ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುದ್ದಿ ವಿಶ್ಲೇಷಣೆ: ರಾಜ್ಯ ಬಿಜೆಪಿ ಸ್ಥಿತಿ ‘ತಬ್ಬಲಿಯು ನೀನಾದೆ ಮಗನೇ’

ಎಸ್‌.ರವಿಪ್ರಕಾಶ್ ವಿಶೇಷ ವರದಿ
Published : 20 ಆಗಸ್ಟ್ 2023, 22:44 IST
Last Updated : 20 ಆಗಸ್ಟ್ 2023, 22:44 IST
ಫಾಲೋ ಮಾಡಿ
Comments

ಬೆಂಗಳೂರು: ವಿಧಾನಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿಗೆ ಈಗ ನಾಯಕತ್ವದ ಶೂನ್ಯತೆಯ ‘ಗ್ರಹಣ’ದಂತೆ ಬಾಧಿಸಿದೆ. ಪಕ್ಷ ಮುನ್ನಡೆಸುವ ನಾಯಕರಿಲ್ಲದೇ ‘ತಬ್ಬಲಿಯು ನಿನಾದೆ ಮಗನೇ’ ಎಂಬ ಸ್ಥಿತಿಗೆ ಬಂದು ನಿಂತಿದೆ.

ಬಿಜೆಪಿಯ ಒಂದಷ್ಟು ಶಾಸಕರು ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕೊನೇ ಹಂತದಲ್ಲಿ ಯಡಿಯೂರಪ್ಪ ಅವರೇ ಮಧ್ಯ ಪ್ರವೇಶಿಸಬೇಕಾಗಿದೆ. ಮತ್ತೊಂದೆಡೆ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಶಾಸಕ ಪ್ರಭು ಚವ್ಹಾಣ್ ನಡುವಿನ ಜಗಳ ತಾರಕಕ್ಕೇರಿದೆ. ಲೋಕಸಭಾ ಚುನಾವಣೆಗೆ 8 –9 ತಿಂಗಳು ಬಾಕಿ ಇದ್ದರೂ ಕಾರ್ಯಕರ್ತರಲ್ಲೂ ಉತ್ಸಾಹವೇ ಕಾಣುತ್ತಿಲ್ಲ. 

ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಶಿವರಾಮ ಹೆಬ್ಬಾರ್‌ ಅವರು ಪಕ್ಷದಿಂದ ಒಂದು ಕಾಲನ್ನು ಹೊರತೆಗೆದಿದ್ದಾರೆ. ಕಳೆದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಪಕ್ಷದ ಸ್ಥಳೀಯ ನಾಯಕರು ಪ್ರಯತ್ನಿಸಿದ್ದರು. ಆ ಬಗ್ಗೆ ದೂರು ನೀಡಿದ್ದರೂ ಪಕ್ಷ ಯಾವುದೇ ಕ್ರಮ ಜರುಗಿಸಿಲ್ಲ. ಪಕ್ಷದಲ್ಲಿ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ಪಕ್ಷ ತೊರೆದು ಹೋಗುವವರನ್ನು ತಡೆಯಲು ಬಿ.ಎಸ್‌.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಂದಾಗಿದ್ದು, ಅವರ ಮನವೊಲಿಸುವ ಕಸರತ್ತು ನಡೆಸಿದ್ದಾರೆ. 

‘ಕೇಂದ್ರ ಸಚಿವ ಭಗವಂತ ಖೂಬಾ ತಮ್ಮ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆ’ ಎಂದು ಶಾಸಕ ಪ್ರಭು ಚವ್ಹಾಣ್ ಆರೋಪ ಮಾಡಿದ್ದಾರೆ. ‘ಅವರ ಹತ್ಯೆ ಆದರೆ ನಾನು ಜವಾಬ್ದಾರನಲ್ಲ. ನಾನು ಅಂತ ಕೃತ್ಯಗಳನ್ನು ಮಾಡುವವನಲ್ಲ’ ಎಂದು ಖೂಬಾ ಹೇಳಿದ್ದಾರೆ. ಆದರೆ, ಇವರಿಬ್ಬರ ಬೀದಿ ರಂಪಾಟವನ್ನು ಬಗೆಹರಿಸಲು ಯಾವುದೇ ನಾಯಕರು ಮುಂದಾಗಿಲ್ಲ. ಈ ವಿದ್ಯಮಾನ ಪಕ್ಷದ ಹಲವು ನಾಯಕರಿಗೆ ಮುಜುಗರ ಉಂಟು ಮಾಡಿದೆ.

ವಿಧಾನಸಭೆ ಮತ್ತು ವಿಧಾನಪರಿಷತ್ತಿಗೆ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡುವ ಬಗ್ಗೆ ಪಕ್ಷದ ವರಿಷ್ಠರೂ ತಲೆ ಕೆಡಿಸಿಕೊಂಡಿಲ್ಲ. ರಾಜ್ಯದ ಯಾವುದೇ ನಾಯಕರನ್ನು ಭೇಟಿ ಮಾಡಲು ವರಿಷ್ಠರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ದಿಕ್ಕು ದೆಸೆ ಇಲ್ಲದೆ ಕಂಗೆಟ್ಟು ನಿಂತಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷದ ಸೋಲು– ಗೆಲುವಿನ ಸರಿಯಾದ ಚಿತ್ರಣ ನೀಡದೇ ದಾರಿ ತಪ್ಪಿಸಲಾಗಿದೆ ಎಂದು  ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರ ಅಮಿತ್‌ ಶಾ ಅವರು ಕರ್ನಾಟಕ ಮೂಲದ ಕೇಂದ್ರ ಸಚಿವರ ಬಗ್ಗೆ ಗರಂ ಆಗಿದ್ದಾರೆ. ಯಾರನ್ನೂ ಭೇಟಿ ಮಾಡಲು ಬಯಸುತ್ತಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದರೂ ಬಿಜೆಪಿಯ ಅಷ್ಟೇನೂ ಪ್ರಮುಖರಲ್ಲದ ನಾಯಕರ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟರೆ, ವ್ಯವಸ್ಥಿತ ಹೋರಾಟ ರೂಪಿಸುವ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಬಸವರಾಜ ಬೊಮ್ಮಾಯಿ ಅವರು ತಮ್ಮ ಇತಿಮಿತಿಯಲ್ಲಿ ಸರ್ಕಾರದ ವಿರುದ್ಧ ಕೆಲವು ಹೋರಾಟಗಳ ಮುಂಚೂಣಿ ವಹಿಸಿದ್ದರು.  ಪಕ್ಷದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪಕ್ಷದ ಕಾರ್ಯಲಯಕ್ಕೆ ಬಂದು ಹೋಗುತ್ತಿದ್ದಾರೆ. ಮುಂದೇನು ಮಾಡಬೇಕು ಎಂದು ಮಾರ್ಗದರ್ಶನ ಮಾಡುವ ಸ್ಥಾನದಲ್ಲಿ ಈಗ ಯಾರೂ ಇಲ್ಲ. 

ಕರ್ನಾಟಕ ಬಿಜೆಪಿಯ ಎಲ್ಲ ಆಗು ಹೋಗುಗಳಲ್ಲಿ ಮೂಗು ತೂರಿಸಿ, ಪರೋಕ್ಷವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ದೆಹಲಿಯ ನಾಯಕರೊಬ್ಬರು ಈಗ ಮೌನಕ್ಕೆ ಶರಣಾದಂತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪ್ರತಿ 15 ದಿನಗಳಿಗೊಮ್ಮೆ ಬಂದು ಸಭೆಗಳನ್ನು ಮಾಡಿಹೋಗುತ್ತಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಕೂಡಾ ಪತ್ತೆ ಇಲ್ಲ.

ರಾಜ್ಯ ಬಿಜೆಪಿಯಲ್ಲಿ ಇಂತಹದ್ದೊಂದು ಶೂನ್ಯ ಸ್ಥಿತಿ ಹಿಂದೆಂದೂ ನಿರ್ಮಾಣವಾಗಿರಲಿಲ್ಲ.  ಹಲವು ಚುನಾವಣೆಗಳಲ್ಲಿ ಪಕ್ಷ ಸೋತಾಗಲೂ ನಾಯಕರು ಧೃತಿಗೆಟ್ಟಿರಲಿಲ್ಲ. ಕಾರ್ಯಕರ್ತರಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಪುಟಿದೆದ್ದು, ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆಗ ಅನಂತಕುಮಾರ್‌, ಬಿ.ಎಸ್‌. ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಡಿ.ಎಚ್‌.ಶಂಕರಮೂರ್ತಿ, ಜಗದೀಶ ಶೆಟ್ಟರ್‌, ಡಿ.ವಿ.ಸದಾನಂದಗೌಡ, ಮತ್ತಿತರ ನಾಯಕರು ಪಕ್ಷವನ್ನು ಸಾಮೂಹಿಕವಾಗಿ ಮುನ್ನಡೆಸುತ್ತಿದ್ದರು. ಈಗ ಮುಂಚೂಣಿಯಲ್ಲಿರುವ ನಾಯಕರು ಆ ಎತ್ತರವನ್ನು ತಲುಪಲು ಸಾಧ್ಯವಾಗಿಲ್ಲ. ಕೇಂದ್ರ ಸಚಿವರ ಪೈಕಿ ಯಾರಲ್ಲೂ ಪ್ರಬಲ ನಾಯಕತ್ವದ ಲಕ್ಷಣಗಳಿಲ್ಲ. ಯಾರಿಗೂ ಜವಾಬ್ದಾರಿ ಕೊಡದ ಕಾರಣ ಮುನ್ನುಗ್ಗಿ ಕೆಲಸ ಮಾಡುವ ಸ್ಥಿತಿಯಲ್ಲಿ ಯಾವ ನಾಯಕರೂ ಇಲ್ಲ. 

ಇತ್ತೀಚೆಗೆ ಬಿ.ಎಸ್‌.ಯಡಿಯೂರಪ್ಪ ಅವರ ಮನೆಯಲ್ಲಿ ಸಭೆ ನಡೆದಾಗ, ಮುಂದಿನ ವ್ಯವಸ್ಥೆ ಆಗುವವರೆಗೆ ನೀವೇ ನಾಯಕತ್ವ ವಹಿಸಿಕೊಂಡು, ಮಾರ್ಗದರ್ಶನ ಮಾಡಬೇಕು ಎಂದು ಹಲವು ನಾಯಕರು ಅವರಲ್ಲಿ ಮನವಿ ಮಾಡಿದ್ದಾರೆ. ಇದು ಪಕ್ಷದ ಇಂದಿನ ಸ್ಥಿತಿಗೆ ಕೈಗನ್ನಡಿ. ಮುಂದೇನು ಎಂಬುದು ತೋಚುತ್ತಿಲ್ಲ ಎಂಬುದು ನಾಯಕರೊಬ್ಬರ ವಿವರಣೆ.

ಇಂದು ಪ್ರಮುಖ ನಾಯಕರ ಸಭೆ

ಬಿಜೆಪಿ ಪ್ರಮುಖ ನಾಯಕರ ಸಭೆಯನ್ನು ಸೋಮವಾರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಸಭೆಯಲ್ಲಿ ಪಕ್ಷದಿಂದ ಕೆಲವು ಶಾಸಕರು ಕಾಂಗ್ರೆಸ್‌ ಹೋಗುವುದನ್ನು ತಡೆಯುವುದು ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಇದೇ 23 ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಅಂದು 5ರಿಂದ 6 ಸಾವಿರ ಜನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು. ವರ್ಗಾವಣೆ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಪ್ರತಿಯೊಂದು ಹುದ್ದೆಗೂ ಹಣ ನಿಗದಿ ಮಾಡಿ ವಸೂಲಿ ಮಾಡುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಹೊಂದಿರುವ ಸರ್ಕಾರ ಮಾಧ್ಯಮದರಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ಯಶವಂತಪುರದಲ್ಲಿ ಇಬ್ಬರ ಉಚ್ಚಾಟನೆ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್ ಅವರು ನೀಡಿದ ದೂರಿನ ಮೇರೆಗೆ ಯಶವಂತಪುರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮಾರೇಗೌಡ ಹಾಗೂ ಯಶವಂತಪುರ ಮಂಡಲದ ಉಪಾಧ್ಯಕ್ಷ ಧನಂಜಯ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಯತ್ನಿಸಿದ್ದರು ಎಂದು ಸೋಮಶೇಖರ್‌ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT