ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಲಿತರಷ್ಟೇ ಸರ್ಕಾರಿ ಉದ್ಯೋಗ: ಮಸೂದೆ ಮಂಡಿಸಿದ ಸರ್ಕಾರ

Last Updated 22 ಸೆಪ್ಟೆಂಬರ್ 2022, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಅಥವಾ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಎಸ್‌ಎಸ್‌ಎಲ್‌ಸಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿ, ಉತ್ತೀರ್ಣರಾಗಿರುವುದನ್ನು ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ–2022’ ಅನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಯಿತು.

ಕನ್ನಡವನ್ನು ಅಧಿಕೃತ ರಾಜ್ಯ ಭಾಷೆ ಎಂದು ತೀರ್ಮಾನಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಸರ್ಕಾರದ ಎಲ್ಲ ವ್ಯವಹಾರಗಳಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಅಂಶ ಮಸೂದೆಯಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಸದನದಲ್ಲಿ ಮಸೂದೆಯನ್ನು ಮಂಡಿಸಿದರು.

‘ಒಬ್ಬ ವ್ಯಕ್ತಿ ಅಥವಾ ಆತನ ಪೋಷಕರು 15 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದಲ್ಲಿ ಮತ್ತು ಕನ್ನಡ ಓದಲು ಹಾಗೂ ಬರೆಯಲು ಬರುತ್ತಿದ್ದಲ್ಲಿ ಆತ ಕನ್ನಡಿಗ’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಮಸೂದೆಯಲ್ಲಿನ ಅಂಶಗಳ ಅನುಷ್ಠಾನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯಕ್ಕೆ ಅಧಿಕೃತ ಭಾಷಾ ಜಾರಿ ನಿರ್ದೇಶನಾಲಯದ ಸ್ಥಾನಮಾನವನ್ನೂ ನೀಡುವ ಪ್ರಸ್ತಾವವಿದೆ.

‘ಕನ್ನಡದ ಅಭಿವೃದ್ಧಿಗಾಗಿ ಈ ಹಿಂದೆ ಕರ್ನಾಟಕ ರಾಜಭಾಷಾ ಕಾಯ್ದೆ–1963, ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಅಧಿಕೃತ ಭಾಷೆ) ಕಾಯ್ದೆ–1981 ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ– 1994 ಜಾರಿಗೊಳಿಸಲಾಗಿತ್ತು. ಅವುಗಳ ಅನುಷ್ಠಾನದಿಂದ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಜಾರಿಗೊಳಿಸುವ ಕೆಲಸ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಈ ಕಾರಣದಿಂದ ಮಸೂದೆ ತರಲಾಗಿದೆ’ ಎಂದು ರಾಜ್ಯ ಸರ್ಕಾರ ವಿವರಿಸಿದೆ.

ಮಸೂದೆಯಲ್ಲಿರುವ ಅಂಶಗಳನ್ನು ಜಾರಿಗೊಳಿಸಲು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರಾಧಿಕಾರಗಳನ್ನು ನೇಮಿಸುವ ಪ್ರಸ್ತಾವವಿದೆ. ಈ ಮಸೂದೆಯ ಅನುಷ್ಠಾನದಿಂದ ಸರ್ಕಾರದ ಬೊಕ್ಕಸದ ಮೇಲೆ ₹ 3.21 ಕೋಟಿ ಹೊರೆ ಬೀಳಲಿದೆ.

ಕನ್ನಡ ಬಳಕೆ ಉಲ್ಲಂಘಿಸಿದರೆ ₹20 ಸಾವಿರ ದಂಡ

l ಕನ್ನಡ ಭಾಷೆಯ ಬಳಕೆ ವಿಚಾರದಲ್ಲಿ ನಿಯಮ ಉಲ್ಲಂಘನೆಗೆ ₹ 20,000ದವರೆಗೂ ದಂಡ.

l ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಭಾಷೆಯ ಬಳಕೆಗೆ ಉತ್ತೇಜನ.

l ಎಸ್‌ಎಸ್‌ಎಲ್‌ಸಿವರೆಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡ್ಡಾಯ.

l ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಮೀಸಲಾತಿ.

l ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು, ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಕನ್ನಡ ಭಾಷೆಯ ಪ್ರಚಾರಕ್ಕೆ ಉತ್ತೇಜನ.

l ಇ– ಆಡಳಿತ ಮತ್ತು ಇ–ಟೆಂಡರ್‌ ಪ್ರಕ್ರಿಯೆಯಲ್ಲಿ ಕನ್ನಡದ ಬಳಕೆ.

l ಕನ್ನಡಿಗರಿಗೆ ನಿಗದಿತ ಪ್ರಮಾಣದ ಉದ್ಯೋಗ ನೀಡುವ ಉದ್ದಿಮೆಗಳಿಗೆ ಜಮೀನು ಮಂಜೂರಾತಿ ಮತ್ತು ತೆರಿಗೆ ರಿಯಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT