ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJP ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ: ಬಿಜೆಪಿಯಲ್ಲಿ ಸಂಭ್ರಮದ ಜೊತೆ ಮುನಿಸು!

ಇದೇ 15 ಅಥವಾ16ಕ್ಕೆ ವಿಜಯೇಂದ್ರ ಅಧಿಕಾರ ಸ್ವೀಕಾರ
Published 11 ನವೆಂಬರ್ 2023, 23:30 IST
Last Updated 11 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸಿರುವುದು ಬಿ.ಎಸ್‌. ಯಡಿಯೂರಪ್ಪ ಪಾಳಯದಲ್ಲಿ ಹರ್ಷ ಮೂಡಿಸಿದ್ದರೆ, ಅವರ ವಿರೋಧಿಗಳು ಮತ್ತು ‘ಪ್ರಬಲ’ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದವರು ಮೆದು ಧ್ವನಿಯಲ್ಲಿ ಅಸಮಾಧಾನ ಹೊರಹಾಕಲಾರಂಭಿಸಿದ್ದಾರೆ.

ದೀರ್ಘ ಕಾಲದಿಂದ ಯಡಿಯೂರಪ್ಪ ಅವರ ಜತೆ ಗುರುತಿಸಿಕೊಂಡಿರುವವರು ಹಾಗೂ ಕಾಂಗ್ರೆಸ್‌, ಜೆಡಿಎಸ್‌ನಿಂದ ವಲಸೆ ಬಂದಿರುವವರು ವಿಜಯೇಂದ್ರ ಅಧ್ಯಕ್ಷರಾಗಿರುವುದನ್ನು ಸಂಭ್ರಮಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲೂ ಸಂಭ್ರಮ ಗೋಚರಿಸುತ್ತಿದೆ. ಆದರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿ.ಟಿ. ರವಿ, ವಿ. ಸೋಮಣ್ಣ, ವಿರೋಧ ಪಕ್ಷದ ನಾಯಕನ ಸ್ಥಾನ ಬಯಸಿದ್ದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಸೇರಿದಂತೆ ಕೆಲವರಲ್ಲಿ ಅಸಮಾಧಾನ ಸೃಷ್ಟಿಸಿದೆ.

ಸಿ.ಟಿ. ರವಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದಲೂ ಅವರನ್ನು ಕೈಬಿಡಲಾಗಿತ್ತು. ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡುವುದಕ್ಕಾಗಿಯೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ ಎಂಬ ಚರ್ಚೆ ಪಕ್ಷದ ಒಂದು ವಲಯದೊಳಗೆ ನಡೆದಿತ್ತು. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬಣದಲ್ಲಿ ಗುರುತಿಸಿಕೊಂಡಿರುವ ರವಿ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಬಹುದು ಎಂಬ ನಿರೀಕ್ಷೆ ಹಲವರಲ್ಲಿ ಇತ್ತು.

ಈಗ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ಯಡಿಯೂರಪ್ಪ ಅವರ ವಿರುದ್ಧದ ಗುಂಪಿನಲ್ಲಿ ಗುರುತಿಸಿಕೊಂಡಿರುವ ರವಿ ಅವರಲ್ಲಿ ಅಸಮಾಧಾನ ಮೂಡಿಸಿದೆ. ‘ಕುಟುಂಬ ರಾಜಕಾರಣದ ಪ್ರಶ್ನೆ ಕಾಡುತ್ತಿದೆ’ ಎನ್ನುವ ಮೂಲಕ ಅವರು ವಿಜಯೇಂದ್ರ ಅವರ ನೇಮಕವನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ.

ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕೂಡ ವಿಜಯೇಂದ್ರ ನೇಮಕಕ್ಕೆ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ‘ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮುನ್ನಡೆಯುತ್ತದೆ’ ಎನ್ನುವ ಮೂಲಕ ಯಡಿಯೂರಪ್ಪ ಬಣದ ವಿರುದ್ಧದ ನಿಲುವು ತಳೆದಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ ಮತ್ತು ಅರವಿಂದ ಬೆಲ್ಲದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿದ್ದರು. ಈಗ ಲಿಂಗಾಯತ ಸಮುದಾಯದ ವಿಜಯೇಂದ್ರ ಅಧ್ಯಕ್ಷರಾಗಿರುವುದರಿಂದ ಅದೇ ಸಮುದಾಯಕ್ಕೆ ವಿರೋಧ ಪಕ್ಷದ ನಾಯಕನ ಹುದ್ದೆ ನೀಡುವ ಸಾಧ್ಯತೆ ಇಲ್ಲ. ಇದು ಈ ಇಬ್ಬರ ಅಸಮಾಧಾನಕ್ಕೆ ಕಾರಣ ಎಂಬ ಮಾತು ಪಕ್ಷದೊಳಗೆ ಇದೆ.

ಸಂಭ್ರಮದಲ್ಲಿ ಭಾಗಿ: ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದವರ ಪೈಕಿ, ಕೆಲವರು ಗುರುವಾರ ರಾತ್ರಿಯೇ ವಿಜಯೇಂದ್ರ ಭೇಟಿಯಾಗಿ ಅಭಿನಂದಿಸಿದರು. ಹೊರಜಿಲ್ಲೆಗಳಿಂದ ಶುಕ್ರವಾರ ಬೆಳಿಗ್ಗೆಯೇ ದೌಡಾಯಿಸಿ, ಸಂಭ್ರಮ ಪಟ್ಟರು.

ಬೆಂಗಳೂರಿನ ಶಾಸಕರ ಪೈಕಿ ಬೈರತಿ ಬಸವರಾಜ, ಮುನಿರತ್ನ, ಎಸ್.ಆರ್. ವಿಶ್ವನಾಥ್ ಅವರು ಮನೆಗೆ ತೆರಳಿ ಅಭಿನಂದಿಸಿದರೆ, ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಎಸ್.ಟಿ. ಸೋಮಶೇಖರ್ ಆ ಕಡೆ ಸುಳಿಯಲಿಲ್ಲ.

ಸೋತವರ ಪೈಕಿ ಮುರುಗೇಶ ನಿರಾಣಿ, ಎಂ.ಪಿ. ರೇಣುಕಾಚಾರ್ಯ ಮೊದಲಾದವರು ವಿಜಯೇಂದ್ರ ಅವರನ್ನು ಭೇಟಿಯಾದರು.

ಮೌನಕ್ಕೆ ಜಾರಿದ ಸೋಮಣ್ಣ, ಬೆಲ್ಲದ

ತಮ್ಮನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವಂತೆ ಮಾಜಿ ಸಚಿವ ವಿ. ಸೋಮಣ್ಣ ಹಲವು ಬಾರಿ ಬಹಿರಂಗವಾಗಿಯೇ ಬಿಜೆಪಿ ವರಿಷ್ಠರನ್ನು ಆಗ್ರಹಿಸಿದ್ದರು. ಈಗ ವಿಜಯೇಂದ್ರ ನೇಮಕದ ಬಳಿಕ ಮೌನಕ್ಕೆ ಜಾರಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯುವುದಕ್ಕಾಗಿ ಸುದ್ದಿ ವಾಹಿನಿಗಳ ವರದಿಗಾರರು ಸೋಮಣ್ಣ ಮನೆ ಬಳಿಗೆ ಶನಿವಾರ ಹೋಗಿದ್ದರು. ಪ್ರತಿಕ್ರಿಯೆಗೆ ನಿರಾಕರಿಸಿದ ಅವರು ಕಾರು ಹತ್ತಿ ಹೊರಟುಹೋದರು.

ಧಾರವಾಡದಲ್ಲಿದ್ದ ಶಾಸಕ ಅರವಿಂದ ಬೆಲ್ಲದ ಕೂಡ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಮಾತನಾಡಲು ಈ ಜಾಗ ಸೂಕ್ತವಲ್ಲ’ ಎಂದರು.

‘ಚುನಾವಣೆಗೆ ಸಾಮೂಹಿಕ ನಾಯಕತ್ವ’

ಶಿವಮೊಗ್ಗ: ‘ಬಿ.ವೈ.ವಿಜಯೇಂದ್ರ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಅವರೊಬ್ಬರೇ ಪಕ್ಷ ಮುನ್ನಡೆಸುತ್ತಾರೆ ಎಂದೇನೂ ಇಲ್ಲ. ಬಿಜೆಪಿಯು ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ಸಾಮೂಹಿಕ ನಾಯಕತ್ವದಡಿ ಲೋಕಸಭಾ ಚುನಾವಣೆ ಎದುರಿಸಿ ಮೋದಿಯನ್ನು ಮತ್ತೆ ಪ್ರಧಾನಿ ಮಾಡುತ್ತೇವೆ’ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ಬಿಜೆಪಿಯು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ಬಂದಿದೆ. ವಿಜಯೇಂದ್ರ ನೇಮಕವನ್ನು ಕುಟುಂಬ ರಾಜಕಾರಣ ಎಂದು ಹೇಳಲಾಗದು. ನಮ್ಮದು ಶಿಸ್ತಿನ ಪಕ್ಷ. ವಿಜಯೇಂದ್ರ ಆಯ್ಕೆಯನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT