ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನದಲ್ಲಿ (ಎಸ್‌ಸಿಎಸ್‌ಪಿ– ಟಿಎಸ್‌ಪಿ) ₹11 ಸಾವಿರ ಕೋಟಿಯನ್ನು ಐದು ‘ಗ್ಯಾರಂಟಿ’ಗಳ
ಜಾರಿಗಾಗಿ ಬಳಕೆ ಮಾಡುವ ರಾಜ್ಯ ಪರಿಷತ್‌ನ ತೀರ್ಮಾನಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳ
ಲಾಗಿತ್ತು. ಗ್ಯಾರಂಟಿಗಳಿಗಾಗಿ ಈ ಅನುದಾನ ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ನಿಗದಿತ ಉದ್ದೇಶಗಳಿಗೆ ಮಾತ್ರವೇ ಬಳಸಬೇಕು ಎಂದು ದಲಿತ ಸಂಘಟನೆಗಳು ಆಗ್ರಹಿಸಿವೆ.
ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ,ಎಸ್‌ಸಿಎಸ್‌ಪಿ– ಟಿಎಸ್‌ಪಿ ಕಾಯ್ದೆಯಡಿ ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ವರ್ಗಾವಣೆ ಮಾಡು ತ್ತಿರುವುದು ಈ ಸಮುದಾಯದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ಹೇಳಿದ್ದಾರೆ.
ಈ ನಿರ್ಣಯದಿಂದಾಗಿ, ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ– ಟಿಎಸ್‌ಪಿ ಯೋಜನೆಗೆ ₹34,000 ಕೋಟಿ ಬದಲು ಕೇವಲ ₹23,000 ಕೋಟಿಗೆ ಅನುಮೋದನೆ ನೀಡಿದಂತಾಗಿದೆ. ಇದು ಎಸ್‌ಸಿಪಿ ಕಾಯ್ದೆಯ ಉಲ್ಲಂಘನೆಯ ಜೊತೆಗೆ ಆ ಸಮುದಾಯಕ್ಕೆ ಕಾಂಗ್ರೆಸ್ ಮಾಡುತ್ತಿರುವ ದ್ರೋಹವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಎಚ್.ಸಿ.ಮಹದೇವಪ್ಪ ಅವರು ಅಸಹಾಯಕರಾಗಿ ಇದಕ್ಕೆ ಒಪ್ಪಿಕೊಂಡಂತಿದೆ. ಸರ್ಕಾರದ ನಡೆಯ ಬಗ್ಗೆ ಎಸ್‌ಸಿ, ಎಸ್‌ಟಿ ಸಮುದಾಯಕ್ಕಿರುವ ಅಸಮಾಧಾನವನ್ನು ಇದು ತೋರಿಸುತ್ತದೆ. ಈ ಸಮುದಾಯದ ಬಗ್ಗೆ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯ ಧೋರಣೆಯನ್ನೂ ಎತ್ತಿ ತೋರಿಸುತ್ತದೆ ಎಂದು ದೂರಿದ್ದಾರೆ.
ರಾಜ್ಯದಾದ್ಯಂತ ಹೋರಾಟ-ಕಾರಜೋಳ ಎಚ್ಚರಿಕೆ:
ಗ್ಯಾರಂಟಿಗೆ ವರ್ಗಾವಣೆ ಮಾಡಿರುವ ₹11,000 ಕೋಟಿಯನ್ನು ಹಿಂದಕ್ಕೆ ಪಡೆದು, ಅದರಲ್ಲಿ ₹2,500 ಕೋಟಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ನಿರ್ಮಾಣಕ್ಕೆ ಕೊಡಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ವಸತಿ ಶಾಲೆಗಳಿಗಾಗಿ ಭೂಮಿ ಖರೀದಿಗೆ ₹2,500 ಕೋಟಿ, ಗಂಗಾಕಲ್ಯಾಣ ಯೋಜನೆಗೆ ₹1,000 ಕೋಟಿ ನೀಡಬೇಕು ಬಸ್ಸಿನಲ್ಲಿ ಪುಕ್ಕಟೆ ಪ್ರಯಾಣ, ಉಚಿತ ವಿದ್ಯುತ್ ನೀಡಲು ಎಸ್‌ಸಿ–ಎಸ್‌ಟಿ ಅನುದಾನ ಬಳಸಿ
ಕೊಳ್ಳುವುದು ಮೋಸದಾಟ. ಈ ವಂಚನೆ ಮುಂದುವರಿದರೆ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
‘ಸರ್ಕಾರ ನಿಲುವು ಬದಲಿಸಬೇಕು’
‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದು ಕಾಯ್ದೆಯ ದುರ್ಬಳಕೆ. ಸರ್ಕಾರ ತನ್ನ ನಿಲುವು ಬದಲಿಸಿಕೊಂಡು, ಪರಿಶಿಷ್ಟರ ಅಭಿವೃದ್ಧಿಗೆ ಈ ಅನುದಾನ ಬಳಸಬೇಕು’ ಎಂದು ಕರ್ನಾಟಕ
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್
ಆಗ್ರಹಿಸಿದ್ದಾರೆ.
‘ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ₹11,000 ಕೋಟಿಯಷ್ಟು ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಾನೂನುಬಾಹಿರ ತೀರ್ಮಾನ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ಒದಗಿಸುತ್ತಿದ್ದ ಕಾಯ್ದೆಯ ಸೆಕ್ಷನ್ 7–ಡಿ ಅನ್ನು ರದ್ದುಗೊಳಿಸುವ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಈ ಸೆಕ್ಷನ್ ರದ್ದಾದ ನಂತರವೂ ಉಪ ಯೋಜನೆಗಳ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದು ದಲಿತ ಸಮುದಾಯಗಳನ್ನು ವಂಚಿಸುವ ಪ್ರಯತ್ನವಾಗಿದೆ’ ಎಂದು ಟೀಕಿಸಿದ್ದಾರೆ.
ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ದುರುಪಯೋಗ ಆದಾಗ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಸಿದ್ದರು. ಈಗ ಅವರ ಸಂಪುಟದ ಸಮಾಜ ಕಲ್ಯಾಣ ಸಚಿವರು ತದ್ವಿರುದ್ಧವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ’ ಎಂದಿದ್ದಾರೆ.
ದಲಿತ ಹಕ್ಕುಗಳ ಸಮಿತಿ ಎಚ್ಚರಿಕೆ
ದಲಿತರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಬದ್ಧವೆಂದು ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗೆ ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ಬಳಕೆ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಂದು ದಲಿತ ಹಕ್ಕುಗಳ ಸಮಿತಿ ಎಚ್ಚರಿಸಿದೆ.
‘2023–24ನೇ ಸಾಲಿನ ಬಜೆಟ್‌ನಲ್ಲಿ ₹34,293.69 ಕೋಟಿ ಹಣವನ್ನು ದಲಿತರಿಗೆ
ಮೀಸಲಿಟ್ಟಿದ್ದಾಗಿ ಹೇಳಿದ್ದರು. ಆದರೆ, ಎಡಗೈಯಲ್ಲಿ ಕೊಟ್ಟಂತೆ ಮಾಡಿ ಬಲಗೈಯಿಂದ ಗ್ಯಾರಂಟಿ ಯೋಜನೆಗಳ ಜಾರಿಗೆ ದಲಿತರ ಹಣವನ್ನು ಕಿತ್ತುಕೊಳ್ಳುತ್ತಿದ್ದಾರೆ. ಈ ಬಗ್ಗೆ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ಸಚಿವರು, ಶಾಸಕರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಲಾಗದ ಹೇಡಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಸಮಿತಿಯ ಸಂಚಾಲಕ ಬಿ. ರಾಜಶೇಖರಮೂರ್ತಿ ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಯೋಜನೆ ಅನುಷ್ಠಾನದ ಕುರಿತು ತನಿಖೆ ಕೈಗೊಳ್ಳಬೇಕು. ಈ ಯೋಜನೆಯ ಮೂಲ ಉದ್ದೇಶವನ್ನು ಜಾರಿಗಾಗಿ ಯೋಜನೆಗಳನ್ನು ಪುನರ್ ರೂಪಿಸಬೇಕು. ಬಡ ದಲಿತರಿಗೆ ಈ ಯೋಜನೆ ತಲುಪುವುದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.