ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಬುಧವಾರವೂ ಮಳೆ ಮುಂದುವರಿದಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಕೆಲವೆಡೆ ಪ್ರವಾಹದ ಪರಿಸ್ಥಿತಿ ಮುಂದುವರಿದ್ದು, ಗುಡ್ಡ ಕುಸಿತಗಳೂ ಸಂಭವಿಸಿವೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಿರುವ ಕಾರಣ ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯದ ಒಳಹರಿವು 1.75 ಲಕ್ಷ ಕ್ಯುಸೆಕ್‌ಗೆ ತಲುಪಿದೆ. ಹೀಗಾಗಿ ಜಲಾಶಯದ 26 ಗೇಟ್‌ಗಳನ್ನು ತೆರೆದು 1.25 ಲಕ್ಷ ಕ್ಯುಸೆಕ್ ನೀರನ್ನು ಬುಧವಾರ ಸಂಜೆಯಿಂದ ಬಿಡಲಾಗುತ್ತಿದೆ.
ಆಲಮಟ್ಟ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಬುಧವಾರ ನೀರಿನ ಮಟ್ಟ 516.84 ಮೀಟರ್‌ಗೆ ತಲುಪಿತ್ತು.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1,01,708 ಕ್ಯುಸೆಕ್, ದೂಧ್‌ಗಂಗಾ ನದಿಯಿಂದ 29,216 ಕ್ಯುಸೆಕ್ ಸೇರಿದಂತೆ 1.30 ಲಕ್ಷ ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಸೇತುವೆ ಬಳಿ ಕೃಷ್ಣಾ ನದಿ ಸೇರುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ರಸ್ತೆಗಳಿಗೆ ಮಣ್ಣು ಕುಸಿದಿದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಸದ್ಯ ನದಿಗೆ 13 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಗದ್ದೆಗಳು, ಬಾಳೆತೋಟಗಳು ನೀರಿನಲ್ಲಿ ಮುಳುಗಿವೆ. ಹಲವು ರಸ್ತೆಗಳು ಜಲಾವೃತಗೊಂಡಿವೆ. ನಾಪೋಕ್ಲು– ಮೂರ್ನಾಡು ರಸ್ತೆಯಲ್ಲಿ ನೀರು ಹರಿಯುತ್ತಿದೆ.
ಹಾಲೇರಿ– ಹಟ್ಟಿಹೊಳೆ ರಸ್ತೆ, ಮಡಿಕೇರಿ– ಕಡಮಕಲ್ ಸುಬ್ರಹ್ಮಣ್ಯ ರಸ್ತೆಯಲ್ಲಿ ಮಣ್ಣು ಕುಸಿದು ಆತಂಕ ಸೃಷ್ಟಿಸಿದೆ. ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಸಮೀಪ ಬೃಹತ್ ಗಾತ್ರದ ಮರವೊಂದು ಉರುಳಿ 11 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿ ತುಂಡಾಗಿ, ವಿದ್ಯುತ್ ವ್ಯತ್ಯಯ ಉಂಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರಿನ ಕುಕ್ಕುಜೆಯಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾಡಬಾಗಿಲು ಸೇತುವೆ ಕುಸಿದಿದೆ. ಇದನ್ನು ಅವಲಂಬಿಸಿದ್ದ ಸುಮಾರು 30ರಷ್ಟು ಮಲೆಕುಡಿಯ ಮತ್ತು ಇತರ ಅರಣ್ಯವಾಸಿ ಕುಟುಂಬಗಳಿಗೆ ಸಮಸ್ಯೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತಗಳು ಉಂಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗಿರಿಗೆ ಪ್ರವಾಸ ನಿಷೇಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿ ಪಾತ್ರಗಳಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಜೊಯಿಡಾದಲ್ಲಿ ನಿರಂತರ ಮಳೆ ಬೀಳುತ್ತಿದ್ದು ಉಳವಿ–ಗೋವಾ ನಡುವಿನ ರಸ್ತೆ ಡಿಗ್ಗಿ ಬಳಿ ಜಲಾವೃತಗೊಂಡಿದೆ. ಮುಂಡಗೋಡ ತಾಲ್ಲೂಕಿನ ಮಳಗಿ ಗ್ರಾಮದ ಧರ್ಮಾ ಜಲಾಶಯ ಕೋಡಿ ಬಿದ್ದಿದೆ. ಬೆಳಗಾವಿ ಜಿಲ್ಲೆಯ 21 ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಲ್ಲಿ ಮಲಪ್ರಭಾ ನದಿಯಲ್ಲಿ 16,872 ಕ್ಯುಸೆಕ್ ಒಳಹರಿವು ಇತ್ತು. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದರಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯಕ್ಕೆ 33,250 ಕ್ಯುಸೆಕ್‌ಗೆ ನೀರು ಹರಿದುಬರುತ್ತಿದೆ.
ಕಲ್ಯಾಣ ಕರ್ನಾಟಕದ ಕಲಬರಗಿ, ಬೀದರ್, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತಗ್ಗಿದೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಕಾರಂಜಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನದಿಗೆ 4,350 ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
ಭಾರಿ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ 128 ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಿರುವ ಕಲಬುರಗಿ ಜಿಲ್ಲಾಡಳಿತ, 31 ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.