ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ್ ಕುಮಾರ್ ನಾಲಿಗೆ -ಮಿದುಳಿನ ಸಂಪರ್ಕ ಕಳೆದುಕೊಂಡಿದ್ದಾರೆ: ಕುಮಾರಸ್ವಾಮಿ ಗರಂ

Last Updated 6 ಆಗಸ್ಟ್ 2022, 15:32 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬಂಗಾರಪೇಟೆ ತಾಲ್ಲೂಕಿನ ಯರಗೋಳ್‌ ಜಲಾಶಯ ಉದ್ಘಾಟನೆ ವಿಳಂಬ ಕುರಿತು ಮಾತನಾಡಿದ್ದ ಕೆ.ಆರ್‌. ರಮೇಶ್‌ ಕುಮಾರ್‌, ‘ನರಗಳ ದೌರ್ಬಲ್ಯ ಇದ್ದಾಗ ಮಕ್ಕಳು ಆಗುವುದು ವಿಳಂಬವಾಗುತ್ತದೆ’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

ರಮೇಶ್‌ ಕುಮಾರ್‌ ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ‘ವಿಕೃತ, ಕೊಳಕು ಮನಃಸ್ಥಿತಿಯ ಮಾಜಿ ಸ್ಪೀಕರ್ ರಮೇಶ್ ಕುಮಾರ್, ನಾಲಿಗೆ ಮತ್ತು ಮಿದುಳಿನ ನಡುವಿನ ಸಂಪರ್ಕ ಕಳೆದುಕೊಂಡು ಅಸಹಜವಾಗಿ ವರ್ತಿಸುತ್ತಿದ್ದಾರೆ. ಅವರ ವಿಕಾರಗಳಿಗೆ ಕೊನೆಯೇ ಇಲ್ಲದಾಗಿದೆ’ ಎಂದು ಕಿಡಿಕಾರಿದ್ದಾರೆ.

‘ಗಾಂಧಿಗಳ ಹೆಸರು ಹೇಳಿಕೊಂಡು ತಲೆಮಾರುಗಳಿಗೆ ಆಗುವಷ್ಟು ಮಾಡಿಕೊಂಡಿದ್ದನ್ನು ನೀವೇ ಒಪ್ಪಿಕೊಂಡಿದ್ದೀರಿ. ಇದಕ್ಕೆ ನಿಮ್ಮ ಕೃಪಾಪೋಷಿತ ಸಿದ್ಧಸೂತ್ರಧಾರರೇ ಸಾಕ್ಷಿ. ಹೀಗೆ ಮಾಡಿಕೊಂಡಿದ್ದರಲ್ಲಿ ಎತ್ತಿನಹೊಳೆ, ಕೆ.ಸಿ ವ್ಯಾಲಿ ಯೋಜನೆಯೂ ಸೇರಿದೆಯಾ’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

ಯರಗೊಳ್ ಯೋಜನೆಗೆ ಅನುಮತಿ ನೀಡಿದ್ದೇ ನಾನು. ಮಾಡಿದ್ದನ್ನೇ ನಾನು ಹೇಳಿದ್ದೇನೆ. ಬೇಕಾದರೆ ರಮೇಶ್ ಕುಮಾರ್ ಅವರು ದಾಖಲೆಗಳನ್ನು ನೋಡಿಕೊಳ್ಳಲಿ. ಕೆಆರ್‌ಎಸ್, ಎತ್ತಿನಹೊಳೆ, ಕೆ.ಸಿ.ವ್ಯಾಲಿ, ಹೆಚ್‌ಎಎಲ್, ಹೆಚ್‌ಎಂಟಿಗಳನ್ನು ನಾನೇ ಮಾಡಿದ್ದು ಎಂದು ಎಲ್ಲಾದರೂ ಹೇಳಿದ್ದೇನೆಯೇ? ಹೇಳಿದ್ದರೆ ಅವರು ಹೇಳಲಿ ಎಂದು ಎಚ್‌ಡಿಕೆ ಸವಾಲು ಹಾಕಿದ್ದಾರೆ.

‘ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ. ಬಾಲಂಗೋಚಿ ಆಗದಿದ್ದರೆ ರಾಜಕೀಯ ಉಳಿಗಾಲವಿಲ್ಲ. ಪರವಾಲಂಬಿ ರಾಜಕಾರಣದ ಕೇರ್ ಆಫ್ ಅಡ್ರೆಸ್ ಆಗಿರುವ ನೀವು ಯಾರ ಕೃಪೆಯಲ್ಲಿದ್ದಿರಿ ಎನ್ನುವುದನ್ನು ಬಿಡಿಸಿ ಹೇಳಬೇಕೆ’ ಎಂದು ರಮೇಶ್‌ ಕುಮಾರ್ ವಿರುದ್ಧ ಕುಮಾರಸ್ವಾಮಿ ಗುಡುಗಿದ್ದಾರೆ.

‘ಕೋಲಾರ ಜಿಲ್ಲೆಗೆ ನೀವು ಮಾಡಿದ ಘೋರ ಅನ್ಯಾಯ, ಎಸಗಿದ ಪಾಪ ಕಣ್ಮುಂದೆಯೇ ಇದೆ. ಎತ್ತಿನಹೊಳೆ ಹರಿಸುತ್ತೇನೆ ಎಂದು ನಂಬಿಸಿ ಕೆರೆಗಳ ತುಂಬಾ ವಿಷವನ್ನು ತುಂಬಿಸಿದ ಧೂರ್ತ ಕೃತ್ಯಕ್ಕೆ ಕಾರಣರು ಯಾರು? ಕೆ.ಸಿ. ವ್ಯಾಲಿ ಎತ್ತುವಳಿ ಲೆಕ್ಕ ತೆಗೆದರೆ ಮುಖ ಎಲ್ಲಿ ಇಟ್ಟುಕೊಳ್ಳುತ್ತೀರಿ ಸ್ವಯಂ ಘೋಷಿತ ಸಂವಿಧಾನ ತಜ್ಞರೇ’ ಎಂದು ಎಚ್‌ಡಿಕೆ ಕಟುವಾಗಿ ಟೀಕಿಸಿದ್ದಾರೆ.

‘3 ವರ್ಷಗಳಲ್ಲಿ ನೀರು ಹರಿಸುತ್ತೇವೆ ಎಂದು ಹುಸಿ ಭರವಸೆ ಕೊಟ್ಟು, ಜನರಿಗೆ ಮಂಕುಬೂದಿ ಎರಚಿ ಎತ್ತಿನಹೊಳೆ ಹೆಸರಿನಲ್ಲಿ ನಡೆಸಿದ ಎತ್ತುವಳಿಕಾಂಡವನ್ನು ಬಿಚ್ಚಿಡಬೇಕೆ? ಗುತ್ತಿಗೆದಾರರ ಹಿಂದೆ ಸುತ್ತಿದ ಬೇತಾಳ ಕಥೆಯನ್ನು ಹೇಳಬೇಕೆ? ಇದೆಲ್ಲವನ್ನು ಅಧ್ಯಾಯಗಳಂತೆ ಆರಂಭಿಸಬೇಕೆ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ಬೆಳಗಾವಿ ಅಧಿವೇಶನದಲ್ಲಿ ಲಜ್ಜೆಗೆಟ್ಟು ಆಡಿದ ಮಾತಿಗೆ ಸ್ವಪಕ್ಷದ ಶಾಸಕಿಯರಿಂದಲೇ ಛೀಮಾರಿ ಹಾಕಿಸಿಕೊಂಡ ಸ್ವಯಂ ಘೋಷಿತ ಸಂವಿಧಾನ ಪಂಡಿತರೇ, ಅಧಿವೇಶನದಲ್ಲಿ ಅದ ಗರ್ವಭಂಗವನ್ನು ಮರೆತಿರಾ’ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

‘ಗಾಂಧಿಗಳ ಹೆಸರೇಳಿಕೊಂಡು ತಲೆಮಾರುಗಳಿಗೆ ಆಗುವಷ್ಟು ಮಾಡಿಕೊಂಡಿದ್ದನ್ನು ನೀವೇ ಒಪ್ಪಿಕೊಂಡಿದ್ದೀರಿ. ಇದಕ್ಕೆ ನಿಮ್ಮ ಕೃಪಾಪೋಷಿತ ಸಿದ್ಧಸೂತ್ರಧಾರರೇ ಸಾಕ್ಷಿ. ಹೀಗೆ ಮಾಡಿಕೊಂಡಿದ್ದರಲ್ಲಿ ಎತ್ತಿನಹೊಳೆ, ಕೆ.ಸಿ ವ್ಯಾಲಿ ಎತ್ತುವಳಿಯೂ ಸೇರಿದೆಯಾ’ ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.

‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ದಾಸಶ್ರೇಷ್ಠ ಶ್ರೀ ಪುರಂದರದಾಸರು ನಿಮ್ಮಂತಹ ವಿಕಾರಿಗಳನ್ನು ನೋಡಿಯೇ ಈ ಪದವನ್ನು ಬರೆದಿರಬಹುದು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT