ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕರ್ನಾಟಕಕ್ಕೆ ಬೇಕು ಕನ್ನಡಿಗರ ಪಕ್ಷ’

‘ನಮ್ಮ ನಾಡು, ನಮ್ಮ ಆಳ್ವಿಕೆ’ ಚಿಂತನಾ ಸಭೆಯಲ್ಲಿ ನಿರ್ಣಯ
Published : 26 ಆಗಸ್ಟ್ 2024, 0:39 IST
Last Updated : 26 ಆಗಸ್ಟ್ 2024, 0:39 IST
ಫಾಲೋ ಮಾಡಿ
Comments

ಬೆಂಗಳೂರು: ‘ಕನ್ನಡ ಮತ್ತು ಕನ್ನಡಿಗರ ಉಳಿವಿಗಾಗಿ ಪ್ರಾದೇಶಿಕ ಪಕ್ಷವೊಂದರ ಅವಶ್ಯಕತೆ ಇದೆ. ಅಂತಹ ಪಕ್ಷವನ್ನು ಸ್ಥಾಪಿಸಿ, ಮುನ್ನಡೆಸಬೇಕು’ ಎಂಬ ನಿರ್ಣಯವನ್ನು ಕನ್ನಡಪರ ಹೋರಾಟಗಾರರು ಅಂಗೀಕರಿಸಿದರು.

ನಗರದ ಬಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ನಾಡು, ನಮ್ಮ ಆಳ್ವಿಕೆ’ ಚಿಂತನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಚಿತ್ರ ಸಾಹಿತಿ ಕವಿರಾಜ್‌, ಕನ್ನಡ ಹಕ್ಕುಗಳ ಹೋರಾಟಗಾರ ಅರುಣ್ ಜಾವಗಲ್‌, ಚಿತ್ರ ನಿರ್ದೇಶಕ ಗಿರಿರಾಜ್‌ ಸೇರಿ ಹಲವು ಕನ್ನಡಪರ ಹೋರಾಟಗಾರರು ಈ ಸಭೆಯನ್ನು ಆಯೋಜಿಸಿದ್ದರು.

ಸಭೆ ಆಯೋಜಿಸಿದ ಉದ್ದೇಶವನ್ನು ವಿವರಿಸಿದ ಕವಿರಾಜ್‌, ‘ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ನಾವು ದೆಹಲಿಯ ಹೈಕಮಾಂಡ್‌ಗಳ ಮುಂದೆ ಬಾಗಿ ನಿಲ್ಲಬೇಕಾಗಿದೆ. ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ನಮ್ಮ ಮಕ್ಕಳ ಸೀಟುಗಳನ್ನು ಉತ್ತರ ಭಾರತೀಯರು ನೀಟ್‌ನಂತಹ ಪರೀಕ್ಷೆ ಮೂಲಕ ಕಸಿದುಕೊಳ್ಳುತ್ತಿದ್ದಾರೆ. ಪ್ರಬಲ ಪ್ರಾದೇಶಿಕ ಪಕ್ಷವಿರುವ ತಮಿಳುನಾಡಿಗೆ ಇಂತಹ ಸಮಸ್ಯೆ ಇಲ್ಲ. ಹೀಗಾಗಿ ಕರ್ನಾಟಕಕ್ಕೆ ಅಂತಹ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ’ ಎಂದರು.

ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ‘ನಗರದಲ್ಲಿ ಇರುವವರು, ಪದವೀಧರರು ಮಾತ್ರ ಈ ವಿಚಾರದಲ್ಲಿ ಚರ್ಚೆ ಮಾಡಿದರೆ ಸಾಲದು. ಕನ್ನಡವನ್ನು ನಿಜವಾಗಿಯೂ ಉಳಿಸುವವರು ಹಳ್ಳಿಯ ಜನರು. ಅವರನ್ನೂ ಒಳಗೊಂಡು, ನಾವೆಲ್ಲರೂ ಕನ್ನಡದ ಸ್ವಯಂಸೇವಕರಾಗಿ ದುಡಿಯಬೇಕು. ಹಾಗಾದಾಗ ಮಾತ್ರ ಕನ್ನಡದ ಪಕ್ಷ ಕಟ್ಟುವ ಈ ಪ್ರಯತ್ನ ಸಫಲವಾಗುತ್ತದೆ’ ಎಂದರು.

ಪತ್ರಕರ್ತ ಬಿ.ಎಂ.ಹನೀಫ್‌, ‘ಕ್ಷೇತ್ರ ಮರುವಿಂಗಡಣೆ ನಮ್ಮೆದುರು ಇರುವ ದೊಡ್ಡ ಅಪಾಯ. ಉತ್ತರದ ಐದಾರು ರಾಜ್ಯಗಳ ಸಂಸದರ ಸಂಖ್ಯೆ 350 ದಾಟಲಿದೆ. ದಕ್ಷಿಣದ ರಾಜ್ಯಗಳ ಸಂಸದರ ಸಂಖ್ಯೆ ಬೆರಳೆಣಿಕೆಯಷ್ಟು ಏರಿಕೆಯಾಗಲಿದೆ. ಆಗ ನಮ್ಮ ಮಾತು ಕೇಳುವವರೇ ಇಲ್ಲದಂತಾಗುತ್ತದೆ. ಆ ರೀತಿ ಆಗದಂತೆ ನೋಡಿಕೊಳ್ಳುವ ಸವಾಲು ನಮ್ಮೆದುರು ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಕನ್ನಡಿಗರು, ವಿವಿಧ ಸಂಘಟನೆಗಳ ಮುಖ್ಯಸ್ಥರು–ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಈ ರೀತಿಯ ಸಭೆಗಳನ್ನು ನಡೆಸಿ, ಮುಂದಿನ ನಡೆ ನಿರ್ಧರಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT