ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ವಿಜ್ಞಾನಿ ಲಲಿತಾಂಬಿಕಾಗೆ ಫ್ರಾನ್ಸ್‌ನ ಅತ್ಯುನ್ನತ ಪ್ರಶಸ್ತಿ

Published 29 ನವೆಂಬರ್ 2023, 16:18 IST
Last Updated 29 ನವೆಂಬರ್ 2023, 16:18 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ರೊ ವಿಜ್ಞಾನಿ ಹಾಗೂ ಗಗನಯಾನ ಯೋಜನೆಯ ವಿಭಾಗದ ಮಾಜಿ ನಿರ್ದೇಶಕಿ ವಿ.ಆರ್‌.ಲಲಿತಾಂಬಿಕಾ ಅವರಿಗೆ ಫ್ರಾನ್ಸ್‌ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಲಾಜಿಯನ್‌ ಡಿ ಹೊನ್ನೂರ್’ (ಲೀಜನ್ ಆಫ್ ಆನರ್) ಅನ್ನು ಪ್ರದಾನ ಮಾಡಲಾಗಿದೆ.

ಭಾರತ ಮತ್ತು ಫ್ರಾನ್ಸ್‌ ಮಧ್ಯೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕಾಗಿ ನಿರಂತರ ಸಹಕಾರ ನೀಡಿರುವುದನ್ನು  ಪರಿಗಣಿಸಿ ಮಂಗಳವಾರ ಫ್ರಾನ್ಸ್‌ ರಾಯಬಾರಿ ಥೆರಿ ಮಾಥೋ ಅವರು ಪ್ರಶಸ್ತಿ ಪ್ರದಾನ ಮಾಡಿದರು.

1802 ರಲ್ಲಿ ನೆಪೋಲಿಯನ್ ಬೋನಾಪಾರ್ಟೆ ಅವರು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಫ್ರಾನ್ಸ್‌ಗಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಯಾವುದೇ ದೇಶದ ಗಣ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಲಲಿತಾಂಬಿಕಾ ಅವರು ಉಡಾವಣಾ ವಾಹನದ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಇವರು ಇಸ್ರೊದ ವಿವಿಧ ಬಗೆಯ ರಾಕೆಟ್‌ಗಳ, ಅದರಲ್ಲೂ ಪಿಎಸ್‌ಎಲ್‌ವಿ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಭಾರತದಲ್ಲಿರುವ ಫ್ರಾನ್ಸ್‌ ರಾಯಭಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಭಾರತದ ಮಾನವ ಸಹಿತ ಗಗನಯಾನ ಯೋಜನೆಗೆ ಫ್ರಾನ್ಸ್‌ನ ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿಯ (ಸಿಎನ್‌ಇಎಸ್‌) ಸಹಕಾರ ಪಡೆಯುವಲ್ಲಿ 2018 ರಿಂದಲೂ ಅತ್ಯಂತ ನಿಕಟವಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಯೋಜನೆಗೆ ಸಿಎನ್‌ಇಎಸ್‌ ಮತ್ತು ಇಸ್ರೊ ಮಧ್ಯೆ ಒಪ್ಪಂದಕ್ಕೆ ಸಹಿ ಮಾಡುವಲ್ಲಿ ಲಲಿತಾಂಬಿಕಾ ಪ್ರಮುಖ ಪಾತ್ರವಹಿಸಿದ್ದಾರೆ. ಈ ಒಪ್ಪಂದದಡಿ ಬಾಹ್ಯಾಕಾಶ ಔಷಧ (ಸ್ಪೇಸ್ ಮೆಡಿಸಿನ್) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಎರಡೂ ದೇಶಗಳು ತಜ್ಞರ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲಲಿತಾಂಬಿಕಾ ಅವರು, ‘ನನಗೆ ಈ ಪ್ರಶಸ್ತಿ ಸಿಕ್ಕಿರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರವೇಶಿಸಲು ಮತ್ತು ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT