ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡೂರಿ ನಾಲಾ ತಿರುವು: ರಾಜ್ಯ ಸರ್ಕಾರದ ಪ್ರಸ್ತಾವನೆ ವಾಪಸ್‌ ಕಳುಹಿಸಿದ ಕೇಂದ್ರ

ಗೋವಾದ ‘ಹಳೆ’ ಪತ್ರಕ್ಕೆ ಪ್ರತಿಕ್ರಿಯೆ ನೀಡುವಂತೆ ಅರಣ್ಯ ಸಚಿವಾಲಯ ಸೂಚನೆ
Published : 9 ಸೆಪ್ಟೆಂಬರ್ 2024, 20:31 IST
Last Updated : 9 ಸೆಪ್ಟೆಂಬರ್ 2024, 20:31 IST
ಫಾಲೋ ಮಾಡಿ
Comments

ನವದೆಹಲಿ: ಮಹದಾಯಿ ಯೋಜನೆಯ ಭಾಗವಾದ ಬಂಡೂರಿ ನಾಲೆ ತಿರುವು ಯೋಜನೆಗೆ 71 ಎಕರೆ ಅರಣ್ಯ ಭೂಮಿ ಬಳಸಲು ಅನುಮೋದನೆ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ವಾಪಸ್‌ ಕಳುಹಿಸಿದೆ. ಗೋವಾ ಸರ್ಕಾರ 2023ರ ಜನವರಿಯಲ್ಲಿ ಬರೆದ ಪತ್ರಕ್ಕೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ರಾಜ್ಯಕ್ಕೆ ಸೂಚಿಸಿದೆ.

ಮಹದಾಯಿ ಜಲವಿವಾದ ನ್ಯಾಯಮಂಡಳಿಯು 2018ರ ಆಗಸ್ಟ್‌ 14ರಂದು ಕಳಸಾ–ಬಂಡೂರಿ ಯೋಜನೆಗೆ 3.90 ಟಿಎಂಸಿ ಅಡಿ ನೀರಿನ ಹಂಚಿಕೆ ಮಾಡಿದೆ. ಇದರಲ್ಲಿ ಬಂಡೂರಿ ನಾಲಾ ತಿರುವು ಯೋಜನೆಗೆ 2.18 ಟಿಎಂಸಿ ಅಡಿ ಮೀಸಲಿಡಲಾಗಿದೆ. ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮೂರು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌ಗೆ) ಒಪ್ಪಿಗೆ ನೀಡಬೇಕು ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌ ಅವರು ಜುಲೈ 23ರಂದು ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪರಿಸರ ಸಚಿವಾಲಯವು ಆಗಸ್ಟ್‌ 21ರಂದು ಪ್ರಸ್ತಾವನೆಯನ್ನು ವಾಪಸ್‌ ಕಳುಹಿಸಿದೆ. 

ಗೋವಾದ ಆಕ್ಷೇಪವೇನು?: ಕಳಸಾ–ಬಂಡೂರಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಗೋವಾ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅವರು 2023ರ ಜನವರಿ 24ರಂದು ಪತ್ರ ಬರೆದಿದ್ದರು. ‘ಮಹದಾಯಿ ನದಿಯು ಮಹದಾಯಿ ವನ್ಯಜೀವಿ ಧಾಮ, ಭೀಮಗಡ ವನ್ಯಜೀವಿಧಾಮ, ಭಗವಾನ್‌ ಮಹಾವೀರ ವನ್ಯಜೀವಿಧಾಮ ಹಾಗೂ ಸಲೀಂ ಅಲಿ ಪಕ್ಷಿಧಾಮದ ಮೂಲಕ ಹರಿದು ಹೋಗುತ್ತಿದೆ. ಒಂದು ವೇಳೆ, ನದಿ ತಿರುವು ಯೋಜನೆ ಕೈಗೆತ್ತಿಕೊಂಡರೆ ವನ್ಯಜೀವಿಧಾಮಗಳಿಗೆ ಹಾನಿಯಾಗಲಿದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಉಲ್ಲಂಘನೆಯಾಗಲಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದರು. 

‘ಯೋಜನೆಯ ಕಾಮಗಾರಿ ಕೈಗೆತ್ತಿಕೊಳ್ಳದಂತೆ ಗೋವಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಕರ್ನಾಟಕ ಸರ್ಕಾರಕ್ಕೆ 2023ರ ಜನವರಿ 9ರಂದು ಷೋಕಾಸ್‌ ನೋಟಿಸ್‌ ನೀಡಿದ್ದಾರೆ. ಜತೆ, ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಒಂದು ವೇಳೆ, ಯೋಜನೆ ಕೈಗೆತ್ತಿಕೊಂಡರೆ ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ, ಯೋಜನೆಗೆ ಅರಣ್ಯ ಬಳಕೆಗೆ ಒಪ್ಪಿಗೆ ಕೊಡಬಾರದು’ ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಪರಿಸರ ಸಚಿವಾಲಯ 2023ರ ಜನವರಿ 31ರಂದು ಸೂಚಿಸಿತ್ತು. 

ಸಮಜಾಯಿಷಿ ನೀಡಿದ್ದ ರಾಜ್ಯ: ಬಂಡೂರಿ ನಾಲಾ ತಿರುವು ಯೋಜನಾ ಸ್ಥಳಕ್ಕೆ ಬೆಳಗಾವಿ ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು 2024ರ ಫೆಬ್ರುವರಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ಈ ಪ್ರದೇಶದ ಸುತ್ತ ಹುಲಿ, ಚಿರತೆ, ಕರಡಿ, ಕಾಡುಕೋಣ, ಜಿಂಕೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ಕಂಡುಬಂದಿವೆ. ಈ ಪ್ರದೇಶವು ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಪ್ರದೇಶ ಹಾಗೂ ಆನೆ ಕಾರಿಡಾರ್‌ನ ಭಾಗ ಅಲ್ಲ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.

‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅಧಿಸೂಚಿಸಿದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೂ ಈ ಪ್ರದೇಶ ಬರುವುದಿಲ್ಲ. ಈ ಯೋಜನೆಯ ಅನುಷ್ಠಾನದಿಂದ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಉಲ್ಲಂಘನೆ ಆಗುವುದಿಲ್ಲ. ಕುಡಿಯುವ ನೀರು ಒದಗಿಸುವ ಉದ್ದೇಶದ ಈ ಯೋಜನೆಗಾಗಿ ಕನಿಷ್ಠ ಪ್ರಮಾಣದ ಅರಣ್ಯ ಬಳಕೆ ಮಾಡಲಾಗುತ್ತದೆ’ ಎಂದು ರಾಜ್ಯ ಸರ್ಕಾರವು ಪರಿಸರ ಸಚಿವಾಲಯಕ್ಕೆ ಪ್ರತಿಕ್ರಿಯೆ ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT