ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ಆಹ್ವಾನ; ವಾರದಲ್ಲಿ ತೀರ್ಮಾನ: ಜಯಪ್ರಕಾಶ್ ಹೆಗ್ಡೆ

Published 6 ಮಾರ್ಚ್ 2024, 15:50 IST
Last Updated 6 ಮಾರ್ಚ್ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು:‘ಕಾಂಗ್ರೆಸ್ ಸೇರುವಂತೆ ಆ ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಹ್ವಾನಿಸಿದ್ದಾರೆ. ಸ್ನೇಹಿತರು, ಆಪ್ತರ ಜೊತೆ ಚರ್ಚಿಸಿ ಇನ್ನೊಂದು ವಾರದಲ್ಲಿ ಈ ಬಗ್ಗೆ ತೀರ್ಮಾನಿಸುತ್ತೇನೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಸುರ್ಜೇವಾಲಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಬಗ್ಗೆ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಭೇಟಿ ಮಾಡುವಂತೆ ಅವರು ಕರೆದಿದ್ದರು. ಹೀಗಾಗಿ ಭೇಟಿ ಮಾಡಿ, ಕೆಲವು ವಿಚಾರಗಳನ್ನು ಚರ್ಚಿಸಿದ್ದೇನೆ’ ಎಂದರು.

‘ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹಿತೈಷಿಗಳು ಹೇಳಿದರೆ ಕಣಕ್ಕಿಳಿಯುತ್ತೇನೆ. ಬೇಡವೆಂದರೆ ದೂರ ಸರಿಯಲು ಹಿಂದೇಟು ಹಾಕುವುದಿಲ್ಲ’ ಎಂದ ಅವರು, ‘ಬಿಜೆಪಿಯ ಯಾವೊಬ್ಬ ನಾಯಕರೂ ನನ್ನನ್ನು ಇದುವರೆಗೆ ಸಂಪರ್ಕಿಸಿಲ್ಲ. ನಾನೂ ಅವರನ್ನು ಭೇಟಿ ಮಾಡಿಲ್ಲ’ ಎಂದರು.

ಸಂಪುಟ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಬೇಕು: ‘ರಾಜ್ಯದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಬೇಕು’ ಎಂದು ಅವರು ಹೇಳಿದರು.

‘ಸಮೀಕ್ಷಾ ವರದಿ ಅವೈಜ್ಞಾನಿಕವಾಗಿದೆ ಎಂಬುದು ಸುಳ್ಳು. ಒಟ್ಟು 5.98 ಕೋಟಿ ಜನರ ಸಮೀಕ್ಷೆ ನಡೆಸಲಾಗಿದೆ’ ಎಂದರು.

‘ಸಮೀಕ್ಷೆ ನಡೆಸುವಾಗ ನನ್ನನ್ನು ಯಾರೂ ಭೇಟಿ ಮಾಡಿಲ್ಲ’ ಎಂದು ತುಮಕೂರಿನ ಸಿದ್ದಗಂಗಾ ಶ್ರೀ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಗ್ಡೆ, ‘ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಮನೆಯ ಸದಸ್ಯರಿಂದ ಅವರು ಮಾಹಿತಿ ಪಡೆದಿದ್ದಾರೆ. ಮನೆಯಲ್ಲಿ ಇಲ್ಲದ ವೇಳೆ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದಿರುತ್ತಾರೆ. ಹೀಗಾಗಿ, ತಮ್ಮನ್ನು ಭೇಟಿ ಮಾಡಿಲ್ಲವೆಂದು ಶ್ರೀಗಳು ಹೇಳಿರಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT