ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಕದ್ದ ಆರೋಪ: ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ಶಾಸಕ ಶಿವಲಿಂಗೇಗೌಡ

Last Updated 29 ಆಗಸ್ಟ್ 2022, 13:08 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ ಕೆಲವು ನಾಯಕರ ಹೇಳಿಕೆಯ ವಿರುದ್ಧ ಹಾಸನ ಜಿಲ್ಲೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸೋಮವಾರ ಧರ್ಮಸ್ಥಳದಲ್ಲಿ ಆಣೆ–ಪ್ರಮಾಣ ಮಾಡಿದರು.

ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಬಂದ ಅವರು, ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದರು. ಬೆಂಬಲಿಗರ ಜತೆ ಬಂದಿದ್ದ ಅವರು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ರಾಗಿ ಕಳ್ಳ ಅಂದಿದ್ದರು, ನಾನು ಏನೂ ಕದ್ದಿಲ್ಲ ಅಂತ ಆಣೆ– ಪ್ರಮಾಣ ಮಾಡಿದ್ದೇನೆ. ಯಾಕೆ ಈ ಆರೋಪ ಮಾಡಿದ್ದಾರೆ ಅನ್ನುವುದು ನನಗೇ ಗೊತ್ತಿಲ್ಲ. ರೈತರಿಗೆ ರಾಗಿ ಕೊಡಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆ. ಬಿಜೆಪಿ ಮುಖಂಡರು ನನ್ನ ವಿರುದ್ಧ ಆರೋಪ ಮಾಡಿದ್ದರು. ಅವರನ್ನೂ ಧರ್ಮಸ್ಥಳಕ್ಕೆ ಆಹ್ವಾನಿಸಿದ್ದೆ. ಈಗ ಅವರು ಏನು ದಾಖಲೆ ಇದೆ ಅದನ್ನು ಬಿಡುಗಡೆಗೊಳಿಸಲಿ. ನಿರಪರಾಧಿಗಳನ್ನು ಸಾರ್ವಜನಿಕರವಾಗಿ ನಿಂದನೆ ಮಾಡುವುದು ಸರಿಯಲ್ಲ’ ಎಂದರು.

‘ಜೆಡಿಎಸ್‌ ಜತೆ ಐದಾರು ತಿಂಗಳುಗಳಿಂದ ಅಂತರ ಕಾಯ್ದುಕೊಂಡಿದ್ದೇನೆ. ಅದಕ್ಕೆ ಕಾರಣವೂ ಇದೆ. ಧರ್ಮಸ್ಥಳಕ್ಕೆ ಭೇಟಿ ನೀಡುವ ವಿಚಾರವನ್ನು ವರಿಷ್ಠರ ಗಮನಕ್ಕೂ ತಂದಿಲ್ಲ. ಸ್ಥಳೀಯ ಮುಖಂಡರ ಜತೆ ಚರ್ಚಿಸಿ, ಬೆಂಬಲಿಗರ ಜತೆ ಬಂದಿದ್ದೆ. ಆಣೆ–ಪ್ರಮಾಣದ ವಿಚಾರವನ್ನು ವೀರೇಂದ್ರ ಹೆಗ್ಗಡೆ ಅವರ ಜತೆ ಚರ್ಚಿಸಿಲ್ಲ. ರಾಜ್ಯ ಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಅವರನ್ನು ಅಭಿನಂದಿಸಿದ್ದೇನೆ. ಸಾಕ್ಷಿ ಇಲ್ಲದೆ ಆರೋಪ ಮಾಡಿದಾಗ, ಮಂಜುನಾಥ ಮೇಲೆ ಆಣೆ ಮಾಡುವುದು ಲೋಕಾರೂಢಿಯ ಕ್ರಮ’ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯ ಪ್ರತಿಭಟನಾ ಸಭೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಾಗೂ ಎನ್.ಆರ್. ಸಂತೋಷ್ ಮಾಡಿದ್ದ ಆರೋಪಕ್ಕೆ ಪ್ರತಿಯಾಗಿ ಶಿವಲಿಂಗೇಗೌಡ ಪ್ರತಿಭಟನೆ ನಡೆಸಿ, ಧರ್ಮಸ್ಥಳಕ್ಕೆ ಬಂದು ಆಣೆ ಮಾಡುವ ಸವಾಲು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT