ಬೆಂಗಳೂರು: ‘ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅದರ ಮೇಲಿನ ಬಡ್ಡಿ ಮೊತ್ತವನ್ನು ಮೂರು ತಿಂಗಳಲ್ಲಿ ಪಾವತಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಂಟಿ ಕಾರ್ಯದರ್ಶಿ ಬಿ.ಎಸ್.ಗುರುಸ್ವಾಮಿ ಹಾಗೂ ಇತರ 20 ನಿವೃತ್ತ ನೌಕರರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ಕೈಮಗ್ಗ ಅಭಿವೃದ್ಧಿ ನಿಗಮದ ಪರ ವಕೀಲರು ಹಾಜರಾಗಿ, ಗಳಿಕೆ ರಜೆ ನಗದೀಕರಣ ವಿಳಂಬಾಗಿರುವ ಹಿನ್ನೆಲೆಯಲ್ಲಿ ಅದರ ಮೇಲೆ ಬಡ್ಡಿ ಪಾವತಿಸುವುದಕ್ಕೆ ನಿಗಮದ ಸಮ್ಮತಿ ಇದೆ ಎಂದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಅರ್ಜಿದಾರರಾಗಿರುವ ನಿಗಮದ ನಿವೃತ್ತ ನೌಕರರಿಗೆ ಅವರ ರಜೆ ನಗದೀಕರಣ ಬಿಡುಗಡೆ ಮಾಡಲು ವಿಳಂಬ ಆಗಿರುವುದಕ್ಕೆ ಶೇ 8ರಂತೆ ಮೂರು ತಿಂಗಳಲ್ಲಿ ಬಡ್ಡಿ ಪಾವತಿಸಬೇಕು’ ಎಂದು ಆದೇಶಿಸಿ ಅರ್ಜಿ ವಿಲೇವಾರಿ ಮಾಡಿತು. ಅರ್ಜಿದಾರರ ಪರ ವಕೀಲ ಎಚ್.ಸಿ.ಸುಂದರೇಶ ವಾದ ಮಂಡಿಸಿದರು.