ಪದೇ–ಪದೇ ಇಂತಹ ಕೃತ್ಯ ಎಸಗಿರುವ ಕಾರಣ ಆತನನ್ನು ವಶದಲ್ಲೇ ಇರಿಸಿಕೊಳ್ಳಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಅತಿಕ್ರಮ ಪ್ರವೇಶ ಮಾಡಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು’ ಎಂದೂ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT