ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರದ ಹಿಂದಿರುವುದು ಫೇಕ್ ಫ್ಯಾಕ್ಟರಿಯೋ, ಪೆನ್‌ಡ್ರೈವ್ ಶೂರರೋ: ಕಾಂಗ್ರೆಸ್ ಟೀಕೆ

Published 8 ಆಗಸ್ಟ್ 2023, 9:32 IST
Last Updated 8 ಆಗಸ್ಟ್ 2023, 9:32 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಲಂಚ ನೀಡುವಂತೆ ತಮ್ಮನ್ನು ಒತ್ತಾಯಿಸಿದರು’ ಎಂದು ಆರೋಪಿಸಿ ಕೃಷಿ ಇಲಾಖೆ ಅಧಿಕಾರಿಗಳು ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರಾಜಭವನ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ವಿಪಕ್ಷಗಳ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಭ್ರಷ್ಟಾಚಾರ ಆರೋಪ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನಕಲಿ ಪೆನ್ ಡ್ರೈವ್ ಆಯ್ತು, ಶಾಸಕ ಬಿ.ಆರ್. ಪಾಟೀಲ್ ಹೆಸರಿನ ನಕಲಿ ಪತ್ರ ಆಯ್ತು, ಈಗ ಅಧಿಕಾರಿಗಳ ಹೆಸರಲ್ಲಿ ನಕಲಿ ದೂರು! ಸರ್ಕಾರವನ್ನು ಎದುರಿಸಲು ಅಸಲಿ ವಿಷಯಗಳಿಲ್ಲದೆ ವಿಪಕ್ಷಗಳು ನಕಲಿ ವಿಷಯ ಸೃಷ್ಟಿಸಿ ಹೆದರಿಸಲು ಮುಂದಾಗಿವೆ’ ಎಂದು ಟೀಕಿಸಿದೆ.

‘ಪತ್ರದಲ್ಲಿ ಹೆಸರಿಸಿರುವ ಅಧಿಕಾರಿಗಳು ಯಾರೂ ಮಂಡ್ಯದಲ್ಲಿಲ್ಲ, ಈ ಪತ್ರದ ಕುರಿತು ಮಾಹಿತಿಯೂ ಮಂಡ್ಯದ ಅಧಿಕಾರಿಗಳಿಗಿಲ್ಲ ಎಂದು ಖಚಿತಪಡಿಸಿದ್ದಾರೆ, ಈ ನಕಲಿ ಪತ್ರಗಳ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿದೆ. ಇದರ ಹಿಂದಿರುವುದು ‌ಬಿಜೆಪಿ ಫೇಕ್ ಫ್ಯಾಕ್ಟರಿಯೋ ಅಥವಾ ಪೆನ್ ಡ್ರೈವ್ ಶೂರರೋ ಎಂಬುದನ್ನು ಬಯಲಿಗಿಡುತ್ತೇವೆ’ ಎಂದು ಕಾಂಗ್ರೆಸ್ ಗುಡುಗಿದೆ.

ರಾಜಭವನದ ಪತ್ರ

ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರ ಪರವಾಗಿ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಜಿ.ಪ್ರದೀಪ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮ ಅವರಿಗೆ ಬರೆದಿರುವ ಪತ್ರ ಸೋಮವಾರ ಬಹಿರಂಗಗೊಂಡಿದೆ.

‘ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವ ಪುರ, ನಾಗಮಂಗಲ, ಶ್ರೀರಂಗ ಪಟ್ಟಣ ಮತ್ತು ಮದ್ದೂರು ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಯು ಸಚಿವ ಚಲುವರಾಯಸ್ವಾಮಿ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಅಧಿಕಾರಿಗಳು ಉಲ್ಲೇಖಿಸಿರುವಂತೆ ಅಧಿಕಾರಿ ಮತ್ತು ಸಿಬ್ಬಂದಿ ಯಿಂದ ₹6 ಲಕ್ಷದಿಂದ ₹8 ಲಕ್ಷದವರೆಗೆ ನೀಡುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ. ಲಂಚ ಕೇಳುವ ಇಂತಹ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಲು ಕ್ರಮ ವಹಿಸದಿದ್ದರೆ ಅಧಿಕಾರಿಗಳು ಕುಟುಂಬದ ಸದಸ್ಯರ ಜತೆಗೆ ವಿಷ ಕುಡಿ ಯುವುದಾಗಿ ತಿಳಿಸಿದ್ದಾರೆ. ಈ ದೂರನ್ನು ನಿಯಮದ ಅನುಸಾರ ಪರಿಶೀಲಿಸಿ, ಸೂಕ್ತ ಕ್ರಮವಹಿಸಬೇಕು’ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸೂಚಿಸಿದ್ದಾರೆ.

ಓದಿ...

ಸಚಿವ ಚಲುವರಾಯಸ್ವಾಮಿ ವಿರುದ್ಧ 7 ಅಧಿಕಾರಿಗಳ ದೂರು: ಸಿಎಸ್‌ಗೆ ರಾಜಭವನ ಪತ್ರ

ಸಚಿವ ಚಲುವರಾಯಸ್ವಾಮಿ ವಿರುದ್ದ ಅಧಿಕಾರಿಗಳ ಪತ್ರ ಪ್ರಕರಣ ಸಿಐಡಿ ತನಿಖೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT