ಬೆಂಗಳೂರು: ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮತ್ತು ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕಗೊಳ್ಳುವ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರನ್ನು ಲಾಭದಾಯಕ ಹುದ್ದೆ ಹೊಂದಿದ ಆರೋಪದಡಿ ಅನರ್ಹತೆಯಿಂದ ರಕ್ಷಿಸುವ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ– 2023ಕ್ಕೆ ವಿಧಾನಸಭೆ ಶುಕ್ರವಾರ ಅಂಗೀಕಾರ ನೀಡಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಶಿರಾ ಶಾಸಕ ಟಿ.ಬಿ. ಜಯಚಂದ್ರ ನೇಮಕಗೊಂಡಿದ್ದಾರೆ. ಇಬ್ಬರಿಗೂ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿದೆ. ಲಾಭದಾಯಕ ಹುದ್ದೆ ಹೊಂದಿದ ಆರೋಪದಡಿ ಅನರ್ಹತೆಯ ಸಂಕಷ್ಟ ಎದುರಾಗಬಹುದು ಎಂಬ ಭೀತಿಯಿಂದ ಇಬ್ಬರೂ ಅಧಿಕಾರ ಸ್ವೀಕರಿಸಿಲ್ಲ.
2023ರ ಮೇ 20ರಿಂದ ಪೂರ್ವಾನ್ವಯ ಆಗುವಂತೆ ಈ ತಿದ್ದುಪಡಿ ಜಾರಿಗೆ ಬರಲಿದೆ. ಲಾಭದಾಯಕ ಹುದ್ದೆ ವ್ಯಾಪ್ತಿಯಿಂದ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮತ್ತು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹುದ್ದೆಗಳನ್ನು ಹೊರಗಿಡುವ ತಿದ್ದುಪಡಿಯನ್ನು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ಕಾಯ್ದೆ–1956ಕ್ಕೆ ಸೇರಿಸಲಾಗಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ಈ ಮಸೂದೆಯನ್ನು ಮಂಡಿಸಿದರು. ‘ಎರಡೂ ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಆಗಿದೆ. ಮೊದಲು, ಆ ನೇಮಕಾತಿಗಳನ್ನು ಹಿಂಪಡೆಯಿರಿ. ಬಳಿಕ ತಿದ್ದುಪಡಿಗೆ ಅಂಗೀಕಾರ ನೀಡಬಹುದು. ಆ ಬಳಿಕ ಪುನಃ ನೇಮಕಾತಿ ಮಾಡಿ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
‘ಮೇ 20ರಿಂದಲೇ ಪೂರ್ವಾನ್ವಯ ಆಗುವಂತೆ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ. ಹೀಗಾಗಿ ನೇಮಕಾತಿ ಹೊಂದಿದವರಿಗೆ ಯಾವುದೇ ತೊಡಕು ಎದುರಾಗುವುದಿಲ್ಲ’ ಎಂದು ಪಾಟೀಲ ಸ್ಪಷ್ಟನೆ ನೀಡಿದರು. ಬಳಿಕ ಮಸೂದೆಗೆ ಅಂಗೀಕಾರ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.