ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಗೆ ಆಕ್ಷೇಪ

6 ತಿಂಗಳಾದರೂ ರಚನೆ ಆಗದ ವನ್ಯಜೀವಿ ಮಂಡಳಿ
Published 7 ಮಾರ್ಚ್ 2024, 19:30 IST
Last Updated 7 ಮಾರ್ಚ್ 2024, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯನ್ನು ರಚನೆ ಮಾಡದೇ, ಫೆ.28ರಂದು ಅಸ್ತಿತ್ವಕ್ಕೆ ಬಂದ ಅಧಿಕಾರಿಗಳಷ್ಟೇ ಇರುವ ಸ್ಥಾಯಿ ಸಮಿತಿಯು ಕೆಲವು ಪ್ರಮುಖ ತೀರ್ಮಾನ ತೆಗೆದುಕೊಂಡಿದೆ.

‘ವನ್ಯಜೀವಿ ಮಂಡಳಿ ರಚನೆ ಮಾಡದೇ ಆರು ತಿಂಗಳಾಗಿದೆ. ವನ್ಯಜೀವಿ ಮಂಡಳಿ ರಚನೆ ಮಾಡಿದ ಬಳಿಕವೇ ಸ್ಥಾಯಿ ಸಮಿತಿ ರಚಿಸಬೇಕು. ತರಾತುರಿಯಲ್ಲಿ ಸ್ಥಾಯಿ ಸಮಿತಿ ರಚಿಸಲಾಗಿದೆ. ಇದರಲ್ಲೂ  ಅಧಿಕಾರೇತರರನ್ನೂ ನೇಮಿಸಬೇಕು. ಆದರೆ, ಸರ್ಕಾರ ನೀತಿ–ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ವನ್ಯಜೀವಿ ತಜ್ಞರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ವನ್ಯಜೀವಿ ಮಂಡಳಿಯ ಒಪ್ಪಿಗೆ ಅತಿ ಮುಖ್ಯ. ಮಂಡಳಿಯ ಸದಸ್ಯರ ಅಭಿಪ್ರಾಯವನ್ನು ಆಧರಿಸಿ ಸರ್ಕಾರ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಆದರೆ, ರಾಜ್ಯದಲ್ಲಿ ವನ್ಯಜೀವಿ ಮಂಡಳಿಯ ಅನುಪಸ್ಥಿತಿಯಲ್ಲಿ ಸ್ಥಾಯಿ ಸಮಿತಿ ನಿರ್ಣಯ ತೆಗೆದುಕೊಂಡಿರುವುದು ನಿಯಮಗಳ ಉಲ್ಲಂಘನೆ ಎಂದು ಅವರು ಹೇಳಿದರು.

ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ–2022ರ ಅನ್ವಯ ವನ್ಯಜೀವಿ ಮಂಡಳಿಯಲ್ಲಿ ಮುಖ್ಯಮಂತ್ರಿ ಅಧ್ಯಕ್ಷರಾಗಿ, ಅರಣ್ಯ ಸಚಿವರು ಉಪಾಧ್ಯಕ್ಷರಾಗಿರಬೇಕು. ಅಧಿಕಾರಿಗಳು ಮತ್ತು ಅಧಿಕಾರಿಗಳಲ್ಲದ ಸದಸ್ಯರೂ ಮಂಡಳಿಯಲ್ಲಿ ಕಡ್ಡಾಯವಾಗಿರಬೇಕು. ಅಲ್ಲದೇ, ಅರಣ್ಯ ಸಚಿವರು ಅಧ್ಯಕ್ಷರಾಗಿರುವ ಸ್ಥಾಯಿ ಸಮಿತಿಗೆ ವನ್ಯಜೀವಿ ಮಂಡಳಿಯ ಕೆಲ ಅಧಿಕಾರೇತರ ಸದಸ್ಯರನ್ನೂ ನಾಮ ನಿರ್ದೇಶನ ಮಾಡಬೇಕು. ಆದರೆ, ಇದು ಯಾವುದೂ ಪಾಲನೆ ಆಗಿಲ್ಲ ಎಂದು ಅವರು ವಿವರಿಸಿದರು.

ಬುಧವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ವೆಸ್ಟ್‌ಕೋಸ್ಟ್‌ ಕಾಗದದ ಕಾರ್ಖಾನೆಯ ಎರಡು ವಿಷಯಗಳು ಪ್ರಸ್ತಾಪಕ್ಕೆ ಬಂದಿದ್ದು, ಅದರಲ್ಲಿ ಒಂದು ಪ್ರಸ್ತಾಪಕ್ಕೆ ಮಾತ್ರ ಒಪ್ಪಿಗೆ ಸಿಕ್ಕಿದೆ. ಕಾರ್ಖಾನೆಯ ಚಟುವಟಿಕೆ ವಿಸ್ತರಿಸುವ ಮತ್ತೊಂದು ಪ್ರಸ್ತಾಪವನ್ನು ಮುಂದೂಡಲಾಗಿದೆ. ಇವೆರಡಲ್ಲದೇ ಇನ್ನೂ ಹಲವು ವಿಷಯಗಳು ಪ್ರಸ್ತಾಪವಾಗಿವೆ. ವನ್ಯಜೀವಿ ಮಂಡಳಿ ಇಲ್ಲದೇ ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ, ಫೆಬ್ರುವರಿಯಲ್ಲಿ ರಚಿಸಿದ ಸ್ಥಾಯಿ ಸಮಿತಿಯನ್ನು ರದ್ದುಪಡಿಸಬೇಕು ಎಂದೂ ಒತ್ತಾಯಿಸಿದರು.

ಕಾನೂನು ಉಲ್ಲಂಘಿಸಿ ವನ್ಯಜೀವಿ ಮಂಡಳಿಯಿಂದ ಅಧಿಕಾರೇತರ ಸದಸ್ಯರನ್ನು ಹೊರಗಿಟ್ಟಿರುವುದು ನಾಡಿನ ಅಮೂಲ್ಯ ವನ್ಯ ಸಂಪತ್ತನ್ನು ಲೂಟಿ ಹೊಡೆಯುವ ಹುನ್ನಾರವೇ?
–ಆರ್‌.ಅಶೋಕ, ವಿರೋಧಪಕ್ಷದ ನಾಯಕ ವಿಧಾನಸಭೆ

ರಾಜ್ಯದಲ್ಲಿ ವನ್ಯಜೀವಿ– ಮಾನವ ಸಂಘರ್ಷ ತಾರಕಕ್ಕೆ ಏರಿದೆ. ಇಂತಹ ವಿಷಯಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವನ್ಯಜೀವಿ ತಜ್ಞರ ಸಲಹೆಗಳು ಮುಖ್ಯವಾಗುತ್ತವೆ. ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಬೀರುವ ಯೋಜನೆಗಳ ಬಗ್ಗೆ ಸ್ಥಾಯಿ ಸಮಿತಿಯು ಚರ್ಚೆ ನಡೆಸಿ, ಕೆಲವು ಪ್ರಸ್ತಾವನೆಗಳಿಗೆ ನೀಡಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಸದಸ್ಯತ್ವಕ್ಕಾಗಿ ‘ಕೈ’ ಕಾರ್ಯಕರ್ತರ ಕಾಟ

‘ವನ್ಯಜೀವಿ ಮಂಡಳಿ ಸದಸ್ಯರ ನೇಮಕಕ್ಕಾಗಿ ಸಿದ್ಧಪಡಿಸಿರುವ ಕಡತ ಕಳೆದ ಮೂರು ತಿಂಗಳಿಂದ ಅರಣ್ಯ ಸಚಿವರ ಬಳಿಯೇ ಇದ್ದು ಅದಕ್ಕೆ ಮುಕ್ತಿ ನೀಡಲು ಸಚಿವರು ಆಸಕ್ತಿ ತೋರಿಸುತ್ತಿಲ್ಲ’ ಎಂದು ಇಲಾಖೆ ಮೂಲಗಳು ಹೇಳಿವೆ.

ಆರು ತಿಂಗಳ ಹಿಂದೆ ಕಡತ ಮುಖ್ಯಮಂತ್ರಿ ಬಳಿ ಹೋದಾಗ ಅಲ್ಲಿ ಕೆಲವು ಹೆಸರುಗಳು ಬದಲಾದವು. ಬಳಿಕ ಕಡತ ಅರಣ್ಯ ಸಚಿವರ ಬಳಿಗೆ ಬಂದ ನಂತರ ಅಲ್ಲಿಯೇ ಉಳಿದಿದೆ.  ವನ್ಯಜೀವಿ ಮಂಡಳಿಗೆ ತಜ್ಞರನ್ನು ಮಾತ್ರ ನೇಮಿಸಬೇಕು ಎಂಬುದು ನಿಯಮ. ಆದರೆ ಅದು ಭರ್ತಿ ಆಗದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಸಚಿವರಿಗೆ ಪ್ರತಿನಿತ್ಯ ಬಂದು ಅರ್ಜಿಗಳನ್ನು ನೀಡುತ್ತಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಅರ್ಜಿಗಳು ಸಚಿವರ ಮುಂದಿವೆ ಎಂದು ಮೂಲಗಳು ತಿಳಿಸಿವೆ.

‘ಮಂಡಳಿ ರಚನೆ ಆಗದೇ ಸ್ಥಾಯಿ ಸಮಿತಿಯಲ್ಲಿ ನಿರ್ಣಯ ತೆಗೆದುಕೊಳ್ಳುವುದು ತಪ್ಪಾಗುತ್ತದೆ’ ಎಂದು ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ ‘ಏನೂ ಆಗಲ್ಲ ನಾನು ನೋಡಿಕೊಳ್ಳುತ್ತೇನೆ. ಚಿಂತಿಸಬೇಡಿ. ನಿರ್ಣಯಗಳನ್ನು ತೆಗೆದುಕೊಳ್ಳೋಣ’ ಎಂದು ಹೇಳಿದರೆಂದು ಮೂಲಗಳು ತಿಳಿಸಿವೆ. ಈ ಭರವಸೆಯ ಮೇರೆಗೆ ಬುಧವಾರದ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಹೊಸ ಮಂಡಳಿ ರಚಿಸದೇ ಕಾನೂನು ಬಾಹಿರವಾಗಿ ವನ್ಯಜೀವಿ ಸ್ಥಾಯಿ ಸಮಿತಿ ರಚಿಸಿಕೊಂಡು ತಮಗೆ ಬೇಕಾದಂತೆ ಅಧಿಕಾರ ಚಲಾಯಿಸುತ್ತಿರುವ ಅರಣ್ಯ ಸಚಿವರ ನಡೆ ಅನುಮಾನ ಹುಟ್ಟಿಸುವಂತಿದೆ.
–ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬಿಜೆಪಿ ಶಾಸಕ

‘ಸ್ಥಾಯಿ ಸಮಿತಿ ನಿರ್ಣಯ ತೆಗೆದುಕೊಳ್ಳಬಹುದು’

‘ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ನಿರ್ಣಯಗಳನ್ನು ತೆಗೆದುಕೊಳ್ಳಲು 2022 ರ ವನ್ಯಜೀವಿ (ತಿದ್ದುಪಡಿ) ಕಾಯ್ದೆ ಅಡಿ ಅವಕಾಶ ಇದೆ’ ಎಂದು ಹೆಚ್ಚುವರಿ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿದ್ದುಪಡಿ ಕಾಯ್ದೆಯ ಸೆಕ್ಷನ್‌ 6 ಎ ಯಲ್ಲಿ ಸ್ಥಾಯಿ ಸಮಿತಿ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಅಂಶ ಇದೆ. ಕೇಂದ್ರ ಮಟ್ಟದಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯಲ್ಲಿ ಪ್ರಧಾನಿಯವರು ಅಧ್ಯಕ್ಷರಾಗಿರುತ್ತಾರೆ. ಕೇಂದ್ರ ಅರಣ್ಯ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಕೇಂದ್ರದಲ್ಲಿ 14 ವರ್ಷಗಳಿಂದ ಕೇಂದ್ರ ವನ್ಯಜೀವಿ ಮಂಡಳಿ ಸಭೆ ಆಗಿಲ್ಲ. ಅಲ್ಲಿ ಸ್ಥಾಯಿ ಸಮಿತಿ ಸಭೆಗಳು ಮಾತ್ರ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ರಾಜ್ಯದಲ್ಲೂ ಸ್ಥಾಯಿ ಸಮಿತಿ ರಚಿಸಲು ಆದೇಶ ಬಂದಿದ್ದು ಆ ಪ್ರಕಾರ ಸ್ಥಾಯಿ ಸಮಿತಿ ರಚಿಸಲಾಗಿದೆ. ಸ್ಥಾಯಿ ಸಮಿತಿಯಲ್ಲಿ 10 ಮಂದಿ ಅಧಿಕಾರೇತರರನ್ನು ಸೇರಿಸಬೇಕು. ಅವರನ್ನು ಸಚಿವರು ನೇಮಿಸಿದ್ದಾರೆ. ವನ್ಯಜೀವಿ ಮಂಡಳಿಯಲ್ಲಿ 10 ರಿಂದ 12 ಮಂದಿ ಅಧಿಕಾರೇತರರನ್ನು ನಾಮ ನಿರ್ದೇಶನ ಮಾಡಬೇಕು. ಅದನ್ನು ಮುಖ್ಯಮಂತ್ರಿಯವರೇ ಮಾಡಬೇಕು. ಇವರನ್ನು ಸ್ಥಾಯಿ ಸಮಿತಿಗೆ ಸೇರಿಸುವ ಬಗ್ಗೆ ಅರಣ್ಯ ಸಚಿವರು ಕ್ರಮ ವಹಿಸುತ್ತಾರೆ ಎಂದು ಕುಮಾರ್ ಪುಷ್ಕರ್ ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT