ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Rains: ಮುಂದುವರಿದ ಮಳೆಯ ಆರ್ಭಟ

Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗ ಮತ್ತು ಮಧ್ಯ ಕರ್ನಾಟಕ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಶನಿವಾರ ಮಳೆ ಆರ್ಭಟಿಸಿದೆ. ಇನ್ನು ಕೆಲವು ಕಡೆ ಸಾಧಾರಣ ಮಳೆಯಾಗಿದೆ.

ಬೀದರ್‌, ರಾಯಚೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರಂತೆ ಒಟ್ಟು ಮೂವರು
ಮೃತಪಟ್ಟಿದ್ದಾರೆ. ಕೆಲವೆಡೆ ಜಾನುವಾರು ಗಳೂ ಮೃತಪಟ್ಟ ಬಗ್ಗೆ ವರದಿಯಾಗಿದೆ. ಗಾಳಿ–ಮಳೆಯ ಅಬ್ಬರಕ್ಕೆ ಕೆಲವು ಕಡೆಗಳಲ್ಲಿ ಮನೆಗಳ ಮೇಲ್ಚಾವಣಿ ಶೀಟುಗಳು ಹಾರಿಹೋಗಿವೆ. ಮರಗಳು ಧರೆಗುರುಳಿವೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಅರಳಿಕೊಪ್ಪ ಗ್ರಾಮದ‌ ಸಾಲೂರು ನಿವಾಸಿ, ರೈತ ಶಂಕರ್ (50) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಶನಿವಾರ ಸಂಜೆ 4.30ರ ವೇಳೆಗೆ ತೋಟದ ಕೆಲಸ ಮುಗಿಸಿ ಮನೆಗೆ ಹಿಂದಿರುಗಿ ಬರುವಾಗ ಸಿಡಿಲು ಬಡಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ರಾಯಪಳ್ಳಿ ಗ್ರಾಮದ ಶೈಲು ರಾಮಲು (36) ಬಿರುಗಾಳಿಗೆ ಮಾಳಿಗೆ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಮಲ್ಕಾಪುರ ಕ್ಯಾಂಪ್‌ನಲ್ಲಿ ಶನಿವಾರ ಸಿಡಿಲು ಬಡಿದು ಕುರಿಗಾಯಿ ಬಾಲಕ ಅಮರಾಪುರ ಗ್ರಾಮದ ಶಾಂತಕುಮಾರ ಬಸವರಾಜ (16) ಮೃತಪಟ್ಟಿದ್ದಾರೆ.

ಬಾಲಕ ಮಲ್ಕಾಪುರ ಕ್ಯಾಂಪ್‌ನ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ. ಈ ವೇಳೆ ಸಿಡಿಲು ಬಡಿದಿದೆ. ಒಂದು ಮೇಕೆಯೂ ಸಾವನ್ನಪ್ಪಿದೆ.

ಕಲಬುರಗಿ ವರದಿ: ಕಲ್ಯಾಣ ಕರ್ನಾಟಕದ ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. 

ಬೀದರ್ ಜಿಲ್ಲೆಯ ಧೂಪತಮಹಾಗಾಂವ್ ಗ್ರಾಮದಲ್ಲಿ ಸಿಡಿಲು ಬಡಿದು ರಾಮಣ್ಣ ಪ್ರಭು ಕಾಳೆ ಅವರಿಗೆ ಸೇರಿದ ಒಂದು ಎತ್ತು ಸಾವನ್ನಪ್ಪಿದರೆ, ಮತ್ತೊಂದು ಎತ್ತಿಗೆ ತೀವ್ರ ಗಾಯವಾಗಿದೆ. ಬಿರುಗಾಳಿ ಸಹಿತ ಮಳೆಗೆ ಕಮಲನಗರ ತಾಲ್ಲೂಕಿನ ಮದನೂರ, ಖತಗಾಂವ ಗ್ರಾಮದಲ್ಲಿ ಹಲವು ಮನೆಗಳ ತಗಡಿನ ಶೀಟುಗಳು ಹಾರಿ ಹೋಗಿ, ದವಸ ಧಾನ್ಯಗಳು ಹಾಳಾಗಿವೆ. ಹಲವೆಡೆ ಬುಡಸಮೇತ ಮರಗಳು ನೆಲಕ್ಕುರುಳಿವೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಆಲ್ಕೋಡ್ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತು ಮೃತಪಟ್ಟಿವೆ. ಜಿಲ್ಲೆಯ ತುರ್ವಿಹಾಳ ಸಮೀಪದ ವಿರೂಪಾಪುರ ಗ್ರಾಮದಲ್ಲಿ ತೆಂಗಿನ ಗಿಡಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿದೆ. ವಿದ್ಯುತ್‌ ಕೈಕೊಟ್ಟಿದೆ.

ಸಿಂಧನೂರು, ಮಸ್ಕಿ, ಸಿರವಾರ, ಮಾನ್ವಿ, ಲಿಂಗಸುಗೂರು, ತುರ್ವಿಹಾಳ, ಜಾಲಹಳ್ಳಿಯಲ್ಲಿ ಮಳೆ ಸುರಿದಿದೆ. 

ಕೊಪ್ಪಳ ಜಿಲ್ಲೆಯ ಕ‌ನಕಗಿರಿ ತಾಲ್ಲೂಕಿನ ನವಲಿ ತಾಂಡಾದಲ್ಲಿ ಸಿಡಿಲು ಬಡಿದು ದೇವಸ್ಥಾನದ ಗೋಪುರ ಬಿರುಕು ಬಿಟ್ಟ ಘಟನೆ ಶನಿವಾರ ನಡೆದಿದೆ. ತಾಂಡಾದಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಸಿಡಿಲಿನ ಆರ್ಭಟಕ್ಕೆ ಜನ ವಸತಿ ಪ್ರದೇಶದಲ್ಲಿರುವ ದುರಗಮ್ಮ ದೇವಿ ದೇವಸ್ಥಾನದ ಗೋಪುರ ಬಿರುಕು ಬಿಟ್ಟಿದೆ. ಸಿಡಿಲಿಗೆ ಹೊಡೆತಕ್ಕೆ ಜನರು ಬೆಚ್ಚಿ ಬಿದ್ದಿದ್ದು ಕೂಗಾಟ, ಚೀರಾಟ ಮಾಡಿದರು. 

ಹುಬ್ಬಳ್ಳಿ ವರದಿ: ಧಾರವಾಡ, ವಿಜಯನಗರ, ಬಳ್ಳಾರಿ, ಹಾವೇರಿ, ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ವಿವಿಧೆಡೆ ಶನಿವಾರ ಉತ್ತಮ ಮಳೆಯಾಯಿತು. ವಿಜಯಪುರ ಜಿಲ್ಲೆಯ ಬಬಲೇಶ್ವರನಲ್ಲಿ ಸಿಡಿಲು ಬಡಿದು 10 ಕುರಿಗಳು ಸಾವನ್ನಪ್ಪಿದವು.

ವಿಜಯನಗರ ಜಿಲ್ಲೆಯ ಕೆಲವೆಡೆ ಸತತ ಎರಡನೇ ದಿನವಾದ ಶನಿವಾರ ಸಹ ಸಾಧಾರಣ ಮಳೆಯಾಗಿದ್ದು, ಬಳ್ಳಾರಿ ಜಿಲ್ಲೆಯ ಸಂಡೂರು, ಕುಡುತಿನಿ, ತೋರಣಗಲ್ಲು ಭಾಗದಲ್ಲಿ ಈ ವರ್ಷದ ಮೊದಲ ಮಳೆ ಸುರಿದಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಅರಸೀಕೆರೆ, ಕಾನಹೊಸಹಳ್ಳಿ, ಕೊಟ್ಟೂರು, ಹೊಸಪೇಟೆಯ ಕಮಲಾಪುರ, ಹಂಪಿ ಭಾಗದಲ್ಲಿ ಸಾಧಾರಣ ಮಳೆಯಾಯಿತು. ಬಳ್ಳಾರಿ ಜಿಲ್ಲೆ ಕಂಪ್ಲಿ, ಕುರುಗೋಡು, ಸಂಡೂರು, ಕುಡಿತಿನಿ ಮಳೆ ಸುರಿದಿದೆ. 

ವಿಜಯಪುರ ಜಿಲ್ಲೆಯ ಆಲಮೇಲ, ಸಿಂದಗಿ, ಹೋರ್ತಿ, ದೇವರಹಿಪ್ಪರಗಿ, ಇಂಡಿ ಭಾಗದಲ್ಲಿ ಉತ್ತಮ ಮಳೆಯಾಯಿತು.

ಹಾವೇರಿ ಜಿಲ್ಲೆ ರಾಣೆಬೆನ್ನೂರು, ಕುಮಾರಪಟ್ಟಣ, ಕವಲೆತ್ತು, ಚಳಗೇರಿ, ನಾಗೇನಹಳ್ಳಿ, ಮುದೇನೂರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಯಿತು. ಹಿರೇಕೆರೂರು ತಾಲ್ಲೂಕಿನಲ್ಲಿ ಶುಕ್ರವಾರ ದಿಢೀರ್‌ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಆರೀಕಟ್ಟಿ, ಸಾತೇನಹಳ್ಳಿ ಗ್ರಾಮದಲ್ಲಿ ಬಾಳೆ ತೋಟಕ್ಕೆ ಹಾನಿಯಾಯಿತು.

ಬಾಗಲಕೋಟೆ ಸೇರಿ ಜಿಲ್ಲೆಯ ಇಳಕಲ್‌, ಬೆನಕಟ್ಟಿಯಲ್ಲಿ ಮಳೆಯಾಯಿತು. ಶುಕ್ರವಾರ ಮಧ್ಯರಾತ್ರಿಯೂ ಬಾದಾಮಿ, ಗುಳೇದಗುಡ್ಡ ಸೇರಿ ವಿವಿಧೆಡೆ ಮಳೆಯಾಯಿತು.

ಗದಗ ಜಿಲ್ಲೆಯ ಮುಳಗುಂದ, ಲಕ್ಷ್ಮೇಶ್ವರ, ನರಗುಂದದಲ್ಲಿ ಮಳೆಯಿಂದ ವಾತಾವರಣ ತಂಪಾಯಿತು. ರೋಣ ತಾಲ್ಲೂಕಿನ ಬಹುತೇಕ ಪ್ರದೇಶಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.

ಶಿವಮೊಗ್ಗ ವರದಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಭಾರಿ ಮಳೆ ಸುರಿಯಿತು. ಗುಡುಗು-ಸಿಡಿಲಿನೊಂದಿಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಅಶ್ವಿನಿ ಮಳೆ ಆರ್ಭಟಿಸಿತು.

ನಗರದ ಬಡಾವಣೆಯೊಂದರಲ್ಲಿ ಸಂಚರಿಸುತ್ತಿದ್ದ ಎರಡು ಬಿಡಾಡಿ ದನಗಳು ಸಿಡಿಲು ಬಡಿದು ಸಾವಿಗೀಡಾಗಿದ್ದು, ವಿನೋಬ ನಗರದ 100 ಅಡಿ ರಸ್ತೆ ಸೇರಿದಂತೆ ಸೇರಿದಂತೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಮಳೆ-ಗಾಳಿಯ ಕಾರಣಕ್ಕೆ ಸಂಜೆಯಿಂದ ನಗರದಲ್ಲಿ ವಿದ್ಯುತ್ ಕಡಿತಗೊಂಡಿತ್ತು.

ಜಿಲ್ಲೆಯ ಶಿಕಾರಿಪುರ ಹಾಗೂ ಸುತ್ತಮುತ್ತಲೂ ಗುಡುಗು-ಸಿಡಿಲಿನೊಂದಿಗೆ ಸಂಜೆ ಭರ್ಜರಿ ಮಳೆ ಸುರಿದಿದೆ. ಸಾಗರ, ಸೊರಬ, ಹೊಸನಗರ, ಕೋಣಂದೂರು, ಆನಂದಪುರ, ತ್ಯಾಗರ್ತಿ ಸುತ್ತಮುತ್ತ ಗುಡುಗು-ಮಿಂಚಿನ ಸಹಿತ ಸಾಧಾರಣ ಮಳೆಯಾಗಿದೆ.

ದಾವಣಗೆರೆ ವರದಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಂಜೆ ಸಾಧಾರಣ ಮಳೆಯಾಯಿತು. ನಗರದಲ್ಲಿ ತುಂತುರು ಮಳೆಯಾಗಿದ್ದರೆ, ತಾಲ್ಲೂಕಿನ ಹೆಬ್ಬಾಳು, ಹುಣಸೇಕಟ್ಟೆ, ಹಾಲುವರ್ತಿ, ಹರಹರ, ಮಲೇಬೆನ್ನೂರು, ಕಡರನಾಯ್ಕನಹಳ್ಳಿ, ಜಗಳೂರಿನಲ್ಲಿ ಹದ ಮಳೆ ಸುರಿಯಿತು. 

ಚಿತ್ರದುರ್ಗ ವರದಿ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ಅರ್ಧ ಗಂಟೆ ಬಿರುಸಿನ ಮಳೆ ಸುರಿಯಿತು. ತಾಲ್ಲೂಕಿನ ಚಿಕ್ಕಜಾಜೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲೂ ಅರ್ಧ ಗಂಟೆ ಉತ್ತಮ ಮಳೆ ಬಂತು. ಹೊಸದುರ್ಗ ಪಟ್ಟಣದಲ್ಲೂ ತುಂತುರು ಮಳೆ ಸುರಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದೆ. ತರೀಕೆರೆಯಲ್ಲಿ ಈ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನ ಖುಷಿ ಅನುಭವಿಸಿದರು.

ಮೂಡಿಗೆರೆ, ಕಳಸ, ಆಲ್ದೂರು, ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪ ಸುತ್ತಮುತ್ತ ಮಳೆಯಾಗಿದೆ. ಇತ್ತ ಚಿಕ್ಕಮಗಳೂರು ನಗರದಲ್ಲೂ ಮೊದಲ ಮಳೆಯ ಸಿಂಚನವಾಯಿತು. ಜೋರು ಮಳೆ ಬರದಿದ್ದರೂ, ಮೋಡ ಕವಿದ ವಾತಾವರಣದ ನಡುವೆ ತುಂತುರು ಮಳೆ ಉದುರಿತು.

ತರೀಕೆರೆ ಪಟ್ಟಣದಲ್ಲಿ 15 ನಿಮಿಷ‌ಕ್ಕೂ ಹೆಚ್ಚು ಕಾಲ ಜೋರಾಗಿ ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ನೀರು ಹರಿಯಿತು. ವಾಹನ ಸಂಚಾರಕ್ಕೆ ಕೆಲಕಾಲ ತೊಂದರೆಯಾದರೂ, ಮೊದಲ ಮಳೆ ಕಂಡ ಜನ ಸಂಭ್ರಮಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿ, ನಡ, ಮಲವಂತಿಗೆ ಮೊದಲಾದ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಹಾಸನ ವರದಿ: ಶುಕ್ರವಾರ ರಾತ್ರಿ ಹಾಸನ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ. ಹಿರೀಸಾವೆ ಹೋಬಳಿಯಲ್ಲಿ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 25ಕ್ಕೂ ಹೆಚ್ಚು ತೆಂಗಿನ ಮರಗಳು ಸೇರಿದಂತೆ ಹಲವು ಮರಗಳು ನೆಲಕ್ಕೆ ಉರುಳಿ ಬಿದ್ದಿವೆ. ತೋಟಗಳಲ್ಲಿನ ಕೊಟ್ಟಿಗೆ, ಶೆಡ್, ರೇಷ್ಮೆ ಸಾಕಾಣಿಕೆಯ ಮನೆಗಳ ಮೆಲ್ಚಾವಣಿ ಹಾರಿ ಹೋಗಿವೆ.

ಮಡಿಕೇರಿ ವರದಿ: ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ‘ಮಂಜಿನ ನಗರಿ’ ಮಡಿಕೇರಿ ಶನಿವಾರ ಬೇಸಿಗೆಯ ಮೊದಲ ಮಳೆಗೆ ಕೊಂಚ ತಂಪಾಯಿತು.

ಆದರೆ, ಹಿಂದಿನಂತೆ ಮಳೆ ಬಿರುಸು ಪಡೆಯದೇ ನಿರಾಸೆ ಮೂಡಿಸಿತು. ಕಾದ ಕಾವಲಿಯಂತಾಗಿದ್ದ ನೆಲ ಮೊದಲ ಮಳೆಗೆ ತುಸು ತಣಿಯಿತು. ಹೆಬ್ಬೆಟ್ಟಗೇರಿ ಸೇರಿದಂತೆ ಮಡಿಕೇರಿ ತಾಲ್ಲೂಕಿನ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ರಭಸದ ಮಳೆ ಸುರಿದ ಸಂದರ್ಭ ಕತ್ತಲು ಕವಿದಂತಾಗಿತ್ತು
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ ರಭಸದ ಮಳೆ ಸುರಿದ ಸಂದರ್ಭ ಕತ್ತಲು ಕವಿದಂತಾಗಿತ್ತು
ಶಿವಮೊಗ್ಗದ ಕೆಂಚಪ್ಪ ಲೇಔಟ್‌ನ ಕೆಎಚ್‌ಬಿ ಕಾಲೊನಿಯ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿರುವುದು
ಶಿವಮೊಗ್ಗದ ಕೆಂಚಪ್ಪ ಲೇಔಟ್‌ನ ಕೆಎಚ್‌ಬಿ ಕಾಲೊನಿಯ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿರುವುದು
ಬಿರುಗಾಳಿ ಮಳೆಗೆ ಬೀದರ್‌ ಜಿಲ್ಲೆ ಕಮಲನಗರ ತಾಲ್ಲೂಕಿನ ಮದನೂರಿನಲ್ಲಿ ಮನೆಯ ತಗಡಿನ ಶೀಟುಗಳು ಹಾರಿ ಹೋಗಿದ್ದು ದವಸ ಧಾನ್ಯ ಸೇರಿದಂತೆ ಇತರೆ ವಸ್ತುಗಳು ತೊಯ್ದು ತೊಪ್ಪೆಯಾಗಿವೆ
ಬಿರುಗಾಳಿ ಮಳೆಗೆ ಬೀದರ್‌ ಜಿಲ್ಲೆ ಕಮಲನಗರ ತಾಲ್ಲೂಕಿನ ಮದನೂರಿನಲ್ಲಿ ಮನೆಯ ತಗಡಿನ ಶೀಟುಗಳು ಹಾರಿ ಹೋಗಿದ್ದು ದವಸ ಧಾನ್ಯ ಸೇರಿದಂತೆ ಇತರೆ ವಸ್ತುಗಳು ತೊಯ್ದು ತೊಪ್ಪೆಯಾಗಿವೆ
ಕೊಪ್ಪಳದಲ್ಲಿ ಶನಿವಾರ ರಾಶಿ ಕೆಲಸ ಮುಗಿಸಿ ಸುರಿವ ಮಳೆಯಲ್ಲಿ ನೆನೆಯುತ್ ಟ್ರ್ಯಾಕ್ಟರ್‌ನಲ್ಲಿ ಮನೆಗೆ ಹೊರಟ ಕೃಷಿಕಾರ್ಮಿಕರು ಕಂಡದ್ದು ಹೀಗೆ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ
ಕೊಪ್ಪಳದಲ್ಲಿ ಶನಿವಾರ ರಾಶಿ ಕೆಲಸ ಮುಗಿಸಿ ಸುರಿವ ಮಳೆಯಲ್ಲಿ ನೆನೆಯುತ್ ಟ್ರ್ಯಾಕ್ಟರ್‌ನಲ್ಲಿ ಮನೆಗೆ ಹೊರಟ ಕೃಷಿಕಾರ್ಮಿಕರು ಕಂಡದ್ದು ಹೀಗೆ –ಪ್ರಜಾವಾಣಿ ಚಿತ್ರ/ಭರತ್‌ ಕಂದಕೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT