ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ಕನ್ನಡ ಹೆಸರು, ಅಂಕಿ, ಸಹಿ ಅಭಿಯಾನ

Published 24 ಜೂನ್ 2023, 16:10 IST
Last Updated 24 ಜೂನ್ 2023, 16:10 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ವತಿಯಿಂದ ಕನ್ನಡ ಹೆಸರು, ಅಂಕಿ ಮತ್ತು ಸಹಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಪರಿಷತ್ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ. 

‘ಕನ್ನಡವನ್ನು ಎಲ್ಲಾ ಸ್ತರಗಳಲ್ಲಿಯೂ ನೆಲೆಗೊಳಿಸಲು ಈ ಅಭಿಯಾನ ಸಹಕಾರಿಯಾಗಲಿದೆ. ಹಿರಿಯರ, ಸಾಧಕರ, ಕನ್ನಡ ನಾಡಿಗೆ ಕೊಡುಗೆ ನೀಡಿದವರ ಹೆಸರುಗಳನ್ನು ರಸ್ತೆಗಳಿಗೆ, ಬಡಾವಣೆಗೆ ಇಡುವ ಪದ್ಧತಿ ಮೊದಲಿಂದಲೂ ಇದೆ. ಆದರೆ, ಕ್ರಮೇಣ ಆಂಗ್ಲ ಭಾಷೆಯಲ್ಲಿ ಹೃಸ್ವಗೊಳ್ಳುವ ಈ ಹೆಸರುಗಳು, ಮೂಲ ಅರ್ಥದ ಸಾಧ್ಯತೆಯಿಂದ ದೂರವಾಗುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಮಹಾತ್ಮಾ ಗಾಂಧಿ ರಸ್ತೆ ಈಗ ಎಂ.ಜಿ.ರಸ್ತೆಯಾಗಿದೆ. ಕೃಷ್ಣರಾಜ ಒಡೆಯರ ಹೆಸರಿನ ರಸ್ತೆ ಕೆ.ಆರ್.ರಸ್ತೆ, ನರಸಿಂಹರಾಜ ಒಡೆಯರ್ ಅವರ ಹೆಸರಿನ ಬಡಾವಣೆ ಎನ್.ಆರ್.ಕಾಲೊನಿಯಾಗಿ ಬಳಕೆಯಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

‘ಕನ್ನಡ ಬರಹಗಾರರಲ್ಲಿ ಡಿ.ವಿ.ಗುಂಡಪ್ಪ ಅವರ ಹೆಸರನ್ನು ಡಿ.ವಿ.ಜಿ ಎಂದು ಬರೆಯುವ ಪದ್ಧತಿ ಜನಜನಿತವಾಗಿದ್ದು, ಅವರ ಮೂಲ ಹೆಸರೇ ಮರೆಯಾಗುವ ಅಪಾಯವಿದೆ. ಇದೇ ರೀತಿ ಕೆಲ ಸಾಹಿತಿಗಳ ಹೆಸರನ್ನು ಬಳಕೆ ಮಾಡಲಾಗುತ್ತಿದೆ. ಸೌತ್ ಎಂಡ್ ಸರ್ಕಲ್‌ಗೆ ತೀ.ನಂ.ಶ್ರೀ ವೃತ್ತ ಎಂದು ಬಿಬಿಎಂಪಿ ಅಧಿಕೃತವಾಗಿ ನಾಮಕರಣ ಮಾಡಿದ್ದರೂ ಅದು ಜನಜನಿತವಾಗಿಲ್ಲ. ಟ್ಯಾಂಕ್ ಬಂಡ್ ರಸ್ತೆಗೆ ಆರ್.ನಾಗೇಂದ್ರ ರಾಯರ ಹೆಸರನ್ನು ಇಟ್ಟಿದ್ದರೂ ಅದು ಬಳಕೆಗೆ ಬಂದಿಲ್ಲ. ಇಂತಹ ಹಲವು ದೋಷಗಳನ್ನು ಪಟ್ಟಿ ಮಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು. 

‘ಕನ್ನಡದಲ್ಲಿ ಸಹಿ ಮಾಡುವ ಅಭಿಯಾನ ಸಹ ಪರಿಷತ್ತು ರೂಪಿಸಲಿದೆ. ಕನ್ನಡವನ್ನು ಎಲ್ಲಾ ಹಂತದಲ್ಲಿಯೂ ಸ್ಥಾಪಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನ್ನಡ ಹೆಸರು, ಅಂಕಿ ಮತ್ತು ಸಹಿ ಅಭಿಯಾನವು ಕನ್ನಡ ತಾಯಿ ಭುವನೇಶ್ವರಿಯ ನೆಲವೀಡಾದ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಚಾಲನೆ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT