ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯೋಗ ಹೆಚ್ಚಿಸಿ, ಬಾಂಧವ್ಯ ಬೆಸೆದ ‘ಶಕ್ತಿ’

Published 31 ಮೇ 2024, 17:01 IST
Last Updated 31 ಮೇ 2024, 17:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ‘ಶಕ್ತಿ’ ಜಾರಿಯ ನಂತರ ಉದ್ಯೋಗ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಆರ್ಥಿಕ ನೀತಿ ಸಂಸ್ಥೆ, ಜಸ್ಟ್‌ಜಾಬ್ಸ್‌ ನೆಟ್‌ವರ್ಕ್‌ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಪ್ರಮಾಣ ಶೇ 5.1ರಷ್ಟು ಹೆಚ್ಚಳವಾಗಿದೆ. ಅಕ್ಟೋಬರ್–ಡಿಸೆಂಬರ್ 2022ರಲ್ಲಿ ಉದ್ಯೋಗಗಳಲ್ಲಿ ಮಹಿಳಾ ಸಹಭಾಗಿತ್ವದ ಪ್ರಮಾಣ 25.1ರಷ್ಟಿತ್ತು. 2023ರ ಅದೇ ಅವಧಿಯಲ್ಲಿ ಶೇ 30.2ರಷ್ಟಾಗಿದೆ. ಒಟ್ಟು ಕಾರ್ಮಿಕರ ಸಂಖ್ಯೆ ಶೇ 23.7ರಿಂದ ಶೇ 28.8ಕ್ಕೆ ಹೆಚ್ಚಳವಾಗಿದೆ.  

ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್‌ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರ  ಜೂನ್‌ 11ರಂದು ಯೋಜನೆಗೆ ಚಾಲನೆ ನೀಡಿತ್ತು. ಉಚಿತ ಬಸ್‌ ಪ್ರಯಾಣದ ವ್ಯವಸ್ಥೆಯನ್ನು ಬಳಸಿಕೊಂಡ ಮಹಿಳೆಯರು ತಾವು ವಾಸ ಮಾಡುತ್ತಿರುವ ಸ್ಥಳದಿಂದ ಮತ್ತೊಂದು ಪ್ರದೇಶಕ್ಕೆ ಕೆಲಸ ಅರಸಿಕೊಂಡು ಹೋಗುತ್ತಿದ್ದಾರೆ. ಕೆಲಸ ಮುಗಿದ ನಂತರ  ಸುರಕ್ಷಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಿ ಮರಳಿ ಮನೆ ಸೇರುತ್ತಿದ್ದಾರೆ.

ಉಚಿತ ಪ್ರಯಾಣದ ಕಾರಣಕ್ಕೆ ತಮ್ಮ ತವರಿಗೆ ಹೋಗಿ ಬರುವ ಮಹಿಳೆಯರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿದೆ. ಹಣದ ಕೊರತೆ ಅಥವಾ ಪ್ರಯಾಣದ ವೆಚ್ಚಕ್ಕೆ ಗಂಡ ಅಥವಾ ಮಕ್ಕಳ ಮುಂದೆ ಕೈಚಾಚಬೇಕಾದ ಕಾರಣಕ್ಕಾಗಿ ಮದುವೆಯಾದ ನಂತರ ತವರನ್ನೇ ಮರೆತಂತಿದ್ದ ಮಹಿಳೆಯರು ನಿಯಮಿತವಾಗಿ ಹೋಗಿ ಬರುತ್ತಿರುವ ಕಾರಣ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತಿವೆ ಎಂದೂ ವರದಿ ಹೇಳಿದೆ.

ಜಿಎಸ್‌ಟಿಗೂ ‘ಶಕ್ತಿ’: 2023–24ನೇ ಹಣಕಾಸು ಅಂತ್ಯದವರೆಗೆ ರಾಜ್ಯದ ಮಹಿಳೆಯರು 183.07 ಕೋಟಿ ಟಿಕೆಟ್‌ ಪಡೆದಿದ್ದಾರೆ. ಅವರು ಪ್ರಯಾಣಿಸಿದ ದೂರದ ಆಧಾರದ ಟಿಕೆಟ್‌ನ ಒಟ್ಟು ಮೌಲ್ಯ ₹ 4,380.37 ಕೋಟಿ. ಅದಕ್ಕಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹5,015 ಕೋಟಿ ಮೀಸಲಿಟ್ಟಿತ್ತು. ಈ ವಹಿವಾಟಿನ ಭಾಗವಾಗಿ ಸರ್ಕಾರ ₹309.64 ಕೋಟಿ ಜಿಎಸ್‌ಟಿ ಭರಿಸಿದೆ. 2024-25ನೇ ಸಾಲಿನಲ್ಲಿ ಶಕ್ತಿ ಯೋಜನೆಯಿಂದ ₹371.57 ಕೋಟಿ ಜಿಎಸ್‌ಟಿ ಭರಿಸಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಯಾಣದ ಮೂಲಕ ಉಳಿತಾಯವಾದ ಮೊತ್ತ ಆ ಕುಟುಂಬದ ಆದಾಯದ ಒಂದು ಭಾಗವಾಗುತ್ತಿದೆ. ಅಂತಹ ಉಳಿತಾಯವನ್ನು ಇತರೆ ಅಗತ್ಯ ವಸ್ತುಗಳ ಖರೀದಿಗೂ ಅವರು ಬಳಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT