ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಯಲ್ಲಿ ಕೆರಗೋಡು ವಿವಾದದ ಜಟಾಪಟಿ

Published 14 ಫೆಬ್ರುವರಿ 2024, 23:50 IST
Last Updated 14 ಫೆಬ್ರುವರಿ 2024, 23:50 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ ಪ್ರಕರಣ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಕಾವೇರಿದ ಜಟಾಪಟಿಗೆ ಕಾರಣವಾಯಿತು. 

ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಕೆರಗೋಡು ವಿಚಾರ ಪ್ರಸ್ತಾಪಿಸಿದರು. ಆಗ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮತ್ತು ಕಾಂಗ್ರೆಸ್‌ನ ಗಣಿಗ ರವಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಕೆರಗೋಡಿನಲ್ಲಿ ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರಧ್ವಜವನ್ನೂ, ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಬಾವುಟ ಮತ್ತು ಉಳಿದ ಸಂದರ್ಭಗಳಲ್ಲಿ ಹನುಮಧ್ವಜ ಹಾರಿಸುತ್ತಾರೆ. ಆದರೆ, ಇತ್ತೀಚೆಗೆ ಸರ್ಕಾರ ಏಕಾಏಕಿ ಹನುಮ ಧ್ವಜವನ್ನು ಇಳಿಸಿ ರಾಷ್ಟ್ರಧ್ವಜ ಅನಾವರಣಗೊಳಿಸಿದೆ.  ರಾಷ್ಟ್ರಧ್ವಜಕ್ಕೂ ಸಂಹಿತೆ ಇದೆ. ಅವೆಲ್ಲವನ್ನೂ ಗಾಳಿಗೆ ತೂರಿ ಮಧ್ಯಾಹ್ನ 3 ಗಂಟೆಗೆ ಹಾರಿಸಿದ್ದಾರೆ. ಹನುಮ ಧ್ವಜದ ಕುರಿತು ಇರುವ ದ್ವೇಷದ ಕಾರಣಕ್ಕಾಗಿಯೇ ಈ ರೀತಿ ಮಾಡಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮತ್ತು ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಹೊರಟಾಗ ಕಾಂಗ್ರೆಸ್‌ ಸರ್ಕಾರಗಳು ವಿರೋಧಿಸಿದ್ದವು ಎಂದು ಅಶೋಕ ಕಿಡಿಕಾರಿದರು.

‘ಈ ಸ್ತಂಭವನ್ನು ಗ್ರಾಮದ ಜನರೇ ಹಣ ಹಾಕಿ ಸ್ಥಾಪಿಸಿದ್ದಾರೆ. ಗ್ರಾಮ ಪಂಚಾಯಿತಿ ಸಭೆಯಲ್ಲೂ ಈ ಸಂಬಂಧ ಬಹುಮತದ ನಿರ್ಣಯವನ್ನೂ ತೆಗೆದುಕೊಳ್ಳಲಾಗಿದೆ. ಇದನ್ನು ಸಹಿಸದ ಕಾಂಗ್ರೆಸ್ ಅಲ್ಲಿ ಜನರನ್ನು ರೊಚ್ಚಿಗೆಬ್ಬಿಸುವ ಕೆಲಸ ಮಾಡಿ, ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗಣಿಗ ರವಿಕುಮಾರ್, ಬಿಜೆಪಿ ಉದ್ದೇಶ ಪೂರ್ವಕವಾಗಿಯೇ ಅಲ್ಲಿ ಹನುಮಧ್ವಜದ ವಿವಾದವನ್ನು ಸೃಷ್ಟಿಸಿದೆ. ಇದರ ಹಿಂದೆ ರಾಜಕೀಯ ಕಾರಣವೂ ಇದೆ. ಇವರಿಗೆ ರಾಷ್ಟ್ರಧ್ವಜ ಹಾರಿಸುವುದು ಬೇಕಿಲ್ಲ ಎಂದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಚಲುವರಾಯಸ್ವಾಮಿ, ಬಿಜೆಪಿಯವರು ರಾಷ್ಟ್ರಧ್ವಜ ಕಿತ್ತು ಹಾಕುವ ಮಾತು ಆಡುತ್ತಾರೆ. ರಾಷ್ಟ್ರಧ್ವಜವನ್ನು ತಾಲಿಬಾನ್‌ ಧ್ವಜ ಎಂದೂ ಹೇಳುತ್ತಾರೆ. ಅವರದು ಸಂವಿಧಾನ ವಿರೋಧಿ ಹೇಳಿಕೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ನ ನಯನಾ ಮೋಟಮ್ಮ ಮಾತನಾಡಿ, ‘ನಿಮಗೆ ರಾಷ್ಟ್ರಧ್ವಜ ಬೇಕಾ, ಹನುಮಧ್ವಜ ಬೇಕಾ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಯಾರೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಬಾರದು ಎಂದು ಹೇಳಿದರು. ಈ ಹಂತದಲ್ಲಿ ಬಿಜೆಪಿ– ಕಾಂಗ್ರೆಸ್ ಮಧ್ಯೆ ಜಟಾಪಟಿ ನಡೆಯಿತು. ಬಿಜೆಪಿ ಸದಸ್ಯರು ಜೈಶ್ರೀರಾಮ್‌ ಎಂದು ಘೋಷಣೆ ಕೂಗಿದರು.

ರಾಮ ದ್ವೇಷ ಹೇಗೆ ಸಾಧ್ಯ?:

‘ನಮಗೆ ರಾಮ– ಹನುಮರ ಮೇಲೆ ದ್ವೇಷ ಏಕೆ ಇರಬೇಕು ಹೇಳಿ? ನಾವು ರಾಮ–ಹನುಮರನ್ನು ಪೂಜಿಸುವವರು. ನೀವೂ ಪೂಜಿಸುತ್ತೀರಿ. ಆದರೆ, ನೀವು ಪ್ರಚಾರ ತೆಗೆದುಕೊಳ್ಳುತ್ತೀರಿ ಅಷ್ಟೇ’ ಎಂದು ಕಾಂಗ್ರೆಸ್‌ನ ಆರ್‌.ವಿ.ದೇಶಪಾಂಡೆ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಗಣಿಗ ರವಿಕುಮಾರ್, ‘ನಾನು ರಾಮನ ಸ್ತೋತ್ರ ಹೇಳುತ್ತೇನೆ, ನಿಮಗೆ ಬರುತ್ತದೆಯೇ’ ಎಂದು ಅಶೋಕ ಅವರನ್ನು ಪ್ರಶ್ನಿಸಿ, ಕೆಲವು ಸಾಲುಗಳನ್ನೂ ಪಠಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT