ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ನೂತನ ಕಾರ್ಯಾಧ್ಯಕ್ಷರ ನೇಮಕ

Published 23 ಮಾರ್ಚ್ 2024, 16:19 IST
Last Updated 23 ಮಾರ್ಚ್ 2024, 22:55 IST
ಅಕ್ಷರ ಗಾತ್ರ

ನವದೆಹಲಿ:ಕೆಪಿಸಿಸಿಗೆ ಐವರು ನೂತನ ಕಾರ್ಯಾಧ್ಯಕ್ಷರನ್ನು ಕಾಂಗ್ರೆಸ್‌ ಶನಿವಾರ ನೇಮಕ ಮಾಡಿದೆ. ಲೋಕಸಭಾ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಿಸಲಾಗಿದೆ. ಈ ನೇಮಕದಲ್ಲಿ ಜಾತಿ ಹಾಗೂ ಪ್ರದೇಶವಾರು ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ. 

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಟಿಕೆಟ್‌ ಹಂಚಿಕೆಯ ಕಗ್ಗಂಟನ್ನು ಕೈ ಪಾಳಯ ಬಹುತೇಕ ಬಗೆಹರಿಸಿದೆ. ಅದರ ಬೆನ್ನಲ್ಲೇ, ಪಕ್ಷದ ಸಂಘಟನಾತ್ಮಕ ಬದಲಾವಣೆ ಮಾಡಿದೆ. 

ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬುದು ಕಾಂಗ್ರೆಸ್‌ನಲ್ಲಿರುವ ನಿಯಮ. ಅನುಕೂಲಕ್ಕೆ ತಕ್ಕಂತೆ ಈ ನಿಯಮದಲ್ಲಿ ಕೆಲವು ನಾಯಕರಿಗೆ ವಿನಾಯಿತಿ ಸಿಕ್ಕಿದ್ದು ಉಂಟು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ ಹಾಗೂ ಈಶ್ವರ ಖಂಡ್ರೆ ಅವರು ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಕಾರ್ಯಾಧ್ಯಕ್ಷರ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಅವರು ಈ ಹಿಂದೆಯೇ ಕೋರಿಕೊಂಡಿದ್ದರು.

ತನ್ವೀರ್ ಸೇಠ್‌, ವಿನಯ್‌ ಕುಮಾರ್ ಸೊರಕೆ, ಜಿ.ಸಿ.ಚಂದ್ರಶೇಖರ್, ವಸಂತ ಕುಮಾರ್‌ ಹಾಗೂ ವಿನಯ್‌ ಕುಲಕರ್ಣಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ ಎಂಬ ಸುದ್ದಿಗಳು ಈ ಹಿಂದೆ ಹರಿದಾಡಿದ್ದವು. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೆವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿ ಐವರ ಹೆಸರನ್ನು ಹೈಕಮಾಂಡ್‌ಗೆ ಆರು ತಿಂಗಳ ಹಿಂದೆಯೇ ಶಿಫಾರಸು ಮಾಡಿದ್ದರು. ಆದರೆ, ಹೈಕಮಾಂಡ್‌ ಒಪ್ಪಿಗೆ ನೀಡಿರಲಿಲ್ಲ.

ಕಾರ್ಯಾಧ್ಯಕ್ಷರಾಗಿ ನೇಮಕ ಗೊಂಡಿರುವ ಮಂಜುನಾಥ ಭಂಡಾರಿ ಹಾಗೂ ವಸಂತ ಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರು. ತನ್ವೀರ್ ಸೇಠ್‌ ಹಾಗೂ ವಿನಯ್‌ ಕುಲಕರ್ಣಿ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಕಾರ್ಯಾಧ್ಯಕ್ಷ ಸ್ಥಾನ ನೀಡಿ ಅವರನ್ನು ಸಮಾಧಾನಪಡಿಸಲಾಗಿದೆ. 

ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿನಯಕುಮಾರ್ ಸೊರಕೆ ಅವರು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದರು. ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಸಹ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಲ್‌.ಹನುಮಂತಯ್ಯ ಅವರು ಕೋಲಾರ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾಗಿ ನೇಮಕ ಮಾಡಿರುವುದರಿಂದ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT