ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಪೊಲೀಸ್ ರಾಜ್ಯವೇ?: ಹೈಕೋರ್ಟ್‌ ಚಾಟಿ

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:
Last Updated 26 ಜೂನ್ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೇಯೋ ಹೇಗೆ’ ಎಂದು ಕಿಡಿಕಾರಿರುವ ಹೈಕೋರ್ಟ್‌, ‘ಕರ್ನಾಟಕ ಪೊಲೀಸ್ ರಾಜ್ಯವಾಗಿದೆಯೇ’ ಎಂದು ಖಾರವಾಗಿ ಪ್ರಶ್ನಿಸಿದೆ.

ಜೆಡಿಎಸ್‌ ಮುಖಂಡರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ ಆರೋಪದಡಿ ಬಂಧನಕ್ಕೊಳಗಾಗಿರುವ, ‘ಟ್ರೋಲ್‌ ಮಗಾ‘ ಫೇಸ್‌ಬುಕ್‌ ಪುಟದ ಅಡ್ಮಿನ್‌ ಜಯಕಾಂತ್‌ ಅವರು ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ.ಅರುಣ್ ಶ್ಯಾಮ್, ‘ಪೊಲೀಸರು ಈ ಪ್ರಕರಣದಲ್ಲಿ ನಿಯಮಬಾಹಿರವಾಗಿ ನಡೆದುಕೊಂಡಿದ್ದಾರೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ‘ಶ್ರೀಸಾಮಾನ್ಯರು ರಸ್ತೆ ಮೇಲೆ ನಿರ್ಭಯವಾಗಿ ಓಡಾಡಲೂ ಆಗದಂತಹ ಸ್ಥಿತಿ ಇದೆ. ಅರ್ಜಿದಾರರು ಸೆಷನ್ಸ್‌ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೂ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿ ಪೊಲೀಸ್ ವಶದಲ್ಲಿ ಇರಿಸಿಕೊಳ್ಳಲಾಗುತ್ತದೆ ಎಂದರೆ ಏನರ್ಥ, ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತಿಲ್ಲವೇ’ ಎಂದು ಆಕ್ರೋಶ ಹೊರಹಾಕಿದರು. ಅರ್ಜಿದಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶಿಸಿದರು.

ಪ್ರಕರಣವೇನು?: ಜೆಡಿಎಸ್‌ ಮುಖಂಡರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಪೋಸ್ಟ್‌ಗಳನ್ನು 2019ರ ಮೇ 26ರಂದು ಟ್ರೋಲ್‌ ಮಗಾ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿ ತೇಜೋವಧೆಗೆ ಯತ್ನಿಸಲಾಗಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಪ್ರದೀಪ್‌ ಕುಮಾರ್‌ ಶ್ರೀರಾಮಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘ಜನರ ಸ್ವಾತಂತ್ರ್ಯ ಹತ್ತಿಕ್ಕುವುದಿಲ್ಲ’

ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ ಅವರು, ‘ಸರ್ಕಾರ ಅಥವಾ ಮುಖ್ಯಮಂತ್ರಿಗಳು ಸಾರ್ವಜನಿಕರ ಸ್ವಾತಂತ್ರ್ಯ ಹತ್ತಿಕ್ಕಲು ಬಯಸುವುದಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತಂತೆ ಇಂದು ಮಧ್ಯಾಹ್ನವಷ್ಟೇ ಗೃಹ ಮಂತ್ರಿಗಳು, ಕಾರ್ಯದರ್ಶಿಗಳ ನೇತೃತ್ವದಲ್ಲಿ ಪ್ರಾಸಿಕ್ಯೂಷನ್‌ ಸಭೆ ನಡೆಸಲಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

**

ದೂರು ನೀಡಿರುವ ವ್ಯಕ್ತಿ ಯಾರು ಎಂಬುದನ್ನು ಗಮನಿಸಿದರೆ ಸಾಕು, ಪೊಲೀಸರು ಈ ಪ್ರಕರಣದಲ್ಲಿ ಹೇಗೆ ನಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ.
- ಪಿ.ಎಸ್‌.ದಿನೇಶ್ ಕುಮಾರ್,ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT