ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ ಪಟ್ಟು: ಕಲಾಪಕ್ಕೆ ಬಿಕ್ಕಟ್ಟು: ಎರಡನೇ ದಿನವೂ ನಡೆಯದ ಕಲಾಪ

ಧರಣಿ ಮುಂದುವರಿಸಿದ ಕಾಂಗ್ರೆಸ್‌
Last Updated 23 ಮಾರ್ಚ್ 2021, 20:28 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದೆನ್ನಲಾದ ಸಿ.ಡಿ ಪ್ರಕರಣದ ತನಿಖೆಯನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲೇ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ವಿಧಾನಸಭೆಯಲ್ಲಿ ಮಂಗಳವಾರ ಎರಡನೇ ದಿನವೂ ಧರಣಿ ನಡೆಸಿದರು.

ಧರಣಿ ಕಾರಣಕ್ಕೆ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು. ಕೂಗಾಟದ ಮಧ್ಯೆ ಮೂರು ಮಸೂದೆ
ಗಳಿಗೆ ಅಂಗೀಕಾರ ಪಡೆದಿದ್ದು ಬಿಟ್ಟರೆ ಉಳಿದ ಕಲಾಪವನ್ನು ಗದ್ದಲವೇ ತಿಂದುಬಿಟ್ಟಿತು. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ‘ಸ್ವತಂತ್ರ ತನಿಖೆ’ ನಡೆಸಬೇಕು ಎಂಬ ಸೋಮವಾರದ ಪಟ್ಟನ್ನು ಸಡಿಲಿಸಿದ ಕಾಂಗ್ರೆಸ್‌, ಎಸ್‌ಐಟಿ ತನಿಖೆ ನಡೆಯಲಿ, ಆದರೆ ಮೇಲುಸ್ತುವಾರಿ ಹೈಕೋರ್ಟ್‌ ನ್ಯಾಯಮೂರ್ತಿ ಅವರದ್ದೇ ಆಗಿರಬೇಕು ಒಂದು ಒತ್ತಾಯಿಸಿತು. ಸರ್ಕಾರ ಅದಕ್ಕೆ ಒಪ್ಪಲಿಲ್ಲ. ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದ ಕಾಂಗ್ರೆಸ್‌ ಸದಸ್ಯರು, ಸಿ.ಡಿಗಳನ್ನು ಪ್ರದರ್ಶಿಸಿ ಘೋಷಣೆ ಕೂಗಲು ಆರಂಭಿಸಿದರು.

‘ಸರ್ಕಾರದ ವಿರುದ್ಧ ವಿರೋಧ ಇದ್ದರೆ, ಸದನದ ಹೊರಗೆ ಪ್ರತಿಭಟನೆ ಮಾಡಿ. ಇಲ್ಲಿ ಕಲಾಪ ನಡೆಯಲು ಬಿಡಿ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು. ಈ ಮಧ್ಯೆ ಕಲಾಪ ಮುಂದೂಡಿ ಸಂಧಾನವನ್ನೂ ಕಾಗೇರಿ ನಡೆಸಿದರು. ಕಾಂಗ್ರೆಸ್‌ ತನ್ನ ಪಟ್ಟು ಸಡಿಲಿಸಲಿಲ್ಲ. ಮತ್ತೆ ಕಲಾಪ ಸೇರಿದಾಗಲೂ ಧರಣಿ, ಧಿಕ್ಕಾರ ಮುಂದುವರಿಯಿತು.

‘ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಬೇಡಿಕೆ ಒಪ್ಪುವವರೆಗೂ ಧರಣಿ ಬಿಟ್ಟುಕದಲುವ ಪ್ರಶ್ನೆಯೇ ಇಲ್ಲ’ ಎಂದು ವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಹೇಳಿದರು.

‘ಸಿ.ಡಿ ಸರ್ಕಾರಕ್ಕೆ ಧಿಕ್ಕಾರ’, ‘ಬ್ಲೂಬಾಯ್ಸ್‌’, ‘ಸಿ.ಡಿಸಂಸ್ಕೃತಿ–ಹಿಂದೂ ಸಂಸ್ಕೃತಿಯಲ್ಲ’ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಇದರಿಂದ ಹುರುಪುಗೊಂಡ ಸಿದ್ದರಾಮಯ್ಯ ಅವರೂ ‘ಅಯ್ಯಯ್ಯೋ.. ಸರ್ಕಾರ ಅಯ್ಯಯ್ಯೋ..’ ಎಂದು ಕೂಗು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT