ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Analysis | ಬಿಜೆಪಿಗೆ ಒಲಿದ ಮತದಾರ ಜೆಡಿಎಸ್‌, ಕಾಂಗ್ರೆಸ್‌ಗೆ ಕೊಟ್ಟ ಸಂದೇಶವೇನು

ರಾಜಕೀಯ ವಿಶ್ಲೇಷಣೆ
Published : 9 ಡಿಸೆಂಬರ್ 2019, 11:26 IST
ಫಾಲೋ ಮಾಡಿ
Comments

ಉಪಚುನಾವಣೆ ಫಲಿತಾಂಶವುಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ನೀಡಿದ ಸಂದೇಶವೇನು? ಮೂರೂ ರಾಜಕೀಯ ಪಕ್ಷಗಳ ಮೇಲೆಈ ಫಲಿತಾಂಶದ ಪರಿಣಾಮಗಳು ಏನಾಗಬಹುದು? ಈ ಪ್ರಶ್ನೆಗಳಿಗೆ ಸಂವಾದದ ಮೂಲಕ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮತ್ತು ಪೊಲಿಟಿಕಲ್ ಬ್ಯೂರೊ ಮುಖ್ಯಸ್ಥ ವೈ.ಗ.ಜಗದೀಶ್.

ಜಗದೀಶ್:ಬಹುತೇಕ ಕ್ಷೇತ್ರಗಳಲ್ಲಿ ಫಲಿತಾಂಶ ಪ್ರಕಟವಾಗಿದೆ.15 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ, ಕಾಂಗ್ರೆಸ್‌ 2 ಕಡೆ ಮತ್ತು ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.ಜೆಡಿಎಸ್‌ಗೆ ಒಂದು ಸ್ಥಾನವೂ ದಕ್ಕಲಿಲ್ಲ.ಚುನಾವಣೆ ಫಲಿತಾಂಶ ಗಮನಿಸಿದ್ರೆ ನಿಮ್ಮ ಅನುಭವ ಏನು ಹೇಳುತ್ತೆ?

ರವೀಂದ್ರ ಭಟ್ಟ: ಒಟ್ಟಾರೆ ಫಲಿತಾಂಶ ಬಿಜೆಪಿ ಪರವಾಗಿದೆ. ಸ್ಥಿರ ಸರ್ಕಾರಕೊಡಲು ಸಾಧ್ಯವಿರುವ ಬಹುಮತವನ್ನು ಬಿಜೆಪಿ ಪಡೆದುಕೊಂಡಿದೆ. ಜನರಿಗೆ ಶಾಸಕರ ಅನರ್ಹತೆಯ ವಿಚಾರ ಅಥವಾ ಪಕ್ಷಗಳ ಸಿದ್ಧಾಂತ ಈ ಬಾರಿ ಅಷ್ಟು ಮುಖ್ಯ ಎನಿಸಲಿಲ್ಲ.ರಾಜ್ಯಕ್ಕೆ ಸ್ಥಿರ ಸರ್ಕಾರ ಬೇಕಿತ್ತು ಎನ್ನುವ ಸಂದೇಶವನ್ನು ಈ ಚುನಾವಣೆಯ ಮೂಲಕ ಕೊಟ್ಟಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ.

ಯಾಕೆ ಈ ಮಾತು ಹೇಳ್ತೀನಿ ಅಂದ್ರೆ, ಸುಪ್ರೀಂಕೋರ್ಟ್‌ಅನರ್ಹರು ಅಂದ ಮೇಲೆ ಜನರೂ ಅವರನ್ನು ಅನರ್ಹರಾಗಿಸಬೇಕು ಎನ್ನುವ ನಿರೀಕ್ಷೆ ಹಲವರಲ್ಲಿ ಇತ್ತು.ಬಹಳ ವಿಚಿತ್ರ ಆಂದ್ರೆ ಚುನಾವಣೆ ಪ್ರಕ್ರಿಯೆ ನಡೆಯುವ ಕಾಲದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ದಾಳ ಉರುಳಿಸಿದ್ದವು. ಈ ಚುನಾವಣೆಯಲ್ಲಿ ಜೆಡಿಎಸ್–ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದರೆ ಮತ್ತೆ ಕಾಂಗ್ರೆಸ್–ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಬಹುದು ಅಂತ. ತಂತ್ರವೂಜನರ ಮೇಲೆ ಪರಿಣಾಮ ಬೀರಿತು ಅನ್ನಿಸುತ್ತೆ ನನಗೆ. ಇಲ್ಲದಿದ್ದರೆ ಬಿಜೆಪಿಗೆ ಇಷ್ಟೊಂದು ಸ್ಥಾನ ಗಳಿಸಲು ಸಾಧ್ಯವಿರಲಿಲ್ಲ. ತಾವು ಹೆಣೆದ ತಂತ್ರ, ಉರುಳಿಸಿದ ದಾಳವೇಕಾಂಗ್ರೆಸ್–ಜೆಡಿಎಸ್‌ಗೆ ಮುಳುವಾಯ್ತು.

ಜಗದೀಶ್:ಉಪಚುನಾವಣೆಯಲ್ಲಿಒಟ್ಟಾರೆ ಚಲಾವಣೆಯಾದ ಮತಗಳಲ್ಲಿ ಶೇ 49.74ರಷ್ಟು ಬಿಜೆಪಿಗೆ ಬಂದಿವೆ...

ರವೀಂದ್ರ ಭಟ್ಟ:ನಾನು ಹೇಳ್ತಿರೋದು ಅದನ್ನೇ. ಜನರಿಗೆ ಸ್ಥಿರ ಸರ್ಕಾರ ಬೇಕಿತ್ತು. ಈ ಹಿಂದಿನ ಸರ್ಕಾರ ಯಾವಾಗಲಾದರೂ ಬಿದ್ದುಹೋಗುವಂತೆ ಇತ್ತು. ಸ್ವತಂತ್ರವಾಗಿ ಒಂದು ಪಕ್ಷ ಆಡಳಿತ ನಡೆಸಲುಅವಕಾಶ ಇರಲಿಲ್ಲ. ಹೀಗಾಗಿ ‘ಅನರ್ಹ’ ಎನ್ನುವ ಕಳಂಕ ಹೊತ್ತ ಅಭ್ಯರ್ಥಿ ಎನ್ನುವ ವಿಚಾರಕ್ಕಿಂತಲೂ ರಾಜ್ಯಕ್ಕೆ ಸ್ಥಿರ ಸರ್ಕಾರ ಬೇಕು ಎನ್ನುವ ವಿಚಾರವನ್ನೇ ಜನರು ಮತ ಚಲಾವಣೆಗೆ ಮೊದಲು ಪರಿಗಣಿಸಿದ್ದಾರೆ ಎಂದು ನನಗೆ ಅನ್ನಿಸುತ್ತೆ.

ಜಗದೀಶ್: ಕಾಂಗ್ರೆಸ್–ಜೆಡಿಎಸ್‌ನವರು ಅನರ್ಹರನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಿ ಅಂತ ಹೇಳ್ತಿದ್ರು. ಅದರ ಕಾಂಗ್ರೆಸ್ ಪರವಾಗಿ ಶೇ 31, ಜೆಡಿಎಸ್‌ಗೆ ಶೇ 13.35, ಸರಿಸುಮಾರು ಶೇ 4ರಷ್ಟು ಮತಗಳು ಪಕ್ಷೇತರರಿಗೆ ಬಂದಿವೆ. ಶೇ 50ರಷ್ಟು ಮತಗಳನ್ನು ಬಿಜೆಪಿ ಪಡೆದುಕೊಂಡಿದೆ. ರಾಜ್ಯದ 15 ಕ್ಷೇತ್ರಗಳ ಮತದಾರರು ಅನರ್ಹರ ಪರವಾಗಿದ್ದರು ಎನ್ನುವುದು ಇದರ ಅರ್ಥವೇ?

ರವೀಂದ್ರ ಭಟ್ಟ:ನಾನು ಮೊದಲೇ ಹೇಳಿದಂತೆ, ಜನರ ಪಾಲಿಗೆ ಯಾರನ್ನೇ ಆಗಲಿ ಅನರ್ಹರು ಮತ್ತು ಅವರ ಅರ್ಹತೆಯನ್ನು ಒರೆಗೆ ಹಚ್ಚಬೇಕು ಎಂದು ನಿರ್ಣಯಿಸುವ ಚುನಾವಣೆ ಇದು ಆಗಿರಲಿಲ್ಲ. ರಾಜ್ಯಕ್ಕೆ ಸ್ಥಿರ ಸರ್ಕಾರ ಸಿಗಬೇಕು, ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು. ಪ್ರವಾಹ ಸಂಕಷ್ಟದಲ್ಲಿರುವವರಿಗೆ ಪರಿಹಾರ ಸಿಗಬೇಕಿತ್ತು. ಜನರಿಗೆ ಅಸ್ಥಿರರಾಜಕಾರಣಕ್ಕಿಂತ ಸ್ಥಿರ ಆಡಳಿತ ಕೊಡುವ ಸರ್ಕಾರ ಬೇಕಿತ್ತು.ಅಂಥದ್ದೊಂದು ಸರ್ಕಾರವನ್ನು ಅಧಿಕಾರಕ್ಕೆ ತರಬೇಕು, ಸ್ಥಿರ ಆಡಳಿತಕ್ಕೆ ಬೆಂಬಲ ಸೂಚಿಸಬೇಕು ಎನ್ನುವುದಷ್ಟೇ ಅವರ ಭಾವನೆಯಾಗಿತ್ತು. ಜನರ ಮನಸ್ಸಿನಲ್ಲಿದ್ದ ಈ ಭಾವನೆಯ ಎದುರುಅನರ್ಹತೆ ಅಥವಾ ಅರ್ಹತೆಯ ಪ್ರಶ್ನೆ ಜನರು ಮುಖ್ಯ ಅನ್ನಿಸಲೇ ಇಲ್ಲ.

ಜಗದೀಶ್: ಮಹಾರಾಷ್ಟ್ರದಲ್ಲಿ ಈಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ನಿಮಗೆ ನೆನಪಿರಬಹುದು. ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದ ಮಹಾರಾಷ್ಟ್ರ–ಕರ್ನಾಟಕ ಗಡಿಯಲ್ಲಿ ಅಲ್ಲಿನ ಆಡಳಿತ ಪಕ್ಷ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು ಸೋತಿತ್ತು. ಆದರೆ ಇದೀಗ ಮಹಾರಾಷ್ಟ್ರದ ಗಡಿಯಲ್ಲಿರುವ ಅಥಣಿ, ಗೋಕಾಕ, ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಅದು ಲಿಂಗಾಯತರ ಪ್ರಾಬಲ್ಯದ ಪ್ರದೇಶವೂ ಹೌದು. ಮಹಾರಾಷ್ಟ್ರದ ಫಲಿತಾಂಶದ ಪರಿಣಾಮ ಕರ್ನಾಟಕದ ಮೇಲೆ ಆಗಿಲ್ಲ ಎಂಬುದು ಇದರ ಅರ್ಥವೇ? ಯಡಿಯೂರಪ್ಪ ಅವರಿಗೆ ಲಿಂಗಾಯತರ ಸಂಪೂರ್ಣ ಬೆಂಬಲ ದಕ್ಕಿತು ಎನ್ನುವುದು ಇದರ ಅರ್ಥವೇ?

ರವೀಂದ್ರ ಭಟ್ಟ: ಯಡಿಯೂರಪ್ಪ ಲಿಂಗಾಯತರ ನಾಯಕ ಅನ್ನೋದು ನಿರ್ವಿವಾದ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಮಹಾರಾಷ್ಟ್ರದರಾಜಕೀಯ ಪರಿಣಾಮ ಕರ್ನಾಟಕದ ಮೇಲೆ ಆಗಬಹುದು ಎಂಬ ಲೆಕ್ಕಾಚಾರಗಳು ಮೊದಲೂ ಇದ್ದವು. ಎರಡೂ ರಾಜ್ಯಗಳ ಮತ್ತು ಚುನಾವಣೆಗಳ ಹಿನ್ನೆಲೆಬೇರೆ ಎಂಬುದನ್ನು ನಾವು ಗಮನಿಸಬೇಕು. ಪ್ರವಾಹ ಸಂಕಷ್ಟದಲ್ಲಿ ಯಡಿಯೂರಪ್ಪ ಏಕಾಂಗಿಯಾಗಿಯೂ ಸಾಕಷ್ಟು ಕೆಲಸ ಮಾಡಿದ್ದರು. ಆ ಕಾರಣಕ್ಕಾಗಿಯೂ ಜನ ಅವರ ಪರವಾಗಿ ನಿಂತಿರಬಹುದು.ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಅಲ್ಲಿನ ಜನರು ಬಿಜೆಪಿ–ಶಿವಸೇನೆ ಮೈತ್ರಿಕೂಟದ ವಿರುದ್ಧ ಹೋಗಿರಲಿಲ್ಲ. ಅಲ್ಲಿನ ಜನರು ಆಶೀರ್ವದಿಸಿದ್ದೇ ಮೈತ್ರಿಕೂಟಕ್ಕೆ. ನಂತರ ಏನೆಲ್ಲಾ ಆಯಿತು ಎಲ್ಲರಿಗೂ ಗೊತ್ತು.

ಜಗದೀಶ್‌: ಈ ಉಪಚುನಾವಣೆ ಫಲಿತಾಂಶದ ಮತ್ತೊಂದು ಗಮನಾರ್ಹ ಅಂಶ ಎಂದರೆ ಗೆಲುವಿನ ಅಂತರ. ಕನಿಷ್ಠ ಅಂತರವೇ 18 ಸಾವಿರ ಮತಗಳಿವೆ.ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಲ್ಲಿಗೋಪಾಲಯ್ಯ 53 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?

ರವೀಂದ್ರ ಭಟ್ಟ: ಜನರಿಗೆ ಸ್ಥಿರ ಸರ್ಕಾರದ ಭರವಸೆ ಬೇಕಿತ್ತು ಅಷ್ಟೇ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಂತ ರಾಜಕೀಯ ಪಕ್ಷ ಅಥವಾ ಸಿದ್ಧಾಂತಗಳು ಅವರಿಗೆ ಮುಖ್ಯವಾದವು ಎಂದೇನು ನನಗೆ ಅನ್ನಿಸಲ್ಲ. ಬಿಜೆಪಿಯವರಿಗೆ ನಾವೀಗ‘ನಿಮಗೆ ಬಹುಮತ ಸಿಕ್ಕಿದೆ, ಒಳ್ಳೇ ಆಡಳಿತ ಕೊಡಿ’ ಅಂತಷ್ಟೇ ಹೇಳಬಹುದು. ಅದನ್ನು ಹೊರತುಪಡಿಸಿ ಈ ಉಪಚುನಾವಣೆ ಫಲಿತಾಂಶ ಮುಂದಿಟ್ಟುಕೊಂಡು ಹೆಚ್ಚಿನರಾಜಕೀಯ ಲೆಕ್ಕಾಚಾರ ಹಾಕಲು ಆಗಲ್ಲ. ಲಿಂಗಾಯತರು ಮತ್ತು ಒಕ್ಕಲಿಗರು ಸೇರಿ ಚುನಾವಣೆ ನಡೆಸಿದ ಚುನಾವಣೆ ನಡೆಸಿದ ಉದಾಹರಣೆ ರಾಜ್ಯದಲ್ಲಿ ಈ ಹಿಂದೆ ಇರಲಿಲ್ಲ. ಅದು ಈ ಬಾರಿ ಕೆ.ಆರ್.ಪೇಟೆಯಲ್ಲಿ ಆಗಿದೆ. ಅಲ್ಲಿಯ ರಾಜಕಾರಣ ಮುಂದೇನಾಗಬಹುದು ಎಂಬುದನ್ನುಆಲೋಚಿಸಬಹುದು. 15 ಕ್ಷೇತ್ರಗಳ ಫಲಿತಾಂಶ ಇಟ್ಟುಕೊಂಡು ಇಡೀ ರಾಜ್ಯ ರಾಜಕಾರಣದ ವಿಶ್ಲೇಷಣೆ ಸಾಧ್ಯವಿಲ್ಲ.

ಜಗದೀಶ್: ಕೆ.ಆರ್.ಪೇಟೆಯಲ್ಲಿ ಬಿಜೆಪಿ 9728 ಮತಗಳ ಮತಗಳ ಅಂತರದಿಂದ ಗೆದ್ದಿದೆ. ಈ ಹಿಂದೆ ಅಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಗೆಲ್ತಿತ್ತು.ಜೆಡಿಎಸ್‌ನಿಂದ ಬಿಜೆಪಿಗೆ ಬಂದ ನಾರಾಯಣಗೌಡ ಗೆದ್ದಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮತ್ತು ಮುಖ್ಯಮಂತ್ರಿ ಮಗ ವಿಜಯೇಂದ್ರ ಆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಏನೆಲ್ಲಾ ಇದ್ರೂ ಬಿಜೆಪಿಗೆ ಇದು ಬಹಳ ಕಷ್ಟದ ಕ್ಷೇತ್ರವಾಗಿತ್ತು.

ರವೀಂದ್ರ ಭಟ್ಟ: ಮಂಡ್ಯ ಜಿಲ್ಲೆಯ ಮಟ್ಟಿಗೆ ಈ ಫಲಿತಾಂಶವು ಬೇರೆಯದ್ದೇ ಆದರಾಜಕೀಯದ ಮುನ್ಸೂಚನೆ ಕೊಡುತ್ತೆ. ಅಲ್ಲಿ ಈವರೆಗೆ ಒಕ್ಕಲಿಗರೆಲ್ಲರೂ ಜೆಡಿಎಸ್ ಪರವಾಗಿದ್ದಾರೆ ಎನ್ನುವಭಾವನೆಯಿತ್ತು. ಈಗ ಅಲ್ಲಿ ಗೆದ್ದಿರುವ ನಾರಾಯಣಗೌಡರು ಈ ಹಿಂದೆ ಯಾವ ಪಕ್ಷದಲ್ಲಿದ್ದರು?ಯಾರ ವಿರುದ್ಧ ನಿಂತು ಆರೋಪಗಳನ್ನು ಮಾಡಿ ಪಕ್ಷವನ್ನು ಬಿಟ್ಟು ಹೋಗಿದ್ದರು? ಕುಮಾರಸ್ವಾಮಿ, ರೇವಣ್ಣ ಸಹ ಹೆಚ್ಚು ಗಮನ ಕೊಟ್ಟ ಕ್ಷೇತ್ರವಾಗಿತ್ತು ಅದು. ರೇವಣ್ಣನ ಪುತ್ರ ಕೂಡ ಅಲ್ಲಿಕೆಲಸ ಮಾಡ್ತಿದ್ರು.ಈ ಎಲ್ಲ ಹಿನ್ನೆಲೆಯಿಂದ ಪರಿಶೀಲಿಸಿದಾಗ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಸಾಧಿಸಿದ ಗೆಲುವು ಬೇರೆಯದ್ದೇ ಮುನ್ಸೂಚನೆ ಕೊಡುತ್ತೆ.

ಜಗದೀಶ್: ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ತನ್ನಭದ್ರನೆಲೆಗಳಲ್ಲಿಯೇ ಪ್ರಾಬಲ್ಯ ಕಳೆದುಕೊಳ್ಳುತ್ತಿದೆಯೇ?

ರವೀಂದ್ರ ಭಟ್ಟ: 2018ರ ಚುನಾವಣೆ ನೋಡಿದ್ರೂ ಜೆಡಿಎಸ್‌ ಹಳೇ ಮೈಸೂರು ಭಾಗದಲ್ಲಿಪ್ರಾಬಲ್ಯ ಕಳೆದುಕೊಳ್ಳುತ್ತಿದೆ ಅನ್ಸುತ್ತೆ. ಕೇವಲ ಜಾತಿಯನ್ನು ಆಧಾರವಾಗಿಟ್ಟುಕೊಂಡು ಯಾರಿಗೂ ದೀರ್ಘಕಾಲ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಮತದಾರರು ಕೊಡುತ್ತಿರುವಂತಿದೆ. ಇದು ಕೇವಲ ಜೆಡಿಎಸ್‌ಗೆ ಮಾತ್ರವಲ್ಲ; ಸಿದ್ದರಾಮಯ್ಯ ಕೇವಲ ಕುರುಬರ ನಾಯಕರಾಗಿದ್ದರೆ, ಯಡಿಯೂರಪ್ಪ ಕೇವಲ ಲಿಂಗಾಯತರಾಗಿದ್ರೆ ಏನಾಗುತ್ತಿತ್ತು. ಜಾತಿ ಮೀರಿದ ರಾಜಕಾರಣದ ಔಚಿತ್ಯ ಇಂದು ನಮ್ಮ ಮತದಾರರಿಗೆ ಅರ್ಥವಾಗಿದೆ.

ಜಗದೀಶ್:ಹಾಗಂತ ಜಾತಿಯನ್ನು ಪೂರ್ತಿ ಕಡೆಗಣಿಸಲು ಸಾಧ್ಯವೇ?ಚಿಕ್ಕಬಳ್ಳಾಪುರ, ಯಶವಂತಪುರ, ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ ಒಕ್ಕಲಿಗರು, ಕೆ.ಆರ್‌.ಪುರಂನಲ್ಲಿಕುರುಬ ಅಭ್ಯರ್ಥಿ ಗೆದ್ದಿದ್ದಾರೆ. ಯಾವುದೇ ಜಾತಿಯ ಮತಬ್ಯಾಂಕ್ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎನ್ನುವುದು ನಿಮ್ಮ ಮಾತಿನ ಅರ್ಥವೇ? ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಹುಣಸೂರು ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಅಲ್ಲಿ ಬಿಜೆಪಿ ಸೋತು, ಕಾಂಗ್ರೆಸ್ ಗೆದ್ದಿದೆ. ಇದನ್ನು ಹೇಗೆ ವಿಶ್ಲೇಷಿಸುತ್ತೀರಿ?

ರವೀಂದ್ರ ಭಟ್ಟ:ಎಲ್ಲ ಕ್ಷೇತ್ರಗಳ ಪರಿಸ್ಥಿತಿಯೂ ಪ್ರತ್ಯೇಕವಾದುದು. ಕಳೆದ ಬಾರಿ ಹುಣಸೂರಿನಲ್ಲಿ ವಿಶ್ವನಾಥ್ ಗೆದ್ದಿದ್ದು ಜೆಡಿಎಸ್ ಪ್ರಭಾವದಿಂದ. ಒಕ್ಕಲಿಗ ಮತ್ತು ಮುಸ್ಲಿಮರ ಮತಗಳು ವಿಶ್ವನಾಥರಿಗೆ ಸಿಕ್ಕಿತ್ತು. ಕಳೆದ ಬಾರಿ ಮಂಜುನಾಥ್ ಹ್ಯಾಟ್ರಿಕ್ ಮಾಡ್ತಾರೆ ಅಂತ ಇತ್ತು. ಆದರೆ ಜೆಡಿಎಸ್ ಗೆಲ್ತು. ಈ ಬಾರಿಯೂ ಜೆಡಿಎಸ್ ಗೆಲ್ಲಬಹುದಿತ್ತು. ಹಾಗೆ ಆಗಲಿಲ್ಲ. ಪ್ರತಿ ಕ್ಷೇತ್ರದಲ್ಲಿ ಚುನಾವಣೆ ನಡೆದ ರೀತಿಯನ್ನು ನಾವು ಗಮನಿಸಬೇಕು ಮತ್ತು ಫಲಿತಾಂಶದ ಬಗ್ಗೆ ಬೇರೆಬೇರೆ ರೀತಿ ಯೋಚಿಸಬೇಕು.

ಈ ಬಾರಿ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಲ್ಲಿಯೂನರೇಂದ್ರ ಮೋದಿ,370ನೇ ವಿಧಿ ರದ್ದತಿ ಅಥವಾ ಆರ್ಥಿಕ ಹಿಂಜರಿತದ ವಿಷಯಗಳು ಚರ್ಚೆಗೆ ಬರಲಿಲ್ಲ. ಸಂಪೂರ್ಣವಾಗಿ ಆಯಾ ಸ್ಥಳೀಯ ವಿಚಾರಗಳನ್ನು ಆಧರಿಸಿಯೇಚುನಾವಣೆ ನಡೆಯಿತು. ಪಕ್ಷಾಂತರ ಮಾಡಿದವರು ಗೆಲ್ಲಬೇಕೋ ಅಥವಾ ಸೋಲಬೇಕೋ ಎನ್ನುವುದು ಚುನಾವಣೆಯ ವಿಷಯವಾಗಿತ್ತು. ‘ನಮಗೆಸ್ಥಿರ ಸರ್ಕಾರ ಬೇಕು’ ಎಂದು ಜನರು ಮತದಾನದ ಮೂಲಕ ಹೇಳಿದ್ದಾರೆ.

ಜಗದೀಶ್: ವಿಧಾನಸಭೆಯಲ್ಲಿ ಬಿಜೆಪಿಗೆ ಈಗ 117 ಸ್ಥಾನಗಳಿವೆ. ಅವರು ಬಹುಮತದ ಗಣಿತವನ್ನು ನಿಚ್ಚಳವಾಗಿ ಮುಟ್ಟಿದ್ದಾರೆ...

ರವೀಂದ್ರ ಭಟ್ಟ:ಹೌದು, ಬಿಜೆಪಿಗೆ ಈಗ ಬಹುಮತದ ಚಿಂತೆಯಿಲ್ಲ.ಆಡಳಿತದಲ್ಲಿ ಸುಧಾರಣೆ ಆಗಬೇಕು. ಪ್ರಕೃತಿ ವಿಕೋಪಕ್ಕೆ ಸಿಲುಕಿದವರಿಗೆ ಪುನರ್ವಸತಿ, ಪರಿಹಾರ ಕೊಡಬೇಕು. ಆರ್ಥಿಕ ಹಿಂಜರಿತದ ಪರಿಣಾಮ ಕರ್ನಾಟಕದ ಮೇಲೆಯೂ ಆಗಿದೆ. ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ದಕ್ಕಿಸಿಕೊಂಡ ಬಹುಮತವನ್ನು ಅರಗಿಸಿಕೊಳ್ಳುವ ಸವಾಲು ಅವರ ಮುಂದಿದೆ. ಮೈತ್ರಿ ಸರ್ಕಾರ ನಮ್ಮ ಕ್ಷೇತ್ರಗಳನ್ನು ಕಡೆಗಣಿಸಿದ್ದರಿಂದಲೇ ನಾವು ರಾಜೀನಾಮೆ ಕೊಟ್ಟೆವು ಎಂದು ಅನರ್ಹರಾದ ಶಾಸಕರು ಹೇಳಿದ್ದರು.ಜನತಾ ನ್ಯಾಯಾಲಯದಲ್ಲಿಅರ್ಹತೆ ಪಡೆದುಕೊಂಡ ಇಂಥ ಶಾಸಕರ ಮೇಲೆಯೂ ಹೆಚ್ಚು ಅನುದಾನ ತರುವ, ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ಇದೆ. ಮುಖ್ಯಮಂತ್ರಿ ಇದನ್ನು ಹೇಗೆ ನಿರ್ವಹಿಸುತ್ತಾರೋ ನೋಡಬೇಕು.

ಸಂಪುಟ ವಿಸ್ತರಣೆ ಮಾಡುವುದು ಯಡಿಯೂರಪ್ಪ ಮೇಲಿರುವ ದೊಡ್ಡ ಸವಾಲು. ಬಿಜೆಪಿಯಲ್ಲಿದ್ದ ಹಿರಿಯರಾಗಲಿ, ಶಾಸಕರಾಗಲಿ ಇದನ್ನು ಹೇಗೆ ಸ್ವೀಕಾರ ಮಾಡ್ತಾರೆ?ಹೊಂದಿಕೊಂಡು ಹೋಗ್ತಾರೋ ಇಲ್ಲವೋ ಅನ್ನೋದು ಮತ್ತೊಂದು ಪ್ರಶ್ನೆ.

ಜಗದೀಶ್:ಬೆಳಗಾವಿ ಜಿಲ್ಲೆಯಲ್ಲಿ ನಡೆದ ಉಪಚುನಾವಣೆಯಲ್ಲಿಮೂವರು ಗೆದ್ದಿದ್ದಾರೆ. ಆ ಜಿಲ್ಲೆಯ ಲಕ್ಷ್ಮಣ ಸವದಿ ಈಗಾಗಲೇ ಉಪಮುಖ್ಯಮಂತ್ರಿಯಾಗಿದ್ದಾರೆ. ಹೀಗಿರುವಾಗ ಉಳಿದ ಮೂವರಿಗೆ ಅಧಿಕಾರ ಕೊಟ್ಟರೆ ಒಂದೇ ಜಿಲ್ಲೆಯ ನಾಲ್ವರು ಸಚಿವರಾದಂತೆ ಆಗುತ್ತೆ. ಇಂಥ ವಿಷಯಗಳನ್ನುಯಡಿಯೂರಪ್ಪ ಹೇಗೆ ನಿಭಾಯಿಸುತ್ತಾರೆ ಅನ್ನೋದು ಕುತೂಹಲದ ಅಂಶ.

ರವೀಂದ್ರ ಭಟ್ಟ:‘ಈ ಸರ್ಕಾರ ಬಂದಿದ್ದೇ ಅವರ ರಾಜೀನಾಮೆಯಿಂದ. ಅವರಿಗಾಗಿ ನಮ್ಮವರು ಸ್ವಲ್ಪ ತ್ಯಾಗ ಮಾಡಬೇಕು’ ಎಂದುಯಡಿಯೂರಪ್ಪ ಮತ್ತು ಈಶ್ವರಪ್ಪ ಮೊದಲಿನಿಂದಲೂಹೇಳ್ತಾನೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ನಡೆಯನ್ನು ಆಲೋಚಿಸಬೇಕು.ಈ ಸರ್ಕಾರ ಆರಂಭದಲ್ಲಿ ಕೆಲವು ದಿವಸ ಚೆನ್ನಾಗಿರಬಹುದು. ಕ್ರಮೇಣ ಏನಾಗುತ್ತೆ ಎಂದು ಈಗಲೇ ಹೇಳುವುದು ಕಷ್ಟ. ಈ ರಾಜಕಾರಣ ಬದಿಗಿಟ್ಟು ಅಭಿವೃದ್ಧಿ ಕಡೆ, ಜನರ ಕಡೆಗೆ ಸರ್ಕಾರ ಹೆಚ್ಚು ಗಮನ ಕೊಡಬೇಕು. ಜನರು ಬಯಸಿದಂತೆ ಒಂದು ಸ್ಥಿರ ಸರ್ಕಾರ ಬಂದಿದೆ. ರಾಜ್ಯದಲ್ಲಿ ಸರ್ಕಾರ ಸ್ಥಿರವಾಗಿದ್ದ ಅಭಿವೃದ್ಧಿ ಹೇಗಾಗುತ್ತೆ ಎನ್ನುವುದನ್ನು ಈಗ ತೋರಿಸಬೇಕು.

ಜಗದೀಶ್: ಈ ಚುನಾವಣೆಯಲ್ಲಿ ಸಿದ್ದರಾಮಯ್ಯನ ಆಪ್ತರ ಪೈಕಿ ಒಬ್ಬರು ಮಾತ್ರ ಸೋತಿದ್ದಾರೆ. ಅದು ಹೊಸಕೋಟೆಯಎಂಟಿಬಿ ನಾಗರಾಜ್. ಉಳಿದವರ ಗೆಲುವು, ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಆಪ್ತವಲಯದಲ್ಲಿದ್ದ ಭೈರತಿ ಬಸವರಾಜ್, ಸೋಮಶೇಖರ್ ಇತ್ಯಾದಿ ನಾಯಕರ ಗೆಲುವು ಸಿದ್ದರಾಮಯ್ಯಗೆ ಹಿನ್ನಡೆ ಅಲ್ಲವೇ?

ರವೀಂದ್ರ ಭಟ್ಟ:ಸಿದ್ದರಾಮಯ್ಯ ಅವರಿಗೆ ಆಗಿರುವುದು ಇದೊಂದೇ ಹಿನ್ನಡೆ ಅಲ್ಲ. ಈ ಹಿಂದೆಯೂ ಹಲವುವಿಚಾರಗಳು ಅವರ ಪರವಾಗಿ ಇರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಈಗ ಸಿದ್ದರಾಮಯ್ಯ ವಿರುದ್ಧ ಒಂದಿಷ್ಟುಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ಸಿದ್ದರಾಮಯ್ಯ ವಿರುದ್ಧ ಈ ಹಿಂದೆಯೇ ಯುದ್ಧ ಸಾರಿದ್ದ ಕಾಂಗ್ರೆಸ್‌ನ ಹಿರಿಯರಿಗೆ ಈ ಚುನಾವಣೆಯ ಫಲಿತಾಂಶ ಒಂದು ದೊಡ್ಡ ಅಸ್ತ್ರವನ್ನೇ ಒದಗಿಸಿಕೊಟ್ಟಿದೆ.ಸಿದ್ದರಾಮಯ್ಯ ಅದ್ನನು ಹೇಗೆ ಎದುರಿಸ್ತಾರೆ? ಅನ್ನೋದು ದೊಡ್ಡ ಕುತೂಹಲದ ವಿಷಯ.

ಜಗದೀಶ್: ಇದು ಕಾಂಗ್ರೆಸ್‌ಗೆ ರಾಜಕೀಯ ಮುಖಭಂಗ...

ರವೀಂದ್ರ ಭಟ್ಟ: ಕಾಂಗ್ರೆಸ್ಸಿಗೆ ಜನರು ಸ್ಪಷ್ಟವಾಗಿ ಬೇರೆಯದ್ದೇ ಆದ ಒಂದು ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್ ಸಹ ಬಹಳ ಹಳೆಯ ಪಕ್ಷ. ಇಂಥ ಸವಾಲುಗಳನ್ನು ಹೇಗೆ ಎದುರಿಸುತ್ತೆ ಆಂತ ಕಾದು ನೋಡಬೇಕು. ರಾಜ್ಯದಲ್ಲಿ ಈಗ ಸರ್ಕಾರ ಭದ್ರವಾಗಿದೆ. ಕೇವಲ 15 ಕ್ಷೇತ್ರಗಳು ಮಾತ್ರಲ್ಲ, ಒಟ್ಟಾರೆ ಸಮಗ್ರ ರಾಜ್ಯದ ಅಭಿವೃದ್ಧಿಗಾಗಿ ಏನೆಲ್ಲಾ ಮಾಡುತ್ತೋ ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT