ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಕಲಬುರ್ಗಿಯಲ್ಲೇ ಹೆಚ್ಚು

ರಾಜ್ಯದಲ್ಲಿ ಮೂರು ವರ್ಷದಲ್ಲಿ 584 ಪ್ರಕರಣ; ಆರ್‌ಟಿಐ ಅಡಿ ದೊರೆತ ಮಾಹಿತಿ
Published 5 ಆಗಸ್ಟ್ 2023, 6:01 IST
Last Updated 5 ಆಗಸ್ಟ್ 2023, 6:01 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿ ಮೂರು ವರ್ಷದಲ್ಲಿ 584 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಕಲಬುರ್ಗಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ, ಕೋಲಾರ, ಹಾವೇರಿ ನಂತರದ ಸ್ಥಾನದಲ್ಲಿವೆ.

ನಗರದ ‘ಒಡನಾಡಿ’ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಸಲ್ಲಿಸಿದ್ದ ಅರ್ಜಿಗೆ ಕಾನೂನು ಸೇವಾ ಪ್ರಾಧಿಕಾರವು ಜುಲೈನಲ್ಲಿ ನೀಡಿರುವ, 2020–21ನೇ ಸಾಲಿನಿಂದ ಇಲ್ಲಿವರೆಗಿನ ಜಿಲ್ಲಾವಾರು ಮಾಹಿತಿಯಲ್ಲಿ ಈ ಅಂಶವು ಗಮನ ಸೆಳೆದಿದೆ. //ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.//

ಈ ಮೂರು ಜಿಲ್ಲೆಗಳೊಂದಿಗೆ, 20ಕ್ಕೂ ಹೆಚ್ಚು ಪ್ರಕರಣಗಳು ನಡೆದಿರುವ ಜಿಲ್ಲೆಗಳ ಸಾಲಿನಲ್ಲಿ ಕ್ರಮವಾಗಿ ಬೆಂಗಳೂರು ನಗರ, ಮೈಸೂರು, ವಿಜಯಪುರ, ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ಗ್ರಾಮಾಂತರ, ಗದಗ, ರಾಯಚೂರು, ಉಡುಪಿ, ದಾವಣಗೆರೆ, ಉತ್ತರಕನ್ನಡ, ಚಿತ್ರದುರ್ಗ, ಚಾಮರಾಜನಗರ, ಕೊಡಗು ಜಿಲ್ಲೆ ಇವೆ.

ಅತಿ ಕಡಿಮೆ: ಹಾಸನ ಮತ್ತು ಯಾದಗಿರಿಯಲ್ಲಿ ತಲಾ ಒಂದು ಪ್ರಕರಣವಷ್ಟೇ ನಡೆದಿದೆ. ಉಳಿದಂತೆ, ಬಳ್ಳಾರಿ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಮಂಡ್ಯ, ಬಾಗಲಕೋಟೆಯಲ್ಲಿ ಒಂದಕ್ಕಿಂತ ಹೆಚ್ಚು– ಹತ್ತಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಪರಿಹಾರ: ಪ್ರಾಧಿಕಾರವು ಸಂತ್ರಸ್ತರ ಪರಿಹಾರ ನಿಧಿ ಅಡಿ ₹17.82 ಕೋಟಿ ಪರಿಹಾರ ಧನ ವಿತರಿಸಿದೆ. ಹೆಚ್ಚಿನ ಮೊತ್ತದ ಪರಿಹಾರವನ್ನು ಕಲಬುರ್ಗಿ, ಶಿವಮೊಗ್ಗ, ಕೋಲಾರ, ಹಾವೇರಿ ಸಂತ್ರಸ್ತರಿಗೆ ವಿತರಿಸಲಾಗಿದೆ.

ಸಂತ್ರಸ್ತರ ಪುನರ್ವಸತಿ ಮಾಪನವೇ ಇಲ್ಲ!

‌‘ಮೂರು ವರ್ಷದಲ್ಲಿ ನಡೆದಿರುವ ದೌರ್ಜನ್ಯ ಪ್ರಕರಣಗಳನ್ನು ಗಮನಿಸಿದರೆ, ರಾಜ್ಯದ ಮಕ್ಕಳು ಕ್ಷೇಮವಾಗಿಲ್ಲ ಎಂಬ ಆತಂಕ ಮೂಡುತ್ತದೆ. ನ್ಯಾಯಾಲಯವು ಅವರಿಗೆ ಪರಿಹಾರವನ್ನೇನೋ ಕೊಡುತ್ತದೆ. ಆದರೆ, ಅವರ ಯಾತನೆಯನ್ನು ಅಳೆಯುವುದು ಹೇಗೆ? ಅವರಿಗೆ ಮಾನವೀಯ ನೆಲೆಯ ಪುನರ್ವಸತಿಯನ್ನು ಕಲ್ಪಿಸುವ, ಪರಿಶೀಲಿಸುವ ಮಾಪನವೇ ಇಲ್ಲವಾಗಿದೆ’ ಎನ್ನುತ್ತಾರೆ ಒಡನಾಡಿ ಸಂಸ್ಥೆಯ ನಿರ್ದೇಶಕ ಎಂ.ಎಲ್‌.ಪರಶುರಾಮ್.

‘ಮಕ್ಕಳ ಮೇಲಿನ ದೌರ್ಜನ್ಯಗಳ ಕುರಿತು ಜನಪ್ರತಿನಿಧಿಗಳು ಶಾಸನಸಭೆಗಳಲ್ಲಿ ದನಿ ಎತ್ತುತ್ತಿಲ್ಲ. ಆರೋಪ ಸಾಬೀತಾದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯತ್ತ ಹೆಚ್ಚಿನ ಗಮನ ಹರಿಸಬೇಕು. ಅವರ ಕುಟುಂಬಗಳ ಸಾಮಾಜಿಕ ಸಂಕಟವನ್ನು ನಿವಾರಿಸಲು ನೆರವಾಗಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಅತ್ಯಂತ ಹಿಂದುಳಿದ ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲೇ ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯ ನಡೆದಿರುವುದು ಆತಂಕಕಾರಿ
-ಎಂ.ಎಲ್‌.ಪರಶುರಾಮ್‌, ಒಡನಾಡಿ ಸಂಸ್ಥೆಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT