ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆ: ದೂರು ದಾಖಲು

Published 30 ಮಾರ್ಚ್ 2024, 15:48 IST
Last Updated 30 ಮಾರ್ಚ್ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ಕಚೇರಿಯಲ್ಲಿದ್ದ ಕಿರಿಯ ಎಂಜಿನಿಯರ್‌ಗಳ  ನೇಮಕಾತಿ ಆಯ್ಕೆ ಪಟ್ಟಿ ನಾಪತ್ತೆಯಾಗಿದೆ’ ಎಂದು ಆಯೋಗದ ಸಹಾಯಕ ಕಾರ್ಯದರ್ಶಿ ಜೆ.ರಾಘವೇಂದ್ರ ಅವರು ದೂರು ನೀಡಿದ್ದಾರೆ.

‘ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಮಾರ್ಚ್‌ 22ರಂದು ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಕಿರಿಯ ಎಂಜಿನಿಯರ್‌ಗಳ ನೇಮಕಾತಿಗೆ 2016ರ ಸೆಪ್ಟೆಂಬರ್‌ 24ರಂದು ಪರೀಕ್ಷೆ ನಡೆದಿತ್ತು. ಅದರ ನೇಮಕಾತಿಗೆ ಸಂಬಂಧಿಸಿದ ಕಡತ ಈಗ ನಾಪತ್ತೆಯಾಗಿದೆ’.

‘2018ರ ನವೆಂಬರ್‌ 22ರಂದು ಪ್ರಕಟಿಸಲಾದ ಹೆಚ್ಚುವರಿ ಆಯ್ಕೆಪಟ್ಟಿ ಸಂಬಂಧ ಎಚ್‌.ಡಿ. ವಿವೇಕಾನಂದ ಎಂಬುವರು ಹೈಕೋರ್ಟ್‌ ಮೊರೆ ಹೋಗಿದ್ದರು. ನಂತರ, ಹೈಕೋರ್ಟ್ ಆದೇಶದಂತೆ ಕೆಪಿಎಸ್​ಸಿ ಗೋಪ್ಯ ಶಾಖೆ–3ರಲ್ಲಿ ಆಯ್ಕೆ ಪಟ್ಟಿ ದ್ಧಪಡಿಸಲಾಗಿತ್ತು. ಇದೇ ವರ್ಷದ ಜನವರಿ 22ರಂದು ಕಾರ್ಯದರ್ಶಿಯವರ ಆ‍ಪ್ತ ಶಾಖೆಯಲ್ಲಿ ಕಡತವನ್ನು ಸ್ವೀಕರಿಸಲಾಗಿತ್ತು. ಆ ಬಳಿಕ ಕಡತ ನಾಪತ್ತೆಯಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಆಯೋಗದ ಕಚೇರಿಯ ಎಲ್ಲಾ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ನಡೆಸಲಾಗಿದೆ. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2ಕ್ಕೆ ವಾಪಸ್‌ ನೀಡುವಂತೆಯೂ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಆಯೋಗದ ಸಿಬ್ಬಂದಿಯೂ ಕಡತಕ್ಕಾಗಿ ಎಲ್ಲೆಡೆ ಶೋಧ ನಡೆಸಿದ್ದರೂ ಕಡತ ಸಿಕ್ಕಿಲ್ಲ’ ಎಂದು ದೂರಿನಲ್ಲಿ ಹೇಳಲಾಗಿದೆ.

‘ಆಯೋಗದ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಸಿಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ‌

‘ನಿರ್ದಿಷ್ಟವಾಗಿ ಯಾರ ಹೆಸರನ್ನೂ ಹೇಳಿ ದೂರು ನೀಡಿಲ್ಲ. ಪ್ರಕರಣ ಸಂಬಂಧ ಆಯೋಗದಿಂದ ಎಲ್ಲ ಮಾಹಿತಿ ಕೇಳಲಾಗಿದೆ. ಕಡತ ಇನ್ನೂ ಲಭ್ಯವಾಗಿಲ್ಲ. ತನಿಖೆ ಮುಂದುವರಿದಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಚ್‌.ಟಿ.ಶೇಖರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT