ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ‘ಮೌಲ್ಯ’ ಹೆಚ್ಚಿಸಿಕೊಂಡ ಟೊಮೆಟೊದ್ದೇ ಪಾರುಪತ್ಯ! ಹೊರರಾಜ್ಯದಿಂದಲೂ ಭಾರಿ ಬೇಡಿಕೆ

₹1,700 ತಲುಪಿದ 15 ಕೆ.ಜಿ ಬಾಕ್ಸ್‌ ದರ * ಒಂದೇ ದಿನ 13 ರಾಜ್ಯಗಳಿಗೆ 41 ಲಾರಿ ಸರಬರಾಜು *
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ಕೋಲಾರ: ಹೊರ ರಾಜ್ಯಗಳಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೋಲಾರ ಎಪಿಎಂಸಿಯಿಂದ ಒಂದೇ ದಿನ 13 ರಾಜ್ಯಗಳಿಗೆ 41 ಲಾರಿ ಟೊಮೆಟೊ ಸರಬರಾಜು ಆಗಿದೆ.

ಹೊರ ರಾಜ್ಯಗಳಿಂದ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ದಿನೇ ದಿನೇ ಟೊಮೆಟೊ ಧಾರಣೆ ಏರುತ್ತಲೇ ಇದೆ. ಆದರೆ, ಇಳುವರಿ ಕೊರತೆ ಕಾರಣ ಬೇಡಿಕೆಗೆ ತಕ್ಕಂತೆ ಟೊಮೆಟೊ ಪೂರೈಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ತಿಂಗಳ ಅಂತ್ಯಕ್ಕೆ ಟೊಮೆಟೊ ಬೆಲೆ ಇನ್ನೂ ದುಬಾರಿ ಆಗುವ ಸಾಧ್ಯತೆ ಇದೆ.

ಬುಧವಾರ ನಡೆದ ಹರಾಜಿನಲ್ಲಿ 15 ಕೆ.ಜಿಯ ಟೊಮೆಟೊ ಬಾಕ್ಸ್‌ ₹1,700 ವರೆಗೆ ಮಾರಾಟವಾಗಿದೆ. ಎಪಿಎಂಸಿಗೆ 11,925 ಕ್ವಿಂಟಲ್‌ ಅಂದರೆ 79,500 ಬಾಕ್ಸ್‌ ಟೊಮೆಟೊ ಆವಕವಾಗಿತ್ತು. ಇದೇ ಋತುವಿನಲ್ಲಿ ಕಳೆದ ವರ್ಷ ಈ ಪ್ರಮಾಣ ಎರಡರಷ್ಟಿತ್ತು.

ಬೇರೆ ರಾಜ್ಯಗಳಲ್ಲಿ ದರ ಏರಿಕೆ ಬದಿಗಿರಲಿ ಟೊಮೆಟೊ ಸಿಗುವುದೇ ಕಷ್ಟವಾಗಿದೆ. ಪ್ರತಿದಿನ ಉತ್ತರ ಭಾರತ ಸೇರಿದಂತೆ ಹೊರ ರಾಜ್ಯಗಳ ನೂರಾರು ವರ್ತಕರು, ದಲ್ಲಾಳಿಗಳು ಹರಾಜಿನಲ್ಲಿ ಭಾಗವಹಿಸಲು ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾದ ಕೋಲಾರಕ್ಕೆ ಬರುತ್ತಿದ್ದಾರೆ.

ತಿಂಗಳ ಅಂತ್ಯಕ್ಕೆ ಇನ್ನೂ ದುಬಾರಿ

ಛತ್ತೀಸಗಢಕ್ಕೆ ಎಂಟು ಲಾರಿ, ತಮಿಳುನಾಡಿಗೆ ಏಳು ಲಾರಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್‌ ತಲಾ ನಾಲ್ಕು ಲಾರಿ, ಒಡಿಶಾ, ಆಂಧ್ರಪ್ರದೇಶ, ಉತ್ತರ ಪ್ರದೇಶ ಹಾಗೂ ರಾಜಸ್ಥಾನಕ್ಕೆ ಎರಡು ಲಾರಿ ಲೋಡ್‌ ಟೊಮೆಟೊ ಸರಬರಾಜು ಮಾಡಲಾಗಿದೆ.

‘ಬೇರೆ ರಾಜ್ಯಗಳಲ್ಲಿ ಟೊಮೆಟೊ ಸಂಗ್ರಹ ಇಲ್ಲ. ಹೀಗಾಗಿ, ಈ ಪರಿ ಬೇಡಿಕೆ ನಿರ್ಮಾಣವಾಗಿದೆ. ನಮ್ಮ ಮಾರುಕಟ್ಟೆಗೆ ಬಂದ ಎಲ್ಲಾ ಟೊಮೆಟೊವನ್ನು ಸರಬರಾಜು ಮಾಡಲಾಗುತ್ತಿದೆ. ಇದು ಟೊಮೆಟೊ ಋತುವಾಗಿದ್ದರೂ ಜಿಲ್ಲೆಯಲ್ಲಿ ಫಸಲು ಕಡಿಮೆ ಆಗಿದೆ. ಜೊತೆಗೆ ಗುಣಮಟ್ಟವೂ ತಗ್ಗಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ತಿಂಗಳಾಂತ್ಯದಲ್ಲಿ ಇನ್ನೂ ದರ ಏರಿಕೆ ಆಗಲಿದೆ. ಜಿಲ್ಲೆಯ ಹಲವಾರು ರೈತರು ಟೊಮೆಟೊ ನಾಟಿ ಮಾಡಿದ್ದು, ಇನ್ನು 15ರಿಂದ 20 ದಿನಗಳಲ್ಲಿ ಫಸಲು ಬರಲಿದೆ. ಇನ್ನೂ ಕೆಲವರು ಏರುತ್ತಿರುವ ದರ ನೋಡಿ ಈಗ ಟೊಮೆಟೊ ಬೆಳೆಯಲು ಮುಂದಾಗುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಯ‌ಲ್ಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊ ಬೆಲೆ ₹100 ದಾಟಿದೆ. ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿ ₹125 ತಲುಪಿದೆ.   

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ವಹಿವಾಟು
ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ವಹಿವಾಟು
ಕಳೆದ 2–3 ವರ್ಷಗಳಿಗೆ ಹೋಲಿಸಿದರೆ ಶೇ 30ರಷ್ಟೂ ಟೊಮೆಟೊ ಮಾರುಕಟ್ಟೆಗೆ‌ ಬರುತ್ತಿಲ್ಲ. ಜೊತೆಗೆ ರೋಗದ ಕಾಟ. ಬೇಡಿಕೆ ಹೆಚ್ಚಿದ್ದು ಅದಕ್ಕೆ ತಕ್ಕಂತೆ ಸ್ಪಂದಿಸಲು ಆಗುತ್ತಿಲ್ಲ
-ವಿಜಯಲಕ್ಷ್ಮಿ ಕಾರ್ಯದರ್ಶಿ ಎಪಿಎಂಸಿ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT