ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.12ರಿಂದ ವಿಧಾನಸಭೆ ಬಜೆಟ್ ಅಧಿವೇಶನ, 16ಕ್ಕೆ ಬಜೆಟ್ ಮಂಡನೆ: ಯು.ಟಿ.ಖಾದರ್

Published 7 ಫೆಬ್ರುವರಿ 2024, 10:59 IST
Last Updated 7 ಫೆಬ್ರುವರಿ 2024, 10:59 IST
ಅಕ್ಷರ ಗಾತ್ರ

ರಾಯಚೂರು: ‘ಫೆಬ್ರುವರಿ 12ರಿಂದ 23ರವರೆಗೆ ವಿಧಾನಸಭೆ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಫೆ.15 ರವರೆಗೆ ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಯಲಿದೆ. ಫೆ.16ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ‘ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.

ಬಜೆಟ್ ಕುರಿತು ಮಾಹಿತಿ ಒದಗಿಸಲು ಎಲ್ಲ ಶಾಸಕರಿಗೆ ಫೆ.9ರಂದು ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್‌ನಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.

‘ವಾಸ್ತವದಲ್ಲಿ ಬಜೆಟ್ ಹೇಗೆ ರೂಪಿಸಲಾಗುತ್ತದೆ, ಯಾವ ಯಾವ ಇಲಾಖೆಗೆ ಹೇಗೆ ಅನುದಾನ ಮೀಸಲಿಡಲಾಗುತ್ತದೆ. ಇಲಾಖೆಗಳ ಕಾರ್ಯನಿರ್ವಹಣೆ ಹೇಗಿರುತ್ತದೆ ಎನ್ನುವುದರ ಕುರಿತಾಗಿ ಶಾಸಕರಿಗೆ ಮಾಹಿತಿ ಒದಗಿಸಲಾಗುವುದು. ಇದರ ಜೊತೆಗೆ ಪತ್ರಕರ್ತರಿಗೂ ಸಹ ಪ್ರತ್ಯೇಕವಾಗಿ ತರಬೇತಿ ಕಾರ್ಯಾಗಾರ ನಡೆಸಲಾಗುವುದು’ ಎಂದು ತಿಳಿಸಿದರು.

ವಿಧಾನಸಭೆ ಜನರ ಹತ್ತಿರಕ್ಕೆ: ರಾಜ್ಯದ ವಿಧಾನಸಭೆಯನ್ನು ಜನರ ಬಳಿ ಒಯ್ಯಬೇಕು, ಸಮಾಜದ ಕಟ್ಟಕಡೆಯ ಜನ ವಿಧಾನಸಭೆ ನಾನು ನೋಡುವಂತದ್ದಲ್ಲ ಎಂದು ಭಾವಿಸಬಾರದು. ಸುರಕ್ಷತಾ ದೃಷ್ಠಿಯಿಂದ ಯಾರು ಬರುತ್ತಾರೆ ಹೋಗುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಬೇಕು. ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಹಾಗೂ ಇತರೆ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ತಲಾ ಒಂದು ದಿನ ತಳಮಟ್ಟದ ಕೂಲಿ ಕಾರ್ಮಿಕರು, ಪೌರಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು, ಕ್ರೀಡಾಪಟುಗಳು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಒಂದು ದಿನ ಅಧಿವೇಶನ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಒಟ್ಟಿನಲ್ಲಿ ವಿಧಾನಸೌಧ ರಾಜ್ಯದ ಎಲ್ಲ ಸಮುದಾಯಗಳ, ಪ್ರತಿಯೊಬ್ಬರ ವಿಧಾನಸಭೆಯಾಗಬೇಕು ಎನ್ನುವ ಆಶಯವನ್ನು ಹೊಂದಲಾಗಿದೆ ಎಂದರು.

ಅಧಿವೇಶನ ನೋಡಲು ಬರುವ ವಿದ್ಯಾರ್ಥಿಗಳನ್ನು ವಿಧಾನಸಭೆ ಹೊರಗಡೆ ಮಳೆ-ಬಿಸಿಲಿಗೆ ಸಾಲಲ್ಲಿ ನಿಲ್ಲಿಸಲಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಬಂದ ವಿದ್ಯಾರ್ಥಿಗಳನ್ನು ಅಧಿವೇಶನ ಶುರುವಾಗುವ ವರೆಗೆ ಒಳಗಡೆ ಬಿಡುವುದಿಲ್ಲ ಇದರಿಂದಾಗಿ ಮಕ್ಕಳು ಬಿಸಿಲಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಇದೀಗ ಯಾವುದೇ ಶಾಲೆ ಮಕ್ಕಳು ಬಂದರೂ ಅವರನ್ನು ಹೊರಗಡೆ ಸಾಲಲ್ಲಿ ನಿಲ್ಲಿಸದೇ ಒಳಗಡೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

‘ಅಧಿವೇಶನ ಸಂದರ್ಭದಲ್ಲಿ ತಂಪು ನೀರು, ಸಿಹಿಯನ್ನು ಕೊಟ್ಟು, ನಿಗದಿತ ಸಮಯದಲ್ಲಿ ಅಧಿವೇಶ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲು ಸೂಚಿಸಲಾಗಿದೆ. ಇದರ ಜೊತೆಗೆ ದೂರದ ಊರಿನಿಂದ ವಿಧಾನಸಭೆ ನೋಡಲು ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ ವಿಧಾನಸಭೆಯಷ್ಟೇ ಅಲ್ಲದೇ ಇಸ್ರೊ, ಕಿದ್ವಾ, ನಿಮಾನ್ಸ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಅರಿಯಲು, ಆ ಸ್ಥಳಗಳ ವೀಕ್ಷಣೆಗೂ ಸಹ ವಿಧಾನಸಭೆಯಿಂದಲೆಯೇ ಪರವಾನಗಿ ಒದಗಿಸಿಕೊಡಲಾಗುವುದು ಎಂದು ಹೇಳಿದರು.

ಆತ್ಮವಿಶ್ವಾಸದಿಂದ ಪಾಲ್ಗೊಳ್ಳಿ: ಅಧಿವೇಶನಕ್ಕೆ ಸರಿಯಾದ ಸಮಯಕ್ಕೆ ಬಂದು, ಕೊನೆವರೆಗೂ ಇದ್ದು, ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎನ್ನುವ ಕಾರಣಕ್ಕಾಗಿಯೇ ಮತದಾರರು ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ನೂರರಷ್ಟು ಕೆಲಸ ಮಾಡುವೆ ಎನ್ನುವ ಆತ್ಮವಿಶ್ವಾಸ ಶಾಸಕರಲ್ಲಿ ಬರಬೇಕು. ಬೇರೆಲ್ಲ ಕೆಲಸ-ಕಾರ್ಯಗಳಿದ್ದರೂ ಮೊದಲ ಆದ್ಯತೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಬೇಕು ಎಂದು ಮನವಿ ಮಾಡಿದರು.

ಶಾಸಕರು ವಿಧಾನಸಭೆಯಲ್ಲಿ ಕುಳಿತುಕೊಂಡು ಜನರ ಕಷ್ಟಗಳ ಪರ ಧ್ವನಿ ಎತ್ತಬೇಕು. ಹಿರಿಯರು ಮಾತನಾಡುವ ವಿಷಯಗಳು ಸೇರಿದಂತೆ ಅಲ್ಲಿ ನಡೆಯುವ ಎಲ್ಲ ಘಟನಾವಳಿಗಳನ್ನು ಅರಿತುಕೊಳ್ಳಬೇಕು. ಆಗ ಮಾತ್ರ ದೊಡ್ಡ ಮಟ್ಟದ ನಾಯಕರಾಗಲು ಸಾಧ್ಯವಿದೆ ಎಂದು ತಿಳಿಸಿದರು.

ಒಂದೆರಡು ಸಲ ಆಯ್ಕೆಯಾಗಿ ಹೋದವರನ್ನು ಯಾರೂ ನೆನಪಿಗೆ ಇಟ್ಟುಕೊಳ್ಳುವುದಿಲ್ಲ. ಯಾರು ಬೆಳಿಗ್ಗೆಯಿಂದ ಸಂಜೆವರೆಗೆ ಕುಳಿತುಕೊಳ್ಳುತ್ತಾರೆ, ಎಲ್ಲ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಅಂತವರು ಯಶಸ್ವಿ ನಾಯಕರಾಗುತ್ತಾರೆ ಎಂದು ಹೇಳಿದರು.

ಯಾವುದೇ ಪಕ್ಷದ ಸರ್ಕಾರ ಇರಲಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಆಗಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕು. ನಾನು ಸಭಾಧ್ಯಕ್ಷನಾಗಿದ್ದೇನೆ. ನನಗೆ ಆಡಳಿತ-ಪ್ರತಿಪಕ್ಷವೂ ಒಂದೇ ಆಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT