ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿ ಸಂಜೀವಿನಿ: ನೌಕರರ ಖಾಸಗಿ ಚಿಕಿತ್ಸೆಗೆ ₹ 82.72 ಕೋಟಿ

ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಗೆ ನಿರಾಸಕ್ತಿ* ‘ಜ್ಯೋತಿ ಸಂಜೀವಿನಿ’ಯಡಿ ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿ
Published 27 ಆಗಸ್ಟ್ 2023, 0:05 IST
Last Updated 27 ಆಗಸ್ಟ್ 2023, 0:05 IST
ಅಕ್ಷರ ಗಾತ್ರ

ಬೆಂಗಳೂರು: ನಗದು ರಹಿತ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಬಹುತೇಕ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಖಾಸಗಿ ಚಿಕಿತ್ಸೆಗೆ ಸರ್ಕಾರವು ಐದು ವರ್ಷಗಳಲ್ಲಿ ₹ 82.72 ಕೋಟಿ ವೆಚ್ಚ ಮಾಡಿದೆ. 

‘ಜ್ಯೋತಿ ಸಂಜೀವಿನಿ’ ಯೋಜನೆಯನ್ನು 2014-15ರಲ್ಲಿ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ ಫಲಾನುಭವಿಗಳು ನೇರವಾಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಕಳೆದ ಐದು ವರ್ಷಗಳಲ್ಲಿ 13,183 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 10,517 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಅವರ ಚಿಕಿತ್ಸಾ ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಆಸ್ಪತ್ರೆಗಳಿಗೆ ಪಾವತಿಸಿದೆ. 

ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆ ಹಾಗೂ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗಳತ್ತ ಸೆಳೆಯಲು ಸರ್ಕಾರವು 2018ರಲ್ಲಿ ‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ (ಎಬಿ–ಎಆರ್‌ಕೆ) ಪ್ರಾರಂಭಿಸಿದೆ. ಈ ಯೋಜನೆಯಡಿ‌ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದ್ದರೂ ಫಲಾನುಭವಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿರದಿದ್ದರೆ ಮಾತ್ರ ಶಿಫಾರಸು ಆಧಾರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಅವಕಾಶವಿದೆ. ‌ಆದರೆ, ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಈ ನಿರ್ಬಂಧವಿಲ್ಲ. ಇದರಿಂದಾಗಿ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ನಿರಾಸಕ್ತಿ ತಾಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ 2,666 ಮಂದಿ ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. 

ಚಿಕಿತ್ಸಾ ವೆಚ್ಚ ಹೆಚ್ಚಳ: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಒದಗಿಸುವ ಅನುದಾನದಡಿ, ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿನ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳುವವರು ಹಾಗೂ ಚಿಕಿತ್ಸಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2019–20ನೇ ಸಾಲಿನಲ್ಲಿ ಒಟ್ಟು 2,765 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದು, ಟ್ರಸ್ಟ್ 1,731 ಪ್ರಕರಣಗಳಲ್ಲಿ ₹ 11.42 ಕೋಟಿ ಪಾವತಿಸಿದೆ. 2022–23ರಲ್ಲಿ ಚಿಕಿತ್ಸೆ ಪಡೆದವರ ಒಟ್ಟು ಸಂಖ್ಯೆ 3,746ಕ್ಕೆ ಏರಿಕೆಯಾಗಿದೆ. 3,585 ಪ್ರಕರಣಗಳಲ್ಲಿ ₹ 23.92 ಕೋಟಿ ಪಾವತಿಸಲಾಗಿದೆ. 

ಯೋಜನೆಯಡಿ 272 ಆಸ್ಪತ್ರೆಗಳು ನೋಂದಾಯಿಸಲ್ಪಟ್ಟಿವೆ. ಇವುಗಳಲ್ಲಿ ಹೊರರಾಜ್ಯದ 27 ಆಸ್ಪತ್ರೆಗಳು ಸೇರಿವೆ. 2019ರಲ್ಲಿ ‘ಜ್ಯೋತಿ ಸಂಜೀವಿನಿ’ ಯೋಜನೆಯನ್ನು ‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ ಜತೆಗೆ ಸಂಯೋಜನೆಗೊಳಿಸಿ, ಆದೇಶ ಹೊರಡಿಸಲಾಗಿತ್ತು. ಇದರಿಂದಾಗಿ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾವಿರಕ್ಕೂ ಅಧಿಕ ಚಿಕಿತ್ಸಾ ವಿಧಾನಗಳು ಹೆಚ್ಚುವರಿಯಾಗಿ ಸಿಗುತ್ತಿವೆ. 

‘ಗಂಭೀರ ಕಾಯಿಲೆಗಳಿಗೆ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿಲ್ಲ. ಶಸ್ತ್ರಚಿಕಿತ್ಸೆಗಳಿಗೆ ಹಲವು ದಿನಗಳು ಕಾಯಬೇಕಾಗುತ್ತದೆ. ತಜ್ಞ ವೈದ್ಯರ ಕೊರತೆ ಸೇರಿ ವಿವಿಧ ಸಮಸ್ಯೆಗಳಿವೆ. ಸರ್ಕಾರವೇ ನೇರವಾಗಿ ಚಿಕಿತ್ಸಾ ವೆಚ್ಚ ಪಾವತಿಸುವುದರಿಂದ ಸಹಜವಾಗಿ ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ

‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಹೃದ್ರೋಗ, ಕ್ಯಾನ್ಸರ್‌, ಮೂತ್ರಪಿಂಡ ಸಮಸ್ಯೆ, ನರರೋಗ, ಸುಟ್ಟಗಾಯ, ಅಪಘಾತ ಹಾಗೂ ಮಕ್ಕಳ ಕಾಯಿಲೆ ಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಕಾಯಿಲೆಗಳಿಗೆ ಸಂಬಂಧಿಸಿದಂತೆ 450 ಚಿಕಿತ್ಸಾ ವಿಧಾನ ಹಾಗೂ 50 ಮುಂದುವರಿದ ಚಿಕಿತ್ಸಾ ಸೌಲಭ್ಯಗಳು ಮೊದಲು ದೊರೆಯುತ್ತಿದ್ದವು. ‘ಆಯುಷ್ಮಾನ್‌ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ ಜತೆಗೆ ಸಂಯೋಜಿಸಿದ ಬಳಿಕ 900 ತೃತೀಯ ಹಂತದ ಚಿಕಿತ್ಸಾ ವಿಧಾನ ಹಾಗೂ 169 ತುರ್ತು ಚಿಕಿತ್ಸಾ ವಿಧಾನಗಳು ಹೆಚ್ಚುವರಿಯಾಗಿ ಸಿಗುತ್ತಿವೆ. ವೈದ್ಯರ ಸಮಾಲೋಚನೆ, ಔಷಧವೂ ಯೋಜನೆಯಡಿ ಬರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT