ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ಹಲವು ವರ್ಷಗಳಿಂದ ತಳವೂರಿರುವ ಸಿಬ್ಬಂದಿಯ ಬದಲಾವಣೆಗೆ ರಾಜ್ಯ ಸರ್ಕಾರ ಕೊನೆಗೂ ನಿರ್ಧರಿಸಿದೆ.

ಆ ಮೂಲಕ, ನಾನಾ ಇಲಾಖೆಗಳ ಹುದ್ದೆಗಳಿಗೆ ನಡೆಯುವ ನೇಮಕಾತಿಯಲ್ಲಿ ಅಕ್ರಮ, ಫಲಿತಾಂಶ ಪ್ರಕಟಣೆ ವಿಳಂಬ, ಗೌಪ್ಯ ಮಾಹಿತಿ ಸೋರಿಕೆಯಲ್ಲಿ ಸಿಬ್ಬಂದಿ ಪಾತ್ರವೂ ಇದೆ ಎಂಬ ಅಪವಾದಕ್ಕೆ ಅಂತ್ಯ ಹಾಡಿ, ಕೆಪಿಎಸ್ಸಿಗೆ ಕಾಯಕಲ್ಪ ನೀಡಲು ಮುಂದಾಗಿದೆ.

ಕೆಪಿಎಸ್ಸಿಗೆ ನೇಮಕಗೊಂಡಿರುವ ಶೇ 50ರಷ್ಟು ಸಿಬ್ಬಂದಿಯನ್ನು ನಿಯೋಜನೆ ಮೇರೆಗೆ ಹೊರಗಡೆಗೆ ಕಳುಹಿಸಿ, ಬದಲಿಯಾಗಿ ಇತರ ಇಲಾಖೆಗಳಿಂದ ನಿಯೋಜನೆ ಮಾಡುವ ಉದ್ದೇಶದಿಂದ ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿಯ ಪ್ರಸ್ತಾವವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸಿದ್ಧಪಡಿಸಿದೆ.

ಕಾರ್ಯದರ್ಶಿ, ಪರೀಕ್ಷಾ ನಿಯಂತ್ರಕರು, ಜಂಟಿ ಪರೀಕ್ಷಾ ನಿಯಂತ್ರಕರು ಮತ್ತು ಕಾನೂನು ಕೋಶದ ಮುಖ್ಯಸ್ಥರು ವೃಂದಗಳನ್ನು ಹೊರತುಪಡಿಸಿ ಉಳಿದ ಎಲ್ಲ ವೃಂದಗಳಿಗೆ ಅದರ ತತ್ಸಮಾನ ವೃಂದಗಳಿಂದ ಅಧಿಕಾರಿ, ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಯಾವುದಾದರೂ ಇಲಾಖೆ ಅಥವಾ ಸಚಿವಾಲಯದಿಂದ ನಿಯೋಜನೆ ಮೇಲೆ ಗರಿಷ್ಠ ಐದು ವರ್ಷಗಳಿಗೆ ನೇಮಕಾತಿ ಮಾಡಿಕೊಳ್ಳುವ ಅಂಶ ಈ ಪ್ರಸ್ತಾವದಲ್ಲಿದೆ.

ಕೆಪಿಎಸ್ಸಿ ನಡೆಸುವ ಕೆಎಎಸ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚಾದಾಗ ಬಿಗಿ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದಲ್ಲಿ ಸಮಿತಿಯನ್ನು ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2013) ರಚಿಸಿದ್ದರು. ಈ ಸಮಿತಿಯ ಕೆಲವು ಶಿಫಾರಸುಗಳು ಈಗಾಗಲೇ ಜಾರಿಯಾಗಿವೆ.

ಕೆಪಿಎಸ್ಸಿ ಕಾರ್ಯವೈಖರಿಯಲ್ಲಿ ಸುಧಾರಣೆ ತರಬೇಕಾದರೆ, ‘ಕಾರ್ಯದರ್ಶಿಯನ್ನು ಬಿಟ್ಟು ಇತರ ಸುಮಾರು 288 ಸಿಬ್ಬಂದಿಯ ಪೈಕಿ ಕನಿಷ್ಠ ಶೇ 50ರಷ್ಟು ಮಂದಿಯನ್ನು ನಿಯೋಜನೆ ಮೇರೆಗೆ ಕಳುಹಿಸಿ, ಇತರ ಇಲಾಖೆಗಳ ಸಿಬ್ಬಂದಿಯನ್ನು ನೇಮಿಸಬೇಕು. ಸೂಕ್ಷ್ಮ, ರಹಸ್ಯ ಮಾಹಿತಿಯನ್ನು ನಿರ್ವಹಿಸುತ್ತಿರುವ ಗಣಕ ಶಾಖೆಯಲ್ಲಿ ಈ ವ್ಯವಸ್ಥೆಯನ್ನು ತ್ವರಿತವಾಗಿ ಮಾಡಬೇಕು’ ಎಂದೂ ಹೋಟಾ ಸಮಿತಿ ಶಿಫಾರಸು ಮಾಡಿತ್ತು.

ಕೆಪಿಎಸ್ಸಿಗೆ ಅಧಿಕಾರಿ, ಸಿಬ್ಬಂದಿಯ ನೇಮಕಾತಿ ವಿಧಾನಗಳಿಗೆ ಸಂಬಂಧಿಸಿದ ‘ಕರ್ನಾಟಕ ಲೋಕ ಸೇವಾ ಆಯೋಗ (ಸೇವಾ ಷರತ್ತುಗಳು) ನಿಯಮಗಳು– 1957’ಕ್ಕೆ ಕೆಲವು ತಿದ್ದುಪಡಿ ಮಾಡಿರುವುದನ್ನು ಬಿಟ್ಟರೆ, ಈವರೆಗೆ ಸಮಗ್ರ ತಿದ್ದುಪಡಿ ಆಗಿಲ್ಲ. ಹೋಟಾ ಸಮಿತಿಯ ಶಿಫಾರಸಿಗೆ ಪೂರಕವಾಗಿ ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಕೆಪಿಎಸ್ಸಿ ಪ್ರಸ್ತಾವ ಸಲ್ಲಿಸಿತ್ತು.

12 ವರ್ಷಗಳಿಂದ ನನೆಗುದಿಗೆ: 2013ರಲ್ಲಿಯೇ ಹೋಟಾ ಸಮಿತಿ ಶಿಫಾರಸು ಮಾಡಿದ್ದರೂ 2022ರ ಆಗಸ್ಟ್ 5ರಂದು ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ವೃಂದ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ವಿಷಯ ಮೊದಲ ಬಾರಿಗೆ ಚರ್ಚೆಗೆ ಬಂದಿತ್ತು. ಅಲ್ಲದೆ, ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವ ಮಂಡಿಸಲು ಕೂಡಾ ತೀರ್ಮಾನಿಸಲಾಗಿತ್ತು. ಆದರೆ, ನಾನಾ ಕಾರಣಗಳಿಂದ ನಿಯಮ ರೂಪಿಸುವ ಪ್ರಕ್ರಿಯೆ ಡಿಪಿಎಆರ್ನಲ್ಲೇ ಇತ್ತು. ಈಗ ನಿಯಮಾವಳಿಗೆ ಅಂತಿಮ ರೂಪ ನೀಡಿ, ಆರ್ಥಿಕ ಇಲಾಖೆ ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗಳಿಂದ ಅಭಿಪ್ರಾಯ ಪಡೆದು ಸಚಿವ ಸಂಪುಟ ಸಭೆಗೆ ಡಿಪಿಎಆರ್ ಪ್ರಸ್ತಾವ ಮಂಡಿಸಿದೆ.

ಅಕ್ರಮದಲ್ಲಿ ಸಿಬ್ಬಂದಿಯೂ ಶಾಮೀಲು

‘ಕೆಪಿಎಸ್ಸಿಯಲ್ಲಿ ನಡೆಯುವ ಅಕ್ರಮಗಳು ಮತ್ತು ನೇಮಕಾತಿ ಪ್ರಕ್ರಿಯೆ ವಿಳಂಬದಲ್ಲಿ ಅಲ್ಲಿನ ಸಿಬ್ಬಂದಿಯ ಪಾತ್ರವೂ ಮುಖ್ಯವಾಗಿದೆ. ಹಲವು ವರ್ಷ ಗಳಿಂದ ಕೆಪಿಎಸ್ಸಿಯಲ್ಲಿ ಬೇರು ಬಿಟ್ಟಿರುವ ಸಿಬ್ಬಂದಿ, ತಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವೇ ಇಲ್ಲವೆಂದು ಭಾವಿಸಿಕೊಂಡಿದ್ದಾರೆ. ಕೆಲವರು ಗೋಪ್ಯ ಮಾಹಿತಿಗಳನ್ನು ಸೋರಿಕೆ ಮಾಡುವ ಆರೋಪವೂ ಇದೆ. ಕೆಲವು ಸಿಬ್ಬಂದಿಯಲ್ಲಿ ಕೆಲಸ ಮಾಡುವ ಉತ್ಸಾಹವೇ ಇಲ್ಲ. 2021ರಲ್ಲಿ ನಡೆದ ಎಫ್ಡಿಎ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕಂಪ್ಯೂಟರ್ನಿಂದ ಪೆನ್ಡ್ರೈವ್ಗೆ ಕಾಪಿ ಮಾಡಿಕೊಂಡು ಸೋರಿಕೆ ಮಾಡಿದ್ದ ಸ್ಟೆನೋಗ್ರಾಫರ್ ಸೇರಿದಂತೆ ಆಯೋಗದ ಇಬ್ಬರು ನೌಕರರನ್ನು ಸಿಸಿಬಿ ಅಧಿಕಾರಿ ಗಳು ಬಂಧಿಸಿದ್ದರು. ಆಯೋಗದ ಕಾರ್ಯವೈಖರಿ ಚುರುಕಾಗಬೇಕಾದರೆ ಸಿಬ್ಬಂದಿಯನ್ನು ಆಗಾಗ ಬದಲಾಯಿಸಬೇಕು. ಬೇರೆ ಬೇರೆ ಇಲಾಖೆಯಿಂದ ದಕ್ಷ
ಸಿಬ್ಬಂದಿಯನ್ನು ಆಯೋಗಕ್ಕೆ ಎರವಲು ಸೇವೆ ಮೇಲೆ ನಿಯೋಜಿಸಬೇಕು’ ಎಂದು
ಕೆಪಿಎಸ್ಸಿಯ ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.

ರಾಜ್ಯಪಾಲರ ಅನುಮೋದನೆ ಅಗತ್ಯ

ಸಂವಿಧಾನದ ಅನುಚ್ಛೇದ 318ರ ಅನ್ವಯ ಕೆಪಿಎಸ್ಸಿ ಸದಸ್ಯರ ಮತ್ತು ಸಿಬ್ಬಂದಿಯ ಸಂಖ್ಯೆ ಹಾಗೂ ಸೇವಾ ಷರತ್ತುಗಳ ನಿಯಮಗಳನ್ನು ರಚಿಸುವ ಅಧಿಕಾರ ರಾಜ್ಯಪಾಲರದ್ದು. ಶೇ 50ರಷ್ಟು ಸಿಬ್ಬಂದಿಯನ್ನು ನಿಯೋಜನೆ ಮೇಲೆ ಹೊರಗೆ ಕಳುಹಿಸುವ ‘ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) (ತಿದ್ದುಪಡಿ) ನಿಯಮಗಳು– 2025’ರ ಕರಡುವಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ರಾಜ್ಯಪಾಲರ ಅಂಕಿತ ಪಡೆದು ಗೆಜೆಟ್ ಹೊರಡಿಸಿ ಆಕ್ಷೇಪಣೆ–ಸಲಹೆಗಳನ್ನು ಆಹ್ವಾನಿಸಲಾಗುವುದು. ಕರಡು ನಿಯಮಗಳಲ್ಲಿ ಯಾವುದೇ ಪ್ರಮುಖ ತಿದ್ದುಪಡಿಯ ಅವಶ್ಯಕತೆ ಇಲ್ಲದೇ ಇದ್ದರೆ ಮತ್ತೊಮ್ಮೆ ಸಚಿವ ಸಂಪುಟ ಸಭೆಗೆ ಮಂಡಿಸದೆ ನಿಯಮ ಅಂತಿಮಗೊಳಿಸಲಾಗುವುದು ಎಂದು ಡಿಪಿಎಆರ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.