ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚುವರಿ ಡಿಸಿಎಂ: ಖರ್ಗೆ– ಡಿಕೆಶಿ ಚರ್ಚೆ?

Published 1 ಜುಲೈ 2024, 0:41 IST
Last Updated 1 ಜುಲೈ 2024, 0:41 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ರಾಜ್ಯ ಕಾಂಗ್ರೆಸ್‌ನಲ್ಲಿ ಹೇಳಿಕೆಗಳು ತಾರಕ್ಕೇರಿರುವ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ದೆಹಲಿಯಲ್ಲಿ ಭಾನುವಾರ ಭೇಟಿ ಮಾಡಿ ಸುದೀರ್ಘವಾಗಿ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಭೇಟಿ ಮಾಡಿದ್ದ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿಯೇ ಉಳಿದಿದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖರ್ಗೆಯವರನ್ನು ಶುಕ್ರವಾರವೇ ಭೇಟಿ ಮಾಡಿದ್ದರು. ಇಬ್ಬರು ನಾಯಕರೂ ಖರ್ಗೆ ಜೊತೆ ರಾಜ್ಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ಆ ಮೂಲಕ, ಹೆಚ್ಚುವರಿ ಉಪ ಮುಖ್ಯಮಂತ್ರಿ ನೇಮಕ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ‌‘ಕೈ’ ವರಿಷ್ಠರ ಅಂಗಳ ತಲುಪಿದೆ.

ಸಿದ್ದರಾಮಯ್ಯ ಆಪ್ತ ಬಣದಲ್ಲಿರುವ ಸಚಿವರು ಹೆಚ್ಚುವರಿ ಉಪ ಮುಖ್ಯಮಂತ್ರಿ ವಿಚಾರದಲ್ಲಿ ಆಗಾಗ ಪ್ರಸ್ತಾಪಿಸುತ್ತಿದ್ದಾರೆ. ನೋಟಿಸ್‌ ಕೊಟ್ಟು ಶಿಸ್ತು ಕ್ರಮ ಕೈಗೊಳ್ಳುವುವಾಗಿ ಎಚ್ಚರಿಕೆ ನೀಡಿದ ನಂತರವೂ ಸಚಿವ ಕೆ.ಎನ್‌.ರಾಜಣ್ಣ ಮಾತನಾಡುತ್ತಿದ್ದಾರೆ. ಇದರಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತಿದೆ. ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಈ ಬೆಳವಣಿಗೆ ಒಳ್ಳೆಯದಲ್ಲ. ಹೀಗಾಗಿ, ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಕಡಿವಾಣ ಹಾಕುವಂತೆ ಖರ್ಗೆ ಬಳಿ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ ಎಂದೂ ಗೊತ್ತಾಗಿದೆ.

ವಿಧಾನಸಭೆ ಚುನಾವಣೆಯ ಬಳಿಕ ಸರ್ಕಾರ ರಚನೆ ವೇಳೆ ಹೈಕಮಾಂಡ್‌ ನಾಯಕರ ಮಧ್ಯಸ್ಥಿಕೆಯಲ್ಲಿ ಚರ್ಚೆ ನಡೆದು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯ ನೇಮಕವಾಗಿದೆ. ಗೊಂದಲಗಳಿಲ್ಲದೆ ಲೋಕಸಭೆ ಚುನಾವಣೆ ಎದುರಿಸಲಾಗಿದೆ. ಈಗ ಕೆಲವು ನಾಯಕರು ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿಯ ಬಗ್ಗೆ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಇದರಿಂದ ಪಕ್ಷದಲ್ಲಿ ಭಿನ್ನಮತ ಹಾಗೂ ಗುಂಪುಗಾರಿಕೆ ತಲೆದೋರುವಂತಾಗಿದೆ ಎಂದೂ ಶಿವಕುಮಾರ್‌ ಹೇಳಿದ್ದಾರೆ ಎನ್ನಲಾಗಿದೆ. 

ರಾಜ್ಯದಲ್ಲಿ ಮೂರು ಕ್ಷೇತ್ರಗಳು (ಶಿಗ್ಗಾವಿ, ಸಂಡೂರು, ಚನ್ನಪಟ್ಟಣ) ಮತ್ತು ದಕ್ಷಿಣಕನ್ನಡ– ಉಡುಪಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಶೀಘ್ರದಲ್ಲಿ ಉಪ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಿದರು ಎಂದೂ ಮೂಲಗಳು ತಿಳಿಸಿವೆ.

ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಬೇಕೆಂಬ ಮಾತು ಕೇಳಿಬರುತ್ತಿದೆ. ಆದರೆ, ಈ ಚುನಾವಣೆಗಳು ಮುಗಿಯುವವರೆಗೆ ಅಧ್ಯಕ್ಷರ ಬದಲಾವಣೆ ಬೇಡ ಎಂದು ಡಿ.ಕೆ.ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT