ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಗೆ ಇಬ್ಬರು ಕೆಎಎಸ್ ಅಧಿಕಾರಿಗಳು ಕಿತ್ತಾಟ ನಡೆಸುತ್ತಿದ್ದಾರೆ. ಒಂದೇ ಕಚೇರಿಯಲ್ಲಿ ಇಬ್ಬರೂ ಕುಳಿತು ಕೆಲಸ ಮಾಡುತ್ತಿದ್ದಾರೆ.
ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಯಲ್ಲಿದ್ದ ಎಸ್.ಎಂ. ಶಿವಕುಮಾರ್ ಅವರನ್ನು ಜುಲೈ 4ರಂದು ಬಿಬಿಎಂಪಿ ಉಪ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಶಿವೇಗೌಡ ಅವರನ್ನು ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಗೆ ಅದೇ ದಿನ ವರ್ಗಾವಣೆ ಮಾಡಲಾಗಿತ್ತು. ಜುಲೈ 5ರಂದು ಶಿವೇಗೌಡ ಕೆಐಎಡಿಬಿ ಕಚೇರಿಗೆ ಹಾಜರಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು.
ವರ್ಗಾವಣೆ ಪ್ರಶ್ನಿಸಿ ಶಿವಕುಮಾರ್ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ ) ಅರ್ಜಿ ಸಲ್ಲಿಸಿದ್ದರು. ಆರಂಭದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿದ್ದ ನ್ಯಾಯಮಂಡಳಿ, ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿತ್ತು. ಕೆಎಟಿ ಆದೇಶ ಪ್ರಶ್ನಿಸಿ ಶಿವಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು, ಅಂತಿಮ ಆದೇಶ ಪ್ರಕಟಣೆ ಬಾಕಿ ಇದೆ.
ವಿಶೇಷ ಭೂಸ್ವಾಧೀನಾಧಿಕಾರಿ–2 ಕಚೇರಿಯಲ್ಲಿ ಶಿವಕುಮಾರ್ ಕುಳಿತು ಕೆಲಸ ಮಾಡುತ್ತಿದ್ದರೆ, ಅದೇ ಕಚೇರಿಯ ವ್ಯವಸ್ಥಾಪಕರ ಕಚೇರಿಯಲ್ಲಿ ಕುಳಿತು ಶಿವೇಗೌಡ ಕೆಲಸ ಮಾಡುತ್ತಿದ್ದಾರೆ. ಕಡತವನ್ನು ಯಾರ ಮುಂದೆ ಮಂಡಿಸಬೇಕು ಎಂಬ ಗೊಂದಲದಲ್ಲಿ ಕಚೇರಿ ಸಿಬ್ಬಂದಿ ಮುಳುಗಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿವೇಗೌಡ, ‘ಸರ್ಕಾರದ ಆದೇಶದಂತೆ ನಾನು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದೇನೆ. ನಾನು ಕರ್ತವ್ಯದಲ್ಲಿರುವಾಗಲೇ ಯಥಾಸ್ಥಿತಿ ಆದೇಶ ಬಂದಿದೆ. ಹೀಗಾಗಿ ಮುಂದುವರಿದಿದ್ದೇನೆ. ಸಮಸ್ಯೆ ಪರಿಹರಿಸುವುದಾಗಿ ಮಂಡಳಿಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದರು.
ಶಿವಕುಮಾರ್ ಅವರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಅವರು ಮೊಬೈಲ್ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.