ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ಪ್ರತಿಧ್ವನಿ, ನಿಲ್ಲದ ವಾಗ್ವಾದ, 43 ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು

ಮೈಸೂರಿನಲ್ಲಿ 43 ಮಕ್ಕಳು ಪೂರ್ವಸಿದ್ಧತಾ ಪರೀಕ್ಷೆಗೆ ಗೈರು
Last Updated 15 ಫೆಬ್ರುವರಿ 2022, 19:47 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೌಢಶಾಲೆಗಳು ಪುನರಾರಂಭವಾದ ಎರಡನೇ ದಿನವೂ ವಿವಿಧ ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ಪ್ರತಿಧ್ವನಿಸಿದೆ. ಹಿಜಾಬ್‌ಗೆ ಅವಕಾಶವಿಲ್ಲ ಎಂದು ಮೈಸೂರಿನಲ್ಲಿ 43 ವಿದ್ಯಾರ್ಥಿನಿಯರು ಪೂರ್ವಸಿದ್ಧತಾ ಪರೀಕ್ಷೆಗೆ ಗೈರುಹಾಜರಾಗಿದ್ದಾರೆ. ಹಿಜಾಬ್ ಧರಿಸಿದ್ದ ಮಕ್ಕಳನ್ನು ವಿವಿಧೆಡೆ ವಾಪಸು ಕಳುಹಿಸಲಾಗಿದೆ. ಅಲ್ಲಲ್ಲಿ ಪ್ರತಿಭಟನೆಯಾಗಿ ವಿದ್ಯಾರ್ಥಿನಿಯರೇ ವಾಪಸು ಹೋಗಿದ್ದಾರೆ.

ತುಮಕೂರಿನಲ್ಲಿ ಬುರ್ಖಾ ಧರಿಸಿ ಬಂದಿದ್ದ ಪೋಷಕರಿಗೂ ಶಾಲಾ ಅಂಗಳ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ. ದಾವಣಗೆರೆ ಜಿಲ್ಲೆ ಸಾಸ್ವೆಹಳ್ಳಿ ಹಾಗೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಟೋಪಿ ಧರಿಸಿ ಶಾಲೆಗೆ ಬಂದಿದ್ದರು. ಹೊಳಲ್ಕೆರೆಯಲ್ಲಿ ಮನವೊಲಿಕೆ ಬಳಿಕ ಟೋಪಿ ತೆಗೆದು ತರಗತಿಗೆ ಹಾಜರಾದ ವಿದ್ಯಮಾನಗಳು ಮಂಗಳವಾರ ನಡೆದಿವೆ.

ಹೊಸದುರ್ಗದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಅತಿಥಿ ಉಪನ್ಯಾಸಕಿಯರು ಹಿಜಾಬ್ ತೆಗೆಯಲು ನಿರಾಕರಿಸಿದ್ದು, ರಜೆ ಪತ್ರ ನೀಡಿ ಶಾಲೆಯಿಂದ ನಿರ್ಗಮಿಸಿದ್ದಾರೆ.

ಈ ಇಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಕೋರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗೆ ಪತ್ರ ಬರೆಯಲು ಶಿಕ್ಷಕರಿಗೆ ಸೂಚಿಸಲಾಗಿದೆ. ಹಿಜಾಬ್ ವಿವಾದವು ಪೋಷಕರು–ಶಿಕ್ಷಕರ ನಡುವೆ ವಾಗ್ವಾದಕ್ಕೆ ಆಸ್ಪದವಾಗಿರುವಂತೆಯೇ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು, ‘ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶವಿಲ್ಲ’ ಎಂದು ಪುನರುಚ್ಚರಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಅವರು ‘ಹಿಜಾಬ್‌ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳು ಅಧಿವೇಶನದಲ್ಲಿಯೇ ನಿಲುವು ಸ್ಪಷ್ಟಪಡಿಸಲಿ’ ಎಂದು ಒತ್ತಾಯಿಸಿದ್ದಾರೆ.

ಪರೀಕ್ಷೆಗೆ ಗೈರು:ಹಿಜಾಬ್ಧರಿಸಲು ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಕವಲಂದೆಯಲ್ಲಿ 39, ಕೆ.ಆರ್.ನಗರ ತಾಲ್ಲೂಕಿನ ಭೇರ್ಯದಲ್ಲಿ 3, ಮೈಸೂರು ತಾಲ್ಲೂಕಿನ ಕೆ.ಆರ್.ಮಿಲ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ಒಬ್ಬ ವಿದ್ಯಾರ್ಥಿನಿಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೆ ಗೈರಾಗಿದ್ದರು.ಕವಲಂದೆಯಲ್ಲಿ ಸೋಮವಾರ ಹಿಜಾಬ್ಧರಿಸಿ ಬಂದಿದ್ದ 40 ವಿದ್ಯಾರ್ಥಿನಿಯರ ಮನವೊಲಿಸಲಾಗಿತ್ತು. ಆದರೆ, ಮಂಗಳವಾರ ಒಬ್ಬ ವಿದ್ಯಾರ್ಥಿನಿಯಷ್ಟೇ ಶಾಲೆಗೆ ಹಾಜರಾಗಿದ್ದರು.

ದಾವಣಗೆರೆ ಜಿಲ್ಲೆಯ ಹರಿಹರದ ಡಿಆರ್‌ಎಂ ಪ್ರೌಢಶಾಲೆಯಲ್ಲಿಹಿಜಾಬ್‌ ತೆಗೆಯಲು ನಿರಾಕರಿಸಿ 23 ಮಕ್ಕಳು ಮನೆಗೆ ವಾಪಸಾಗಿದ್ದಾರೆ. ಅದರಲ್ಲಿ 16 ಮಕ್ಕಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು.ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲೂ ಇಬ್ಬರು ವಿದ್ಯಾರ್ಥಿನಿಯರುಹಿಜಾಬ್ ತೆಗೆಯಲು ನಿರಾಕರಿಸಿ ಪೂರ್ವಸಿದ್ಧತಾ ಪರೀಕ್ಷೆ ಬರೆಯದೇ ಹಿಂತಿರುಗಿದರು.

ಕಲಬುರಗಿ ನಗರದ ಬಹುತೇಕ ಉರ್ದು ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಗೈರುಹಾಜರಾಗಿದ್ದರು. ಇದೇ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ಮೌಲಾನಾ ಆಜಾದ್ ಶಾಲೆ,ಯಾದಗಿರಿ ಜಿಲ್ಲೆ ಗುರುಮಠಕಲ್‌, ಶಹಾಪುರ ತಾಲ್ಲೂಕಿನಲ್ಲಿಪೋಷಕರು–ಶಿಕ್ಷಕರ ನಡುವೆ ವಾಗ್ವಾದ ನಡೆದಿದೆ. ಶಹಾಪುರದಲ್ಲಿ ಬಿಇಒ ರುದ್ರಗೌಡ ಪಾಟೀಲಗೆ ಪೋಷಕರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕೊಠಡಿಗೆ ಕರೆದೊಯ್ದು ಹಿಜಾಬ್ ತೆಗೆಸಿದರು:ಬೆಳಗಾವಿಯ ಸರ್ದಾರ್ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ದು,ಹಿಜಾಬ್ತೆಗೆಸಿ ಉರ್ದು ಮಾಧ್ಯಮ ಶಾಲೆಯ ತರಗತಿ ಕೊಠಡಿಗೆ ಕಳುಹಿಸಲಾಯಿತು. ಹಿಜಾಬ್‌ ತೆಗೆಸುತ್ತಿದ್ದ ಕ್ರಮ ಖಂಡಿಸಿಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಮದಾರ್‌, ಶಿಕ್ಷಕರ ಜೊತೆ ವಾಗ್ವಾದ ನಡೆಸಿದರು.

ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಇದಕ್ಕೆ ಹಿಜಾಬ್‌ ಧರಿಸಲು ಆವಕಾಶ ನೀಡದ್ದಕ್ಕೆ ವಿದ್ಯಾರ್ಥಿನಿಯರು, ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ.

ಕೊಡಗು ಜಿಲ್ಲೆಯ ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಿಜಾಬ್ ಧರಿಸಿ ಬಂದಿದ್ದ 23 ವಿದ್ಯಾರ್ಥಿನಿಯರಿಗೆ ಮಂಗಳವಾರವೂ ಶಾಲೆಗೆ ಪ್ರವೇಶ ನಿರಾಕರಿಸಲಾಯಿತು.

ತುಮಕೂರು: ಬುರ್ಕಾ ಧರಿಸಿ ಬರದಂತೆ ಪೋಷಕರಿಗೆ ನಿರ್ಬಂಧ, ಆಕ್ರೋಶ:

ತುಮಕೂರು:ಮಕ್ಕಳನ್ನು ಬಿಡಲು ಬರುವ ಪೋಷಕರು ಬುರ್ಕಾ ಧರಿಸಿ ಶಾಲೆಗೆ ಬರಬಾರದು ಎಂದು ತುಮಕೂರಿನ ಎಸ್‌.ವಿ.ಎಸ್. ಶಾಲೆಯ ಅಡಳಿತ ಸೂಚನೆ ನೀಡಿದ್ದು, ಪೋಷಕರಿಂದ ಆಕ್ರೋಶ ವ್ಯಕ್ತವಾಯಿತು.

ಬುರ್ಕಾ ಧರಿಸಿ ಬಂದಿದ್ದ ಪೋಷಕರಿಗೆ ಗೇಟ್‌ ಬಳಿಯೇ ಮಕ್ಕಳನ್ನು ಬಿಟ್ಟು ಹೋಗುವಂತೆ ಸೂಚನೆ ನೀಡಲಾಯಿತು. ಆಕ್ರೋಶಗೊಂಡ ಪೋಷಕರು, ‘ಅಲ್ಲಾ ಹು ಅಕ್ಬಾರ್‌’ ಎಂದು ಘೋಷಣೆ ಕೂಗಿದರು. ಇದರಿಂದ ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು. ‘ಬುರ್ಕಾ ಧರಿಸದಂತೆ ಪೋಷಕರಿಗೆ ನಿರ್ಬಂಧ ಹೇರಲು ಆಡಳಿತ ಮಂಡಳಿಗೆ ಅಧಿಕಾರ ಇದೆಯೇ, ನ್ಯಾಯಾಲಯವು ಆದೇಶ ನೀಡಿದೆಯೇ’ ಎಂದು ಪೋಷಕರು ಪ್ರಶ್ನಿಸಿದರು. ಘಟನೆ ನಂತರ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದರು. ಹಿಜಾಬ್‌ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ವಾಪಸಾದರು. ವಾಗ್ವಾದದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT