ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ₹7,850 ಕೋಟಿ ಕೊರತೆ

Last Updated 20 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಅಂತ್ಯ ಸಮೀಪಿಸುತ್ತಿದ್ದು, ರಾಜ್ಯಕ್ಕೆ ಕೇಂದ್ರದ ತೆರಿಗೆ ವರಮಾನದಲ್ಲಿ ಬರಬೇಕಿದ್ದ ಪಾಲಿನಲ್ಲಿ ₹ 7,850.29 ಕೋಟಿ ಕೊರತೆಯಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಮಂಡಲದಲ್ಲಿ ಮಂಡಿಸಿರುವ ಮಾಹಿತಿಯಲ್ಲಿ ಈ ವಿವರ ಬಹಿರಂಗಪಡಿಸಿದ್ದಾರೆ. ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ವರಮಾನ ಹಂಚಿಕೆಯಲ್ಲಿ ₹ 24,273.06 ಕೋಟಿ ಬರಬೇಕು. ಡಿಸೆಂಬರ್‌ ಅಂತ್ಯದವರೆಗೆ ₹ 16,422.77 ಕೋಟಿಯಷ್ಟೇ ಬಂದಿದೆ. ವಿವಿಧ ಯೋಜನೆಗಳಿಂದ ರಾಜ್ಯಕ್ಕೆ ನೀಡಬೇಕಿದ್ದ ಅನುದಾನಗಳಲ್ಲೂ ಕೊರತೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷ ಕೇಂದ್ರದಿಂದ ಅನುದಾನದ ರೂಪದಲ್ಲಿ ₹ 28,254.76 ಕೋಟಿ ದೊರಕಬೇಕು. ಡಿಸೆಂಬರ್‌ ಅಂತ್ಯದವರೆಗೆ ₹ 19,737.88 ಕೋಟಿ ಬಂದಿದ್ದು, ₹ 8,507.88 ಕೋಟಿ ಕೊರತೆ ಆಗಿದೆ.

2020–21 ನೇ ಆರ್ಥಿಕ ವರ್ಷದಲ್ಲಿ ತೆರಿಗೆ ವರಮಾನದ ಹಂಚಿಕೆಯ ಪಾಲಿನ ರೂಪದಲ್ಲಿ ₹ 28,591.23 ಕೋಟಿ ರಾಜ್ಯಕ್ಕೆ ಬರಬೇಕಿತ್ತು. ಆದರೆ, ದೊರೆತದ್ದು ₹ 21,694.11 ಕೋಟಿ ಮಾತ್ರ. ಕೋವಿಡ್‌–19 ಸಂಕಷ್ಟದ ನಡುವೆಯೇ ಕೇಂದ್ರದ ತೆರಿಗೆ ಪಾಲಿನಲ್ಲೂ ₹ 6,897.12 ಕೋಟಿ ಕೊರತೆ ಉಂಟಾಯಿತು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರದಲ್ಲೂ ಕೊರತೆ ಉದ್ಭವಿಸಿದೆ. ಈ ವರ್ಷ ₹12,708 ಕೋಟಿ ಜಿಎಸ್‌ಟಿ ಪರಿಹಾರದ ರೂಪದಲ್ಲಿ ದೊರಕಬಹುದು ಎಂಬ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿತ್ತು. ಆದರೆ, ಡಿಸೆಂಬರ್‌ ಅಂತ್ಯದವರೆಗೆ ಜಿಎಸ್‌ಟಿ ಪರಿಹಾರದ ರೂಪದಲ್ಲಿ ₹5,447.97 ಕೋಟಿ ಮಾತ್ರ ಲಭಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕೇಂದ್ರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಪಾಲು ಶೇಕಡ 4.71ರಷ್ಟು ಎಂಬುದಾಗಿ 14ನೇ ಹಣಕಾಸು ಆಯೋಗ ನಿಗದಿಪಡಿಸಿತ್ತು. ಆದರೆ, 15ನೇ ಹಣಕಾಸು ಆಯೋಗ ರಾಜ್ಯದ ಪಾಲನ್ನು ಶೇ 3.64ಕ್ಕೆ ಇಳಿಸಿತು. ಇದರಿಂದಾಗಿ ಕರ್ನಾಟಕ ತೆರಿಗೆ ವರಮಾನದ ಪಾಲಿನಲ್ಲಿ ₹ 6,897.12 ಕೋಟಿಯನ್ನು ಕಳೆದುಕೊಂಡಿದೆ.

ಆಶಾದಾಯಕ ವಾತಾವರಣ: ‘ಜಿಎಸ್‌ಟಿ ಹಂಚಿಕೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ದೊರಕಬಹುದು. ಇದರಿಂದಾಗಿ ಕೇಂದ್ರದಿಂದ ದೊರಕಬೇಕಾದ ವರಮಾನದ ಪಾಲಿನಲ್ಲಿ ಕೊರತೆ ಉಳಿಯುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಬಜೆಟ್‌ ಮತ್ತು ನೀತಿ ಅಧ್ಯಯನ ಕೇಂದ್ರದ ಹಿರಿಯ ಸಂಶೋಧನಾ ಸಲಹೆಗಾರ ಮಧುಸೂಧನ್‌ ಬಿ.ವಿ. ರಾವ್‌.

ಸದ್ಯದ ಅಂಕಿ-ಅಂಶಗಳನ್ನು ಗಮನಿಸಿದರೆ, ರಾಜ್ಯದ ವರಮಾನ ಸಂಗ್ರಹದಲ್ಲಿ ಜನವರಿ ವೇಳೆಗೆ ಶೇ 86ರಷ್ಟು ಗುರಿ ಸಾಧನೆಯಾಗಿದೆ. ಡಿಸೆಂಬರ್‌ನಿಂದ ₹ 19,000 ಕೋಟಿ ವರಮಾನ ಸಂಗ್ರಹವಾಗಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಇನ್ನೂ ₹ 40,000 ಕೋಟಿ ಸಂಗ್ರಹವಾಗಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT