ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 30ರಷ್ಟು ಪಠ್ಯಕ್ರಮ ಕಡಿತ; ಟಿಪ್ಪು,ಜೀಸಸ್‌, ಪ್ರವಾದಿ,ರಾಯಣ್ಣ ಪಾಠಕ್ಕೆ ಕೊಕ್‌

120 ಶಾಲಾ ದಿನ ನಿರೀಕ್ಷೆ , ಪುನರಾವರ್ತಿತ ಅಧ್ಯಾಯ ಪರಿಶೀಲಿಸಿ ಶೇ 30ರಷ್ಟು ಪಠ್ಯಕ್ರಮ ಕಡಿತ
Last Updated 28 ಜುಲೈ 2020, 20:23 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2020–21) ಮಾತ್ರ ಅನ್ವಯಿಸುವಂತೆ ಒಂದರಿಂದ 10ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಶೇ 30ರಷ್ಟು ಕಡಿತಗೊಳಿಸಲಾಗಿದೆ. ಈ ಪೈಕಿ, ಜೀಸಸ್‌, ಪ್ರವಾದಿ ಮೊಹಮದ್‌, ಹೈದರಾಲಿ, ಟಿಪ್ಪು ಸುಲ್ತಾನ್‌, ರಾಣಿ ಅಬ್ಬಕ್ಕ ಹಾಗೂ ಸಂವಿಧಾನಕ್ಕೆ ಸಂಬಂಧಿಸಿದ ಕೆಲ ಪಠ್ಯವನ್ನು ಕೈಬಿಡಲಾಗಿದೆ.

ಸೆ. 1ರಿಂದ ಶಾಲೆಗಳನ್ನು ಆರಂಭಿಸಬಹುದು ಎಂಬ ನಿರೀಕ್ಷೆಯಲ್ಲಿ ಒಟ್ಟು 120 ಶಾಲಾ ಕಾರ್ಯನಿರ್ವಹಣಾ ದಿನಗಳನ್ನು ಪರಿಗಣಿಸಿ ಪಠ್ಯವನ್ನು ಕಡಿತಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಎಲ್ಲ ಪಠ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಪುನರಾವರ್ತಿತ ಕ್ಷೇತ್ರ, ಸಾಮರ್ಥ್ಯ, ಹಿಂದಿನ ತರಗತಿಯಲ್ಲಿ ಕಲಿಕೆ ಮತ್ತು ಮುಂದಿನ ತರಗತಿಗಳಲ್ಲಿ ಹೆಚ್ಚಿನ ಕಲಿಕೆಗೆ ಸಿಗುವ ಅವಕಾಶ ಆಧರಿಸಿ ಪಠ್ಯಕ್ರಮ ಕಡಿತಗೊಳಿಸಲಾಗಿದೆ ಎಂದು ಇಲಾಖೆಯು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಯಾವುದಕ್ಕೆ ಕೊಕ್‌: ಏಳನೇ ತರಗತಿ ಸಮಾಜ ಅಧ್ಯಯನ ವಿಷಯ ದಲ್ಲಿ ಹೈದರಾಲಿ, ಟಿಪ್ಪುಸುಲ್ತಾನ್‌, ಮೈಸೂ ರಿನ ಚಾರಿತ್ರಿಕ ಸ್ಥಳ ಪರಿಚಯಿಸುವ 5ನೇ ಅಧ್ಯಾಯವನ್ನು ಕೈ ಬಿಡಲಾಗಿದೆ. ಪ್ರತ್ಯೇಕ ತರಗತಿ ನಡೆಸದೆ, ಮನೆ ಯಲ್ಲೇಚಟುವಟಿಕೆ ಮತ್ತು ಪಿಪಿಟಿ ಮೂಲಕ ಈ ಪಾಠಗಳನ್ನು ಕಲಿಸ ಬಹುದು ಎಂದು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಕಾರಣ ನೀಡಿದೆ.

10ನೇ ತರಗತಿಯ 4ನೇ ಅಧ್ಯಾಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಟವನ್ನು ಪರಿಚಯಿಸುವ ಪಾಠಗಳಿದ್ದವು. ಅದರಲ್ಲಿ ಹೈದರಾಲಿ, ಟಿ‍ಪ್ಪು ಸುಲ್ತಾನ್‌, ಹಲಗಲಿಯ ವೀರ ಬೇಡರ ದಂಗೆ, ಕಿತ್ತೂರು ರಾಣಿ ಚನ್ನಮ್ಮ– ಸಂಗೊಳ್ಳಿ ರಾಯಣ್ಣನ ದಂಗೆ ಗಳನ್ನು ಪರಿಚಯಿಸುವ ಪಾಠಗಳನ್ನು ಕೈಬಿಡಲಾಗಿದ್ದು, ಪ್ರಾಜೆಕ್ಟ್ ಮತ್ತು ಚಾರ್ಟ್‌ ಮೂಲಕ ಕಲಿಸಬಹುದು ಎಂದು ತಿಳಿಸಲಾಗಿದೆ.

9ನೇ ತರಗತಿಯಲ್ಲಿ ಕಲಿಯಲು ಅವಕಾಶ ಇದೆ ಎಂಬ ಕಾರಣಕ್ಕೆ 7ನೇ ತರಗತಿಯ ಪಠ್ಯಪುಸ್ತಕದಲ್ಲಿದ್ದ ಸಂವಿಧಾನ ರಚನಾ ಕರಡು ಸಮಿತಿ ಮತ್ತು ಸಂವಿಧಾನದ ಪ್ರಮುಖ ಅಂಶಗಳ ಭಾಗವನ್ನು ಕೈ ಬಿಡಲಾಗಿದೆ. ಅದೇ ತರಗತಿಯ ಪಠ್ಯದಲ್ಲಿದೆ ಎಂಬ ಕಾರಣಕ್ಕೆ 6ನೇ ತರಗತಿ ಪಠ್ಯದಲ್ಲಿದ್ದ ಜೀಸಸ್‌ ಮತ್ತು ಪ್ರವಾದಿ ಮೊಹಮದ್‌ ಕುರಿತ ಪಾಠಗಳನ್ನು ಕೈ ಬಿಡಲಾಗಿದೆ.

‘ಹಲವು ಅಂಶಗಳನ್ನು ಗಮನದಲ್ಲಿಟ್ಟು ಕೆಲವು ಅಧ್ಯಾಯಗಳನ್ನು, ಕೆಲವು ಘಟಕ, ಉಪ ಘಟಕಗಳನ್ನು ಕೈ ಬಿಡಲಾಗಿದೆ. ಮುಂದಿನ ತರಗತಿಗಳಲ್ಲಿ ಅದೇ ಅಧ್ಯಾಯಗಳನ್ನು ಕಲಿಯಲು ಅವಕಾಶ ಇದೆ’ ಎಂದು ಇಲಾಖೆ ಹೇಳಿದೆ. ‘ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು, ವಿಷಯ ತಜ್ಞರು‌, ಡಿಎಸ್‌ ಇಆರ್‌ಟಿ ಅಧಿಕಾರಿಗಳು ಮತ್ತು ಶಿಕ್ಷಕರ ಜೊತೆ ಸಮಾಲೋಚಿಸಿ ಪಠ್ಯಕ್ರಮ ಕಡಿತಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಪಠ್ಯಪುಸ್ತಕ ಸಂಘದ ಆಡಳಿತ ವ್ಯವಸ್ಥಾಪಕ ಎಂ.ಪಿ. ಮಾದೇಗೌಡ ಹೇಳಿದರು.

ಕರ್ನಾಟಕ ಪಠ್ಯ ಪುಸ್ತಕ ಸಂಘದ (ಕೆಟಿಬಿಎಸ್‌) ವೆಬ್‌ಸೈಟ್‌ನಲ್ಲಿ (http://www.ktbs.kar.nic.in/ reduction-en.asp) ಪರಿಷ್ಕೃತ ಮತ್ತು ಕಡಿತಗೊಳಿಸಿದ ಪಠ್ಯಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

****

ಟಿಪ್ಪು ಸುಲ್ತಾನ್ ಎನ್ನುವ ಹೆಸರೇ ಕೊಡಗಿಗೆ ಅಪಮಾನ‌. ಟಿಪ್ಪು ಮಾಡಿರುವುದು ಎಲ್ಲವೂ ಅನ್ಯಾಯದ ಕೆಲಸಗಳೇ. ಪಠ್ಯದಿಂದ ಕೈಬಿಟ್ಟಿರುವುದು ಸಂತಸದ ವಿಷಯ. ಸರ್ಕಾರಕ್ಕೆ ಧನ್ಯವಾದ

ಎಂ.ಪಿ. ಅಪ್ಪಚ್ಚು ರಂಜನ್‌, ಬಿಜೆಪಿ ಶಾಸಕ

***

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕರಾಗಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಮರು ವ್ಯಾಖ್ಯಾನಿಸುವ, ಮರುರೂಪಿಸುವ ಬಗೆಯ ಮೌಲಿಕ ಚರ್ಚೆಗಳು ನಡೆಯುತ್ತಿರುವಾಗಲೇ, ಪಠ್ಯಪುಸ್ತಕದಲ್ಲಿ ಕಡಿತಗೊಳಿಸಿರುವ ಪಾಠಗಳ ಪಟ್ಟಿ ನೋಡಿದರೆ ಆತಂಕವೆನಿಸುತ್ತದೆ. ಈ ಬೆಳವಣಿಗೆಯು ಶಿಕ್ಷಣದ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಿದೆ. ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುವ ಅಗತ್ಯವಿದೆ.

ನಿರಂಜನಾರಾಧ್ಯ. ವಿ. ಪಿ,ಅಭಿವೃದ್ಧಿ ಶಿಕ್ಷಣ ತಜ್ಞ

***

ಟಿಪ್ಪು ಸುಲ್ತಾನ್ ವಿಚಾರ ಒಂದು ಜಾತಿ, ವರ್ಗಕ್ಕೆ ಸೇರಿದ್ದಲ್ಲ. ಇತಿಹಾಸದ ಭಾಗ. ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಇತಿಹಾಸ ತಿರುಚಲು ಹೊರಟಿರುವುದು ಹಾಗೂ ಸಂವಿಧಾನವನ್ನು ತಿರುಚಲು ಪ್ರಯತ್ನಿಸುತ್ತಿರುವುದು ಖಂಡನೀಯ. ಇತಿಹಾಸ ಬದಲಾವಣೆ ಆಗಬಾರದು. ಜನರ ದಾರಿ ತಪ್ಪಿಸಲು ನಾವು ಬಿಡಲ್ಲ. ಇದು ಕಾಂಗ್ರೆಸ್ ಪಕ್ಷದ ನಿಲುವು. ಇದರ ಸಾಧಕ–ಬಾಧಕ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸುತ್ತೇವೆ.

ಡಿ.ಕೆ. ಶಿವಕುಮಾರ್,ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT