ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಆಂತರಿಕ ಭಿನ್ನಮತ ತಾರಕಕ್ಕೇರಿದೆ. ಇದರಿಂದಾಗಿ ನಾನಾ ಇಲಾಖೆಗಳ ಮೂರು ಸಾವಿರದ ಮುನ್ನೂರಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಗ್ರಹಣ ಬಡಿದಿದೆ.

ಅಧ್ಯಕ್ಷರು– ಸದಸ್ಯರ ನಡುವಿನ ಸಂಬಂಧ ಹದಗೆಟ್ಟ ಪರಿಣಾಮ, ನಾಲ್ಕೈದು ತಿಂಗಳಿಂದ ಆಯೋಗದ ಸಭೆ ನಿಯಮಿತವಾಗಿ ನಡೆಯುತ್ತಿಲ್ಲ. ಇದರ ಪರಿಣಾಮವಾಗಿ ವಾಣಿಜ್ಯ ತೆರಿಗೆಗಳ ಇಲಾಖೆಯ ಇನ್ಸ್ಪೆಕ್ಟರ್ (ಸಿಟಿಐ) 245, ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ 242 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿ ಅತಂತ್ರ ಸ್ಥಿತಿಯಲ್ಲಿವೆ. ವಿವಿಧ ಇಲಾಖೆಗಳ ‘ಬಿ’ ವೃಂದದ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಯೂ ಸೇರಿದಂತೆ ಹಲವು ‘ಸಿ’ ವೃಂದದ ಹುದ್ದೆಗಳಿಗೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾಗಿಲ್ಲ. ಹಲವು ಹುದ್ದೆಗಳ ಭರ್ತಿಗೆ ಹೊರಡಿಸಿರುವ ಅಧಿಸೂಚನೆ ಗಳು ತೂಗುಯ್ಯಾಲೆಯಲ್ಲಿವೆ.

ಆಯೋಗದ ಸಭೆಗೆ ಗೈರಾಗುತ್ತಿರುವ ಬಗ್ಗೆ ಸದಸ್ಯ ವಿಜಯಕುಮಾರ್ ಡಿ. ಕುಚನೂರೆ (ಮೇ 30ರಂದು ನಿವೃತ್ತರಾಗಿದ್ದಾರೆ) ಅವರಿಗೆ ಏಪ್ರಿಲ್ 3ರಂದು ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ನೀಡಿದ ‘ಜ್ಞಾಪನ ಪತ್ರ’ ಚರ್ಚೆಗೆ ಕಾರಣವಾಗಿದೆ. ಈ ಪತ್ರವನ್ನು ಪ್ರಶ್ನಿಸಿ ವಿಜಯಕುಮಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪತ್ರಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದ್ದು, ಅಧ್ಯಕ್ಷರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಆ ಮೂಲಕ, ಕೆಪಿಎಸ್ಸಿ ಒಳಜಗಳ ಬೀದಿಗೆ ಬಂದಿದೆ.

ಪ್ರತಿ ಮಂಗಳವಾರ ಆಯೋಗದ ಸಭೆ ನಡೆಯುವುದು ವಾಡಿಕೆ. ಆದರೆ, ಇತ್ತೀಚೆಗೆ ನಿಯಮಿತವಾಗಿ ಸಭೆ ನಡೆಯುತ್ತಿಲ್ಲ. ಪ್ರಸಕ್ತ ತಿಂಗಳಿನಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ನಡೆಯಲಿದ್ದ ಪರೀಕ್ಷೆಯ ಸಿದ್ಧತೆಯ ಪರಿಶೀಲನೆಗಾಗಿ ಮೇ 2ರಂದು ತುರ್ತು ಸಭೆ ನಡೆದಿತ್ತು. ಆ ಬಳಿಕ ಮೇ 29ರಂದು ಮಾತ್ರ ಸಭೆ ನಡೆದಿದೆ. ಈ ಸಭೆಯೂ ಗೊಂದಲದಲ್ಲಿಯೇ ಮುಕ್ತಾಯವಾಯಿತು ಎಂದು ಕೆಪಿಎಸ್ಸಿ ಮೂಲಗಳು ಹೇಳಿವೆ.

ಅಧ್ಯಕ್ಷರಿಗೆ ಏಪ್ರಿಲ್ 1ರಂದು ‘ಟಿಪ್ಪಣಿ’ ನೀಡಿದ ಸದಸ್ಯರಾದ ವಿಜಯಕುಮಾರ್
ಡಿ. ಕುಚನೂರೆ, ಆರ್. ಗಿರೀಶ್ ಮತ್ತು ಎಂ.ವಿ. ರಾಮಕೃಷ್ಣ ಪ್ರಸಾದ್, ‘ವಾರಕ್ಕೊಮ್ಮೆ ಆಯೋಗದ ಸಭೆ ನಡೆಸುವ ಬಗ್ಗೆ ಸೂಕ್ತ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದ್ದರು. ಈ ಮಧ್ಯೆ, ಅನಾರೋಗ್ಯದ ಕಾರಣಕ್ಕೆ ತಮಗೆ ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡುವಂತೆ ವಿಜಯಕುಮಾರ್ ಮನವಿ ಮಾಡಿದ್ದರು.

ಮೂವರು ಸದಸ್ಯರ ಟಿಪ್ಪಣಿಯನ್ನು ಪ್ರಸ್ತಾಪಿಸಿ, ವಿಜಯಕುಮಾರ್ ಅವರಿಗೆ ಏಪ್ರಿಲ್ 3ರಂದು ‘ಜ್ಞಾಪನ ಪತ್ರ’ ನೀಡಿದ ಅಧ್ಯಕ್ಷರು, ‘2024ರ ಜೂನ್ 27ರಂದು ಎಲ್ಲ ಸದಸ್ಯರನ್ನು ಉಲ್ಲೇಖಿಸಿ ತಾನು ಬರೆದಿದ್ದ ಪತ್ರವನ್ನು ಲಗತ್ತಿಸಿದ್ದಾರೆ. ಅಲ್ಲದೆ, ‘ಬಹುತೇಕ ದಿನಗಳಲ್ಲಿ ಕೇಂದ್ರ ಸ್ಥಾನದಲ್ಲಿ ಲಭ್ಯರಾಗದೆ ಆಯ್ಕೆ ಪಟ್ಟಿ ಅನುಮೋದನೆಗೆ ಸಂಬಂಧಿಸಿದಂತೆ ಕಡತಗಳಿಗೆ ನೀವು ಸಹಿ ಮಾಡುವುದೇ ಇಲ್ಲ. ನೀವು ಸದಸ್ಯರಾಗಿ ನೇಮಕಗೊಂಡ ದಿನದಿಂದ ಆಯೋಗದ ಒಟ್ಟು 189 ಸಭೆಗಳು ನಡೆದಿದ್ದು, 57 ಸಭೆಗಳಿಗೆ ಮಾತ್ರ ಹಾಜರಾಗಿದ್ದೀರಿ. ಸಭೆಗೆ ಗೈರಾಗುವ ಪೂರ್ವದಲ್ಲಿ ಲಿಖಿತವಾಗಿ ಟಿಪ್ಪಣಿ ಸಲ್ಲಿಸಿದ್ದರೆ, ಕಚೇರಿಗೆ ಹಾಜರಾಗದ ದಿನಗಳಿಗೆ ರಜೆ, ಅನುಮತಿ ಪಡೆದಿದ್ದರೆ ಆ ಬಗ್ಗೆ ಮಾಹಿತಿ ನೀಡಬೇಕು’ ಎಂದೂ ಆ ಪತ್ರದಲ್ಲಿ ಸೂಚಿಸಿದ್ದಾರೆ.

ಅಧ್ಯಕ್ಷರ ಈ ನಡೆಗೆ ಕೆರಳಿರುವ ವಿಜಯಕುಮಾರ್, ಈ ಜ್ಞಾಪನ ಪತ್ರವನ್ನು ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ‘ಅಧ್ಯಕ್ಷರು ಆಯೋಗದ ಸಭೆಗಳನ್ನೇ ಕರೆಯುವುದಿಲ್ಲ. ಅದರ ಬದಲು ಈ ಜ್ಞಾಪನ ಪತ್ರ ನೀಡಿದ್ದಾರೆ’ ಎಂದು ದೂರುದಾರ ವಿಜಯಕುಮಾರ್ ಸಹಿತ ಎಲ್ಲ ಸದಸ್ಯರು ದೂರಿದ್ದಾರೆ. ಅಲ್ಲದೆ, ‘ದೂರುದಾರರಿಗೆ ಈ ರೀತಿ ಜ್ಞಾಪನ ಪತ್ರ ನೀಡಲು ಅಧ್ಯಕ್ಷರಿಗೆ ಅಧಿಕಾರವೇ ಇಲ್ಲ’ ಎಂದು ವಿಜಯಕುಮಾರ್ ಪರ ವಕೀಲರು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.