ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನನ್ನೂ ಆಪ್ತರೇ ಕಾಲೆಳೆದು ಚುನಾವಣೆಯೊಂದರಲ್ಲಿ ಸೋಲಿಸಿದ್ದರು: ಜಿ.ಪರಮೇಶ್ವರ

ಪ್ರವರ್ಗ 1‘ಬಿ’ಗೆ ಸೇರ್ಪಡೆ: ರಾಜ್ಯಮಟ್ಟದ ಸವಿತಾ ಕಲಾ ಸಮ್ಮೇಳನದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಭರವಸೆ
Published 6 ಫೆಬ್ರುವರಿ 2024, 12:11 IST
Last Updated 6 ಫೆಬ್ರುವರಿ 2024, 12:11 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಎಂ.ಸಿ.ವೇಣುಗೋಪಾಲ್‌ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಅವರ ಸುತ್ತಮುತ್ತಲಿದ್ದ ಸ್ನೇಹಿತರೇ ಕಾಲೆಳೆದು ಸೋಲಿಸಿದ್ದರು. ಅದೇ ರೀತಿಯಲ್ಲೇ ನನ್ನನ್ನೂ ಆಪ್ತರೇ ಕಾಲೆಳೆದು ಚುನಾವಣೆಯೊಂದರಲ್ಲಿ ಸೋಲಿಸಿದ್ದರು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

‘ರಾಜಕೀಯ ಕಾರಣಕ್ಕೆ ಭಾರತರತ್ನ’

‘ಲೋಹಿಯಾ ಒಡನಾಡಿಯಾಗಿದ್ದ ಕರ್ಪೂರಿ ಠಾಕೂರ್‌ ಅವರು ಬಿಹಾರದ ಮುಖ್ಯಮಂತ್ರಿ ಆಗಿದ್ದರು. ಕೆಳವರ್ಗದ ವ್ಯಕ್ತಿ ಮುಖ್ಯಮಂತ್ರಿ ಆಗಿದ್ದಕ್ಕೆ ಆ ರಾಜ್ಯದಲ್ಲಿ ಕೆಲವರು ವಿರೋಧಿಸಿದ್ದರು. ಈಗ ಕೇಂದ್ರ ಸರ್ಕಾರವು ಅವರಿಗೆ ಪ್ರಾಮಾಣಿಕವಾಗಿ ಭಾರತರತ್ನ ಗೌರವ ಕೊಟ್ಟಿಲ್ಲ. ಚುನಾವಣೆಗೋಸ್ಕರ ಈ ಗೌರವ ನೀಡಿದೆ’ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್‌.ಪಾಟೀಲ ದೂರಿದರು.

‘ಠಾಕೂರ್‌ ಅವರು ಬದುಕಿದ್ದಾಗಲೇ ಭಾರತರತ್ನ ನೀಡದೇ ಈಗ ಗೌರವ ಕೊಡಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರದ ಹಿಂದೆ ರಾಜಕೀಯ ಕಾರಣವಿದೆ. ಇದಕ್ಕೆ ಟೀಕೆಗಳೂ ಬರುತ್ತಿವೆ’ ಎಂದು ಜಿ.ಪರಮೇಶ್ವರ ಹೇಳಿದರು.

ಪ್ರವರ್ಗ 1‘ಬಿ’ಗೆ ಸೇರ್ಪಡೆ: ಸಿ.ಎಂ ಜತೆಗೆ ಚರ್ಚೆ

ಬೆಂಗಳೂರು: ‘ಪ್ರವರ್ಗ 2‘ಎ’ನಲ್ಲಿರುವ ಸವಿತಾ ಸಮಾಜವನ್ನು ಪ್ರವರ್ಗ 1‘ಬಿ’ಗೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಯಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ರಾಜ್ಯ ಸವಿತಾ ಕಲಾ ಸಂಘ, ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ಸವಿತಾ ಕಲಾ ಸಮ್ಮೇಳನ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್‌ ಅವರಿಗೆ ಗೌರವ ಸಮರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರವರ್ಗ 2‘ಎ’ನಲ್ಲಿ 214 ಜಾತಿಗಳಿದ್ದು ಅದರಲ್ಲಿ ಸವಿತಾ ಸಮಾಜ ಕಳೆದುಹೋಗಿದೆ. ಪ್ರವರ್ಗ 1‘ಬಿ’ನಲ್ಲಿ ಕೆಲವೇ ಜಾತಿಗಳಿದ್ದು ಆ ಪ್ರವರ್ಗಕ್ಕೆ ಸೇರ್ಪಡೆಯಾದರೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ ಎಂಬುದು ಸಮುದಾಯದ ಬೇಡಿಕೆ. ಅದನ್ನು ಈಡೇರಿಸಲು ಪ್ರಯತ್ನಿಸಲಾಗುವುದು. ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ ಅನುದಾನ ಮಂಜೂರು ಮಾಡುವುದೂ ಸೇರಿದಂತೆ 18 ಬೇಡಿಕೆಗಳಿದ್ದು, ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

‘ಮುಂದಿನ ದಿನಗಳಲ್ಲಿ ಸವಿತಾ ಸಮಾಜದ ಒಬ್ಬರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗುವುದು’ ಎಂದು ಹೇಳಿದರು.

****

ಆಯೋಗದ ವರದಿಗೆ ವಿರೋಧ ಏಕೆ?:

‘₹168 ಕೋಟಿ ಖರ್ಚು ಮಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ಸರ್ಕಾರದ ಸವಲತ್ತು ಮತ್ತು ಅವಕಾಶಗಳಿಂದ ವಂಚಿತರಾದವರ ಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿಯಲು ಸಮೀಕ್ಷೆ ಕೈಗೊಳ್ಳಲಾಗಿತ್ತು. ವರದಿ ಸಲ್ಲಿಕೆಗೂ ಮುನ್ನವೇ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾವ ಕಾರಣಕ್ಕೆ ವಿರೋಧಿಸುತ್ತಿದ್ಧಾರೆ ಎಂಬುದೂ ತಿಳಿಯುತ್ತಿಲ್ಲ’ ಎಂದು ಹೇಳಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ‘ಸವಿತಾ ಸಮಾಜದ್ದು ಪ್ರಾಮಾಣಿಕ ಸೇವೆ. ಈ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಸಚಿವರಾದ ಜಮೀರ್ ಅಹಮದ್‌ ಖಾನ್‌, ಕೆ.ಎನ್‌.ರಾಜಣ್ಣ, ಕುಂಚೂರು ಸವಿತಾ ಪೀಠದ ಸವಿತಾನಂದನಾಥ ಸ್ವಾಮೀಜಿ ಮಾತನಾಡಿದರು. ‌ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ್‌, ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್‌, ಸಂಘದ ಗೌರವಾಧ್ಯಕ್ಷ ಎನ್‌.ಶಿವಶಂಕರ್‌, ಅಧ್ಯಕ್ಷ ಕೆ.ಚಂದ್ರಶೇಖರ್‌ ಉಪಸ್ಥಿತರಿದ್ದರು.

****

ಅತಿ ಹಿಂದುಳಿದ ಸವಿತಾ ಸಮಾಜವನ್ನು ಗಮನದಲ್ಲಿ ಇಟ್ಟುಕೊಂಡೇ ರಾಜ್ಯ ಸರ್ಕಾರಕ್ಕೆ ಆಯೋಗದ ವರದಿ ಸಲ್ಲಿಸಲಾಗುವುದು.

-ಜಯಪ್ರಕಾಶ್‌ ಹೆಗಡೆ, ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT