ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ಕಾನೂನುಗಳಿಗೆ ರಾಜ್ಯ ಸರ್ಕಾರದ ಸಡ್ಡು

ಹೊಸ ಕಾನೂನುಗಳಿಂದ ಪೊಲೀಸ್ ಆಳ್ವಿಕೆ: ಸರ್ಕಾರದ ವಾದ
Published 1 ಜುಲೈ 2024, 20:16 IST
Last Updated 1 ಜುಲೈ 2024, 20:16 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ದೇಶದಾದ್ಯಂತ ಜಾರಿಯಾದ ಮೊದಲ ದಿನವೇ ರಾಜ್ಯದ ಕಾಂಗ್ರೆಸ್‌ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದೇ ಜುಲೈ 15ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲೇ ಕೇಂದ್ರದ ಹೊಸ ಕಾನೂನುಗಳಿಗೆ ತಿದ್ದುಪಡಿ ತರುವುದಾಗಿ ಘೋಷಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ‘ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳಲ್ಲಿ ಹಲವು ಲೋಪಗಳು ಉಳಿದುಕೊಂಡಿವೆ. ಈ ಮೂರು ಹೊಸ ಕಾನೂನುಗಳಿಂದಾಗಿ ದೇಶದಲ್ಲಿ ಪೊಲೀಸ್‌ ಆಳ್ವಿಕೆ ಆರಂಭವಾಗಲಿದೆ. ಇದು ಸ್ವಾತಂತ್ರ್ಯ ಚಳವಳಿಯ ಆಶಯಗಳು, ಧ್ಯೇಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಕಾನೂನುಗಳ ಜಾರಿಯಿಂದ ಮಾನವ ಹಕ್ಕುಗಳ ಉಲ್ಲಂಘನೆಗಳೂ ಅಧಿಕವಾಗಲಿವೆ’ ಎಂದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳೆದ ಆಗಸ್ಟ್‌ನಲ್ಲಿ ಪತ್ರ ಬರೆದು ಮೂರು ಕಾನೂನುಗಳ ಕುರಿತು ಅಭಿಪ್ರಾಯ ಕೇಳಿದ್ದರು. ಮುಖ್ಯಮಂತ್ರಿ ಸೂಚನೆ ಮೇರೆಗೆ ಕಾನೂನು ತಜ್ಞರ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ್ದ ವರದಿಯನ್ನು ಕಾನೂನು ಇಲಾಖೆ ಪರಿಶೀಲನೆ ನಡೆಸಿದ ನಂತರ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯದ ಅಭಿಪ್ರಾಯ, ಬದಲಾವಣೆಗಳ ಮನವಿಗೆ ಕೇಂದ್ರ ಕಿಂಚಿತ್ತೂ ಸ್ಪಂದಿಸಿಲ್ಲ. ಜನಾಭಿಪ್ರಾಯವನ್ನೂ ಕಡೆಗಣಿಸಿದೆ. ಕಾನೂನಿನ ಹಲವು ಅಂಶಗಳಲ್ಲಿ ಸ್ಪಷ್ಟ ವ್ಯಾಖ್ಯಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ರೂಪಿಸಿದ ಸರ್ಕಾರಕ್ಕೆ ಆ ಅವಧಿಯಲ್ಲಿ ಜಾರಿ ಮಾಡಲು ನೈತಿಕ ಹಕ್ಕಿರುತ್ತದೆ. ಆದರೆ, ಸರ್ಕಾರದ ಅವಧಿ ಮುಗಿದ ಬಳಿಕ, ಕಾನೂನು ಜಾರಿ ಮಾಡಲು ದಿನ ನಿಗದಿ ಮಾಡುವುದು ಅನೈತಿಕ ಹಾಗೂ ರಾಜಕೀಯ ಅಸಂಬದ್ಧ ಕ್ರಮ. ಕಾನೂನು ಮಾಡಿದಾಗ ಇದ್ದ ಸರ್ಕಾರದ ಅವಧಿ ಲೋಕಸಭಾ ಚುನಾವಣೆ ಬಳಿಕ ಮುಗಿದು ಹೋಗಿದೆ. ಹೀಗಿರುವಾಗ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜುಲೈ 1ರಂದು ಕಾಯ್ದೆ ಜಾರಿ ಮಾಡಬೇಕು ಎಂದು ಸೂಚಿಸಿದ್ದು ಸರಿಯಲ್ಲ ಎಂದರು.

ಜುಲೈ 4ರಂದು ನಡೆಯುವ ಸಂ‍ಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು. ಮೂರು ಕಾನೂನುಗಳಲ್ಲಿನ  23 ಅಂಶಗಳಿಗೆ ತಿದ್ದುಪಡಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.  

ಕಾನೂನುಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸಂವಿಧಾನ ಅನುಚ್ಛೇದ 7ರ 3 ನೇ ಪಟ್ಟಿಯಲ್ಲಿ ದತ್ತವಾದ ಅಧಿಕಾರ ಬಳಸಿ ಮೂರು ಕಾನೂನುಗಳಿಗೂ ತಿದ್ದುಪಡಿ ತರಲಾಗುತ್ತಿದೆ.
–ಎಚ್‌.ಕೆ. ಪಾಟೀಲ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ವಿರೋಧಕ್ಕೇನು ಕಾರಣ: ರಾಜ್ಯದ ಪ್ರತಿಪಾದನೆ

* ಸ್ವಾತಂತ್ರ್ಯ ಹೋರಾಟದ ಮೌಲ್ಯಗಳಿಗೆ ತಿಲಾಂಜಲಿ ಇಡಲಾಗಿದೆ

*ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುವುದು ಅಪರಾಧ ಎಂದು ಹೊಸ ಕಾನೂನು ಹೇಳುತ್ತದೆ

* ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಲ್ಲ ಎಂಬುದು ಸರಿಯಲ್ಲ

* ರಾಷ್ಟ್ರಪಿತ ರಾಷ್ಟ್ರೀಯ ಲಾಂಛನ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದವರ ವಿರುದ್ಧ ಕ್ರಮಕ್ಕೆ ಅವಕಾಶವಿಲ್ಲ ಎಂಬುದು ಹೊಸ ಕಾನೂನಿನ ವಾದ  

* ಸಂಘಟಿತ ಅಪರಾಧ ಎಂದು ಆರೋಪಿಸಿ ವ್ಯಕ್ತಿಗಳ ಮೇಲೆ ಗುಂಪು ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ವಿವೇಚಾನಾಧಿಕಾರ ನೀಡಲಾಗಿದೆ

* ಆರೋಪಿಯ ಆಸ್ತಿ ಜಪ್ತಿ ಮಾಡಲು ಪೊಲೀಸರಿಗೆ ಅಧಿಕಾರ (ಮೊದಲು ಆಸ್ತಿ ಜಪ್ತಿ ಮಾಡಲು ನ್ಯಾಯಾಲಯದ ಅನುಮತಿ ಪಡೆಯಬೇಕಿತ್ತು)

* ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ ತರುವ ಅಪರಾಧಗಳಿಗೆ ಕೇವಲ ಗರಿಷ್ಠ 3 ವರ್ಷ ಶಿಕ್ಷೆ ಅಥವಾ ₹1 ಸಾವಿರ ದಂಡ ಎಂದು ಬದಲಾಯಿಸಲಾಗಿದೆ

* ಯಾವುದೇ ಆರೋಪಿಗಳಿಗೆ ಮೊದಲು 15 ದಿನ ಇದ್ದ ಪೊಲೀಸ್‌ ಕಸ್ಟಡಿ ಅವಧಿ 90 ದಿನಗಳವರೆಗೆ ವಿಸ್ತರಣೆ

* ಮೃತ ದೇಹದ ಮೇಲೆ ಅತ್ಯಾಚಾರ ಎಸಗುವುದು ಅಪರಾಧವಲ್ಲ ಎಂದೂ ಕಾನೂನು ಹೇಳುತ್ತದೆ

ಹಿಂದೆ ದಾಖಲಾದ ಪ್ರಕರಣಗಳಿಗೆ ಅನ್ವಯವಿಲ್ಲ

ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳು ಜುಲೈ 1ರಿಂದ ಜಾರಿಯಾಗಿರುವುದರಿಂದ ಶತಮಾನದ ಹಿಂದೆ ರೂಪುಗೊಂಡಿದ್ದ ಕಾನೂನುಗಳು ಅಸ್ತಿತ್ವ ಕಳೆದುಕೊಂಡಿದೆ. 2024ರ ಜೂನ್‌ 30ರವರೆಗೆ ದಾಖಲಾದ ಎಲ್ಲ ಪ್ರಕರಣಗಳು ಇತ್ಯರ್ಥವಾಗುವರೆಗೂ ಹಿಂದಿನ ಕಾನೂನುಗಳ ಅನ್ವಯವೇ ವಿಚಾರಣೆಗಳು ನಡೆದು ಶಿಕ್ಷೆ ನಿಗದಿ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಈಗ ಜಾರಿಯಾದ ನಿಯಮಗಳಿಗೆ ತಿದ್ದುಪಡಿ ಪ್ರಕ್ರಿಯೆ ಆರಂಭಿಸಿ ಎರಡೂ ಸದನಗಳಲ್ಲಿ ಒಪ್ಪಿಗೆ ದೊರೆತು ಅದಕ್ಕೆ ರಾಷ್ಟ್ರಪತಿ ಸಮ್ಮತಿ ದೊರಕುವವರೆಗೂ ಈಗ ಜಾರಿಯಾದ ಹೊಸ ಕಾನೂನು ಅಸ್ತಿತ್ವದಲ್ಲಿ ಇರುತ್ತದೆ. ಯಾವುದೇ ರಾಜ್ಯಗಳಿಗೆ ಇಷ್ಟವಿರಲಿ ಬಿಡಲಿ ಆ ರಾಜ್ಯಗಳು ಮಾಡಿದ ತಿದ್ದುಪಡಿ ಅಧಿಕೃತವಾಗಿ ಜಾರಿಯಾಗುವರೆಗೂ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನುಗಳನ್ನು ಅನುಸರಿಸಲೇಬೇಕು.

‘ಹೊಸ ಕಾನೂನಿಗೆ ಪೂರಕವಾಗಿ ತಂತ್ರಾಂಶ’

‘ಮೂರು ಅಪರಾಧ ಕಾನೂನುಗಳು ಸೋಮವಾರದಿಂದ ಜಾರಿಯಾಗಿವೆ. ಇದನ್ನು ಜಾರಿಗೊಳಿಸುವ ಸಂಬಂಧ ನಾವು ಒಂದು ತಂತ್ರಾಂಶ (ಆ್ಯಪ್) ಅಭಿವೃದ್ಧಿಪಡಿಸಿದ್ದೇವೆ.‌ ಇನ್ನು ಮುಂದೆ ದಾಖಲಾಗುವ ಪ್ರಕರಣಗಳಿಗೆ ಈ ಕಾನೂನುಗಳು ಅನ್ವಯ ಆಗಲಿವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು ‘ಈ ಕಾನೂನುಗಳ ಪರಿಣಾಮ ಏನು ಎಂದು ಈಗಲೇ ಹೇಳಲು ಆಗಲ್ಲ. ಸ್ವಲ್ಪ ದಿನಗಳ ನಂತರ ಇದರ ಯಶಸ್ಸಿನ ಬಗ್ಗೆ ಗೊತ್ತಾಗಲಿದೆ’ ಎಂದರು. ‘ಸೋಮವಾರದಿಂದ ದಾಖಲಾಗುವ ಎಲ್ಲ ಪ್ರಕರಣಗಳು ಹೊಸ ಕಾನೂನುಗಳಡಿ ಬರುತ್ತವೆ. ಹೊಸ ಕಾನೂನುಗಳ ಜಾರಿ ಬಗ್ಗೆ ಕಾನ್‌ಸ್ಟೆಬಲ್‌ಗಳಿಂದ ಅಧಿಕಾರಿಗಳವರೆಗೂ ತರಬೇತಿ ನೀಡಲಾಗಿದೆ. ಇದಕ್ಕಾಗಿ ಪೊಲೀಸರಿಗೆ ಆ್ಯಪ್ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT