ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಿಸ್‌ನಿಂದ ಬಾಯಿ ಮುಚ್ಚಿಸಲಾಗದು: ಬಿಜೆಪಿ ನಾಯಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

Published 1 ಜುಲೈ 2023, 15:48 IST
Last Updated 1 ಜುಲೈ 2023, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷದ ನೋಟಿಸ್‌ಗೆ ಹೆದರಿ ಬಾಯಿ ಮುಚ್ಚಿಕೊಳ್ಳುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆ. ನಾನು ಯಾರಿಗೂ ಹೆದರುವುದಿಲ್ಲ’ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ಮಾತ್ರ ಚರ್ಚಿಸಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಬಾರದು ಎಂಬ ಉದ್ದೇಶದಿಂದ ಮಾತನಾಡಿದ್ದೆ’ ಎಂದರು.

‘ನೋಟಿಸ್‌ ಕೊಟ್ಟ ಬಳಿಕವೇ ಪಕ್ಷದಲ್ಲಿ ಶಿಸ್ತು ಸಮಿತಿ ಇರುವುದು ನನಗೆ ಗೊತ್ತಾಯಿತು. ನನ್ನದು ಪಕ್ಷ ವಿರೋಧಿ ಚಟುವಟಿಕೆ ಆದರೆ ಇದೇ ರೀತಿ ಉಳಿದವರು ಮಾತನಾಡಿರುವುದು ಏನು? 11 ಮಂದಿಗೆ ನೋಟಿಸ್‌ ಜಾರಿ ಮಾಡಿರುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳುತ್ತಾರೆ. ಆದರೆ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ಅವರು ನನಗೊಬ್ಬನಿಗೇ ನೋಟಿಸ್‌ ಕೊಡಲಾಗಿದೆ ಎಂದು ಹೇಳುತ್ತಾರೆ. ಇದರ ಹಿಂದಿನ ಮರ್ಮ ಏನು’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ ಅವರ ಪರವಾಗಿ ಮಾತನಾಡುತ್ತೇನೆ ಎಂಬ ಕಾರಣಕ್ಕಾಗಿ ನನಗೆ ನೋಟಿಸ್‌ ನೀಡಲಾಗಿದೆ. ಇನ್ನು ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡದಂತೆ ಯಡಿಯೂರಪ್ಪ ಸೂಚಿಸಿದ್ದಾರೆ. ಅವರ ಸೂಚನೆಯನ್ನು ಪಾಲಿಸುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಶೀಘ್ರದಲ್ಲಿ ಭೇಟಿಮಾಡಿ ಬಿಜೆಪಿ ರಾಜ್ಯ ಘಟಕದಲ್ಲಿನ ಬೆಳವಣಿಗೆಗಳ ಕುರಿತು ತಿಳಿಸುತ್ತೇನೆ. ನಾನು ಸುಮ್ಮನೆ ಕೂರುವುದಿಲ್ಲ’ ಎಂದು ರೇಣುಕಾಚಾರ್ಯ ಹೇಳಿದರು.

ಈಗ ಇರುವ ಯಾರೂ ಬಿಜೆಪಿ ಕಟ್ಟಿದವರಲ್ಲ. ಯಡಿಯೂರಪ್ಪ ಅವರು ಸೈಕಲ್‌ನಲ್ಲಿ ಓಡಾಡಿ ಪಕ್ಷ ಕಟ್ಟಿದವರು. ಷಡ್ಯಂತ್ರ ಮಾಡಿ ಅವರನ್ನೇ ಅಧಿಕಾರದಿಂದ ಕೆಳಗಿಳಿಸಿ, ಅವಮಾನಿಸಿದರು. ಅವಮಾನ ಮಾಡಿದರೂ ಅವರು ಗೌರವದಿಂದ ರಾಜೀನಾಮೆ ಕೊಟ್ಟಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT