ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮ್ಮೆ‌ ಮಹಿಳೆಯರಿಗೆ ಮುಖ್ಯಮಂತ್ರಿಯಾಗುವ ಯೋಗ ಬರಲಿದೆ– ಕೋಡಿಮಠದ ಸ್ವಾಮೀಜಿ

Published 20 ಆಗಸ್ಟ್ 2023, 7:21 IST
Last Updated 20 ಆಗಸ್ಟ್ 2023, 7:21 IST
ಅಕ್ಷರ ಗಾತ್ರ

ಬೆಳಗಾವಿ: 'ಒಮ್ಮೆ ಮಹಿಳೆಯರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಬರಲಿದೆ. ಅವರಿಗೂ ಅವಕಾಶ ಸಿಗಲಿ' ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

'ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ?' ಎಂಬ ಸುದ್ದಿಗಾರರ ಪ್ರಶ್ನೆಗೆ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

'ಶ್ರಾವಣ ಮಾಸದ ಮಧ್ಯದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧದ ಭೀತಿಯಿದೆ. ಭೂಕಂಪ, ಸುನಾಮಿಯಿಂದ ಹೆಚ್ಚಿನ ಜನರ ಸಾವು- ನೋವು ಸಂಭವಿಸಲಿವೆ. ವಿಷಾನಿಲ ಬೀಸುವ ಪ್ರಸಂಗವಿದೆ. ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ ಒಂದೆರಡು ದೇಶ ನಾಶವಾಗಲಿವೆ. ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ' ಎಂದರು.

'ದಕ್ಷಿಣ ಭಾರತದಲ್ಲಿ ಸಮೃದ್ಧಿಯ ಲಕ್ಷಣಗಳಿವೆ.‌‌ ಇಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಭೂಕಂಪದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಿದೆ. ಇದ್ದಕ್ಕಿದ್ದಂತೆ ಜನರ ಸಾವನ್ನಪ್ಪುವ ಆತಂಕವಿದೆ. ಜಾಗತಿಕ ಮಟ್ಟದ ವಿಷಾನಿಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವ ಪ್ರಸಂಗವಿದೆ. ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು' ಎಂದು‌ ಹೇಳಿದರು.

'ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಹೇಳಲು ಇನ್ನೂ ಸಮಯವಿದೆ. ಅದನ್ನು ನೋಡಿ ಹೇಳುತ್ತೇವೆ' ಎಂದರು.

'ಮನುಷ್ಯನಿಗೆ ದೈವದ ಬಲ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾರೆಯೋ, ಅವರಿಗೆ ತೊಂದರೆಯಿಲ್ಲ. ಇಲ್ಲದಿದ್ದರೆ ಆಪತ್ತು, ಸಾವು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆಯಾಗುತ್ತದೆ. ಪ್ರಕೃತಿ ನಿಯಮವದು. ಪ್ರಾಕೃತಿಕ ದೋಷದಿಂದಲೇ ಸಾವು-ನೋವು ಹೆಚ್ಚುತ್ತಿವೆ' ಎಂದು ಹೇಳಿದರು

'ನಾವು ಸೇವಿಸುವ ಆಹಾರ ಪದ್ಧತಿ ಬದಲಾವಣೆಯಾಗಿದೆ. ಮೊದಲು ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಬೆಳೆಯಲಾಗುತ್ತಿತ್ತು. ಈಗ ರಾಸಾಯನಿಕ ಸಿಂಪಡಣೆ ಹೆಚ್ಚುತ್ತಿದೆ. ಹಣ್ಣಿಗೂ ರಾಸಾಯನಿಕ ಬೆರೆಸಲಾಗುತ್ತಿದೆ. ವಿಷವನ್ನೇ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ಉಣ್ಣುವಾಗ ಆರೋಗ್ಯ ವೃದ್ಧಿ ಹೇಗೆ ಸಾಧ್ಯ' ಎಂದು ಪ್ರಶ್ನಿಸಿದರು.

'ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಮರಗಳನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ' ಎಂದ‌ ಅವರು, 'ಮೊದಲು ಅಂತರ್ಜಲ‌ ಮಟ್ಟ ಹೆಚ್ಚಿತ್ತು. 40 ಅಡಿಯವರೆಗೆ ಬಾವಿ ಕೊರೆಯಿಸಿದರೆ, ಶುದ್ಧ ನೀರು ಸಿಗುತ್ತಿತ್ತು. ನೀರಿನಲ್ಲಿ ಮಣ್ಣಿನ ಅಂಶ ಸೇರಿರುತ್ತಿತ್ತು. ಅದು ಮನುಷ್ಯನಿಗೆ ಅಗತ್ಯವಾಗಿ ಬೇಕಿತ್ತು. ಆದರೆ, ಈಗ ಸಾವಿರ ಅಡಿ ಕೊಳವೆಬಾವಿ ಕೊರೆಯಿಸಿ ನೀರು ಪಡೆಯುತ್ತಿದ್ದೇವೆ. ಅದನ್ನು ಸೇವಿಸುವುದರಿಂದ ಆರೋಗ್ಯ ಬಿಗಡಾಯಿಸುತ್ತಿದೆ' ಎಂದರು.

'ಮನುಷ್ಯ ವೇಗವಾಗಿ ಹಣ ಮಾಡಲು ಹೊರಟಿದ್ದಾನೆ. ಹಾಗಾಗಿ ಆಪತ್ತು ಹೆಚ್ಚಿವೆ. ಇದರ ನಿಯಂತ್ರಣಕ್ಕೆ ಭಗವಂತನಿದ್ದಾನೆ. ಆದರೆ, ಮನುಷ್ಯ ದೇವರನ್ನೇ ಮರೆತಿದ್ದಾನೆ. ಜನರು ಹಣದ ಬದಲಿಗೆ, ದೈವದ ಹಿಂದೆ ಹೋಗಬೇಕು. ಎಲ್ಲರೂ ದೈವದ ಮೇಲೆ ನಂಬಿಕೆಯಿಟ್ಟು ಜೀವನ ಮಾಡಬೇಕು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT