ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರ ಹೋರಾಟ ವ್ಯಕ್ತಿ, ಪಕ್ಷದ ವಿರುದ್ಧವಲ್ಲ

ಕುರುಬರ ಪರಿಶಿಷ್ಟ ಪಂಗಡ ಹೋರಾಟ ಸಮಿತಿ ವಿಭಾಗ ಮಟ್ಟದ ಸಮಾವೇಶ ಉದ್ಘಾಟಿಸಿದ ಈಶ್ವರಪ್ಪ
Last Updated 4 ಜನವರಿ 2021, 14:06 IST
ಅಕ್ಷರ ಗಾತ್ರ

ಸಿಂಧನೂರು: ‘ಸ್ವಾತಂತ್ರ್ಯ ಪೂರ್ವದಲ್ಲಿ ಕುರುಬರು ಪರಿಶಿಷ್ಟ ಪಂಗಡ (ಎಸ್‍.ಟಿ)ದಲ್ಲಿಯೇ ಇದ್ದರು. ಬದಲಾದ ಪರಿಸ್ಥಿತಿಯಲ್ಲಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಅಂದಿನಿಂದ ಇಂದಿನಿಂದವರೆಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಮತ್ತೆ ಸೇರ್ಪಡೆ ಆಗಿಲ್ಲ. ಆದರೆ, ಈಗ ಕಾಗಿನೆಲೆ ಕನಕ ಗುರುಪೀಠದ ಎಲ್ಲ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಗಟ್ಟಿ ಧ್ವನಿ ಕೇಳಿಬರುತ್ತಿದೆ. ಇದು ಯಾವುದೇ ವ್ಯಕ್ತಿ– ಪಕ್ಷದ ಪರ ಅಥವಾ ವಿರೋಧದ ಹೋರಾಟವಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಕುರುಬರ ಎಸ್‍.ಟಿ ಹೋರಾಟ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಕಲಬುರ್ಗಿ ವಿಭಾಗ ಮಟ್ಟದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಅಪ್ಪ, ಅಜ್ಜ, ನಾನು ಕೂಲಿ ಮಾಡಿದ್ದು ಸಾಕು. ನಮ್ಮ ಮಕ್ಕಳು ಮತ್ತು ಅವರ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಕುರುಬ ಸಮುದಾಯ ಪರಿಶಿಷ್ಟ ಪಂಗಡದಲ್ಲಿ ಸೇರಬೇಕು. ಆಗ ಮಾತ್ರ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯುವುದಲ್ಲದೆ, ಸರ್ಕಾರದಿಂದ ಸಕಲ ಸೌಲಭ್ಯಗಳು ಸಿಕ್ಕು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ’ ಎಂದರು.

‘ಚುನಾವಣೆ ಸಮಯದಲ್ಲಿ ಮತ ಕೇಳೋಕೆ ಬಂದಂತೆ ಈಗ ಬಂದಿಲ್ಲ. ಪಕ್ಷಾತೀತವಾಗಿ ಕುರುಬ ಸಮಾಜದ ನಾಯಕರೆಲ್ಲರೂ ಒಗ್ಗೂಡಿ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮೀಸಲಾತಿ ಪಡೆದುಕೊಳ್ಳಲು ಸಂಘಟಿತರಾಗೋಣ ಎಂದು ಜನಜಾಗೃತಿ ಮೂಡಿಸಲು ಇಲ್ಲಿ ಸೇರಿದ್ದೇವೆ’ ಎಂದೂ ಹೇಳಿದರು.

‘ಆರ್‌ಎಸ್‌ಎಸ್‌ ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಬದಲಿಗೆ ಒಗ್ಗೂಡಿಸುವ ಕೆಲಸ ಮಾಡಿದೆ. ಈ ಹೋರಾಟ ಆರ್‌ಎಸ್‍ಎಸ್ ಪ್ರೇರಿತವೂ ಅಲ್ಲ. ಕುರುಬರಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದರೆ ಹಿಂದೂ ಸಮಾಜ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ಭಾವನೆ ನನ್ನದು. ಕುರುಬರನ್ನು ಎಸ್‍.ಟಿ.ಗೆ ಸೇರಿಸಿ, ಮುಂಬರುವ ಚುನಾವಣೆಯಲ್ಲಿ ಎಸ್‍.ಟಿ ಮೀಸಲಾತಿಯಲ್ಲಿಯೇ ಕುರುಬರು ಸ್ಪರ್ಧಿಸುವಂತೆ ಮಾಡಲು ಸಂಕಲ್ಪ ಮಾಡಿದ್ದೇವೆ. ಆದ್ದರಿಂದ ಸಮಾಜ ಬಾಂಧವರು ಗೊಂದಲಕ್ಕೆ ಒಳಗಾಗಬಾರದು’ ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ‘ಕುರುಬರು ಬೀದಿ ಬೀದಿಯಲ್ಲಿ ಹೋರಾಟ ಮಾಡುವ ಪ್ರಸಂಗ ಬಂದದ್ದು, ಇದಕ್ಕೆ ಹಿಂದೆ ಆಡಳಿತ ನಡೆಸಿದ ನಾಯಕರ ಬೇಜವಾಬ್ದಾರಿಯೇ ಕಾರಣ. ಸ್ವಾತಂತ್ರ್ಯ ಬಂದ ನಂತರದ 73 ವರ್ಷಗಳಲ್ಲಿ ಕುರುಬರನ್ನು ಎಸ್‍.ಟಿಗೆ ಸೇರಿಸಲು ಅಧಿಕಾರ ಅನುಭವಿಸಿದ ಕುರುಬ ಸಮಾಜದ ರಾಜಕೀಯ ನಾಯಕರು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ’ ಎಂದು ದೂರಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ‘ಆವೇಷದ ಮಾತುಗಳಿಂದ ಇನ್ನೊಬ್ಬರನ್ನು ದೂಷಿಸಿ, ಅವರ ಅಭಿಮಾನಿಗಳನ್ನು ನೋಯಿಸುವುದರಿಂದ ಸಮಾಜಕ್ಕೆ ನಷ್ಟವಾಗಲಿದೆಯೇ ಹೊರತು; ಒಳಿತಾಗುವುದಿಲ್ಲ. ಒಳಗಡೆ ಕುಳಿತು ಸಮಾಲೋಚನೆ ಮಾಡುವುದು ಬಿಟ್ಟು, ಬಹಿರಂಗ ವೇದಿಕೆಯಲ್ಲಿ ಒಬ್ಬರ ವಿರುದ್ಧ ಬೆರಳು ತೋರಿಸಿದರೆ ಇನ್ನುಳಿದ ನಾಲ್ಕು ಬೆರಳುಗಳು ನಮ್ಮ ಕಡೆ ಇರುತ್ತವೆಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಿದ್ಧರಮಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಕೆಪಿಎಸ್‍ಸಿ ಮಾಜಿ ಸದಸ್ಯ ಕೆ.ಮುಕುಡಪ್ಪ, ಆಂಧ್ರಪ್ರದೇಶ ಇಂದೂರ ಲೋಕಸಭಾ ಸದಸ್ಯ ಗೋರಂಟ್ಲಿ ಮಾಧವ್, ರಾಜ್ಯ ಮುಖಂಡ ಕೆ.ಬಿ.ಶಾಂತಪ್ಪ, ಹೋರಾಟ ಸಮಿತಿ ಖಜಾಂಚಿ ಕೆ.ಇ.ಕಾಂತೇಶ, ಡಿ.ವೆಂಕಟೇಶ ಮೂರ್ತಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷ ಜೀವೇಶ್ವರಿ ರಾಮಕೃಷ್ಣ, ಮುಖಂಡೆ ಮಹಾದೇವಿ ಕಳಕಪ್ಪ ಮಾತನಾಡಿದರು.

ಹೋರಾಟ ಸಮಿತಿಯ ಪದಾಧಿಕಾರಿಗಳಾದ ಟಿ.ಬಿ.ಬೆಳಗಾವಿ, ರಾಜೇಂದ್ರ ಸಣ್ಣಕ್ಕಿ, ರಾಮಲಿಂಗಪ್ಪ ಬಳ್ಳಾರಿ, ಎಂ.ಈರಣ್ಣ ಮಾನ್ವಿ, ಬಸವಂತಪ್ಪ, ಪಂಪಾಪತಿ, ಆಂಜನೇಯ, ತಾಲ್ಲೂಕು ಘಟಕದ ಅಧ್ಯಕ್ಷ ಫಕೀರಪ್ಪ ಬಾಗೋಡಿ, ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಪ್ಪ ಪೂಜಾರಿ ಇದ್ದರು.

ಎಂ.ದೊಡ್ಡಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಸಾಲಿಮಠ ಸಂಗಡಿಗರು ಪ್ರಾರ್ಥಿಸಿದರು. ವೀರೇಶ ಗೋನವಾರ, ನಿರುಪಾದೆಪ್ಪ ಗುಡಿಹಾಗಳ, ವಿ.ಬಸವರಾಜ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT