ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲೂ ಭಾರತದ ಮಾನ ಹರಾಜು ಹಾಕಿ ಬಂದಿದ್ದಾರೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಪ್ರಧಾನಿಯವರ ಅಮೆರಿಕ ಭೇಟಿ ವೇಳೆ ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳಿದ್ದ ಪತ್ರಕರ್ತೆಯನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಹೀಗೆ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪ್ರಧಾನಿ ಮೋದಿಯವರು ವಿದೇಶದಲ್ಲಿಯೂ ಭಾರತದ ಮಾನ ಹರಾಜು ಹಾಕಿ ಬಂದಿದ್ದಾರೆ. ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುವ ಮೋದಿಗೆ ಏಕಾಏಕಿ ಪ್ರಶ್ನೆ ಕೇಳಿದ್ದಕ್ಕೆ ಅಮೆರಿಕದ ಪತ್ರಕರ್ತೆಯನ್ನು ಬಿಜೆಪಿಯ ಟ್ರೋಲ್ ಆರ್ಮಿ ಟಾರ್ಗೆಟ್ ಮಾಡಿದ ಪರಿಣಾಮ ದೇಶದ ಮರ್ಯಾದೆ ಮಣ್ಣುಪಾಲಾಗಿದೆ. ಭಾರತದಲ್ಲಿ ಪತ್ರಕರ್ತರನ್ನು ಹತ್ತಿಕ್ಕಿದಂತೆ ಅಮೆರಿಕದಲ್ಲೂ ಹತ್ತಿಕ್ಕಲು ಮುಂದಾಗುವ ಬಿಜೆಪಿಯ ಟೂಲ್‌ಕಿಟ್ ಆರ್ಮಿಗೆ ದೇಶದ ಘನತೆಯ ಬಗ್ಗೆ ಕಿಂಚಿತ್ ಕಾಳಜಿ ಇಲ್ಲವೇಕೆ?‘ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಅಮೆರಿಕ ಪ್ರವಾಸದ ವೇಳೆ ಅಲ್ಲಿನ ಅಧ್ಯಕ್ಷ ಜೋ ಬೈಡನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ವಾಲ್ ಸ್ಟ್ರೀಟ್ ಜರ್ನಲ್‌ನ ಪತ್ರಕರ್ತೆ ಸಬ್ರಿನಾ ಸಿದ್ದಿಕ್ಕಿ ಅವರು, ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಅವುಗಳ ಸುಧಾರಣೆ ಹಾಗೂ ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದರು.
ಪತ್ರಿಕಾಗೋಷ್ಠಿಯಾದ ಮಾರನೇ ದಿನದಿಂದಲೇ ಆ ಪತ್ರಕರ್ತೆಗೆ ಆನ್‌ಲೈನ್ ವೇದಿಕೆಗಳ ಮೂಲಕ ನಿಂದನೆಗಳು ಆರಂಭವಾಗಿದ್ದವು. ಅವರ ಪ್ರಶ್ನೆಗಳು ಯಾರಿಂದಲೋ ‘ಪ್ರೇರಿತ’ವಾಗಿವೆ ಮತ್ತು ಅವರು ‘ಪಾಕಿಸ್ತಾನಿ ಇಸ್ಲಾಮಿಸ್ಟ್’ ಎಂದೆಲ್ಲ ಕೆಲವರು ಅಪಾದನೆಗಳನ್ನು ಮಾಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಶ್ವೇತಭವನದ ಸಮನ್ವಯಕಾರ (ಕಾರ್ಯತಂತ್ರ ಸಂವಹನ) ಜಾನ್ ಕಿರ್ಬಿ, ‘ಈ ಕಿರುಕುಳದ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾದದ್ದು. ಪತ್ರಕರ್ತರಿಗೆ ಎದುರಾಗುವ ಯಾವುದೇ ಬಗೆಯ ಕಿರುಕುಳವನ್ನು ನಾವು ಪೂರ್ಣವಾಗಿ ಖಂಡಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.