ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Rains: ಸುರಿವ ಮಳೆಯಲ್ಲಿ ಕುಣಿದು ಸಂಭ್ರಮಿಸಿದ ಜನ

Published 12 ಏಪ್ರಿಲ್ 2024, 23:00 IST
Last Updated 12 ಏಪ್ರಿಲ್ 2024, 23:00 IST
ಅಕ್ಷರ ಗಾತ್ರ

ನಾಪೋಕ್ಲು(ಕೊಡಗು ಜಿಲ್ಲೆ): ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಶುಕ್ರವಾರ ಗುಡುಗಿನೊಂದಿಗೆ ಸುರಿದ ಜೋರು ಮಳೆಯಲ್ಲಿ ಜನ ಕುಣಿಯುತ್ತಾ ಸಂಭ್ರಮಿಸಿದರು.

ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀಮಾರಿಯಮ್ಮ ಹಾಗೂ ಕೊರಗಜ್ಜದೇವರ ವಾರ್ಷಿಕ ಉತ್ಸವದಲ್ಲಿ ಭಗವತಿ ದೇವರಿಗೆ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿದ್ದರು. ಮಹಾಮಂಗಳಾರತಿ ನಡೆಯುವಾಗಲೇ ಮಳೆ ಸುರಿದಿದ್ದರಿಂದ ನೆನೆಯುತ್ತಾ ಕೊಡಗಿನ ವಾಲಗಕ್ಕೆ ಹೆಜ್ಜೆಹಾಕಿದರು.

ಪಟ್ಟಣ ಸೇರಿದಂತೆ ಕಕ್ಕಬ್ಬೆ, ಯವಕಪಾಡಿ, ನಾಲಡಿ, ನೆಲಜಿ, ಬಲ್ಲಮಾವಟಿ ಭಾಗಗಳಲ್ಲಿ ಸುಮಾರು 20 ನಿಮಿಷ ಉತ್ತಮ ಮಳೆಯಾಯಿತು. ಮೂರ್ನಾಡು ಸುತ್ತಮತ್ತಲ ಪ್ರದೇಶಗಳಲ್ಲೂ ವರ್ಷಧಾರೆಯಾಯಿತು.

‘ಯವಕಪಾಡಿಯ ಪನ್ನಂಗಾಲ ತಮ್ಮೆ ಹಬ್ಬದ ದಿನವೇ ಇಗ್ಗುತ್ತಪ್ಪ ದೇವರು ಭುವಿಗೆ ತಂಪೆರೆಯಿತು’ ಎಂದು ಗ್ರಾಮಸ್ಥರು ಸಂತಸದಿಂದ ಹೇಳಿದರು.

ಶೃಂಗೇರಿಯಲ್ಲಿ ಮಳೆ

ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಪಟ್ಟಣ ಸೇರಿದಂತೆ ಹಲವೆಡೆ ಶುಕ್ರವಾರ ಮಳೆಯಾಗಿದೆ. ಶೃಂಗೇರಿಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ತಂಪೆರೆಯಿತು.

ದಾವಣಗೆರೆಯಲ್ಲಿ ತಂಪೆರೆದ ಮಳೆ ದಾವಣಗೆರೆ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಸಾಧಾರಣ ಮಳೆ ಸುರಿಯಿತು. ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರ್ಷದ ಮೊದಲ ಮಳೆಯು ತಂಪಾದ ವಾತಾವರಣ ಸೃಷ್ಟಿಸಿತು.

ನಗರದ ಹೊರವಲಯದ ಆವರಗೆರೆ, ಬಾಡಾ ಕ್ರಾಸ್‌ ಭಾಗದಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ವರುಣ ಆರ್ಭಟಿಸಿದ. ಮಳೆಯಿಂದಾಗಿ ಕೆಲಕಾಲ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಯಿತು. ಬೈಕ್‌ ಸವಾರರು ರಸ್ತೆ ಬದಿ ಬೈಕ್‌ ನಿಲ್ಲಿಸಿ, ಹೋಟೆಲ್‌, ಮಳಿಗೆಗಳ ಆಶ್ರಯ ಪಡೆದರು. ರಸ್ತೆಗಳಲ್ಲಿ ನೀರು ಹರಿಯಿತು.

ಜಿಲ್ಲೆಯ ಚನ್ನಗಿರಿ, ಸಂತೇಬೆನ್ನೂರು, ಮಲೇಬೆನ್ನೂರು, ಹೊನ್ನಾಳಿ ಹಾಗೂ ಮಾಯಕೊಂಡ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯ ಸಿಂಚನವಾಯಿತು. ಹರಿಹರ, ನ್ಯಾಮತಿ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ ಇತ್ತು.

ಸಿಡಿಲು ಬಡಿದು ರೈತ ಸಾವು

ಕಲಬುರಗಿ: ಜಿಲ್ಲೆಯ ಆಳಂದ ಹಾಗೂ ಅಫಜಲಪುರ ತಾಲ್ಲೂಕಿನ ವಿವಿಧೆಡೆ ಗುರುವಾರ ರಾತ್ರಿ ಮಳೆಯಾಗಿದ್ದು ಸಿಡಿಲು ಬಡಿದು ಆಳಂದ ತಾಲ್ಲೂಕಿನ ಕವಲಗಾ ಗ್ರಾಮದ ರೈತ ಕಲ್ಯಾಣಿ ಹಣಮಂತ ಭೂಸನೂರು (60) ಮೃತಪಟ್ಟಿದ್ದಾರೆ.

ಸಂಜೆ ಹೊಲಕ್ಕೆ ತೆರಳುವಾಗ ಗುಡುಗು ಸಿಡಿಲು ಸಹಿತ ಮಳೆ ಆರಂಭಗೊಂಡಿದೆ. ಮಾರ್ಗ ಮಧ್ಯೆ ಮರದ ಕೆಳಗೆ ನಿಂತಾಗ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡತಕ್ಕೆ ರೈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮತ್ತೊಂದೆಡೆ ತಾಲ್ಲೂಕಿನ ಕೊರಳ್ಳಿ ಗ್ರಾಮದಲ್ಲಿ ರೈತ ಮಹಿಳೆ ಚಂದಮ್ಮ ನಾಗಪ್ಪ ಸಿಂಗೆ ಅವರಿಗೆ ಸೇರಿದ ಎತ್ತು ಬೊಮ್ಮನಹಳ್ಳಿ ಗ್ರಾಮದಲ್ಲಿ ಜ್ಯೋತಿ ಶ್ರೀಶೈಲ ಬಂಟನಳ್ಳಿ ಅವರ ಎಮ್ಮೆ ಸಿಡಿಲಿಗೆ ಬಲಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT