ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KPSC ನೇಮಕಾತಿ: ಸಂತ್ರಸ್ತರ ಪರ ಧರಣಿ ಎಚ್ಚರಿಕೆ ನೀಡಿದ ಎಸ್‌. ಸುರೇಶ್‌ ಕುಮಾರ್‌

Published 29 ಜನವರಿ 2024, 6:09 IST
Last Updated 29 ಜನವರಿ 2024, 6:09 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಕಾರ್ಯ ವೈಖರಿಯಿಂದ ನೊಂದಿರುವ ಸಂತ್ರಸ್ತರ ಪರವಾಗಿ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಗೃಹ ಕಚೇರಿಗೆ ಸುಮಾರು 150ಕ್ಕೂ ಅಧಿಕ ಸಂಖ್ಯೆಯ ಯುವಕರು ಮತ್ತು ಯುವತಿಯರು ಬಂದಿದ್ದರು. ಇವರೆಲ್ಲರೂ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ (KPSC ) ಕಾರ್ಯ ವೈಖರಿಯಿಂದ ನೊಂದಿರುವ ಸಂತ್ರಸ್ತ ಯುವ ಜನತೆ. ಅವರೆಲ್ಲರನ್ನು ನೊಂದ, ಆತಂಕದ ಸ್ಥಿತಿಯಲ್ಲಿ ನೋಡಿ ನನಗೆ ನಿಜಕ್ಕೂ ವೇದನೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಸಂತ್ರಸ್ತರ ಪರಿಸ್ಥಿತಿ ವಿವರಿಸಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಎರಡು ಪತ್ರ ಬರೆದಿದ್ದೇನೆ. ಖುದ್ದಾಗಿ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಆಯೋಗದ ಕಾರ್ಯದರ್ಶಿಗಳ ಜೊತೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳ ಕಾರ್ಯದರ್ಶಿಗಳ ಜೊತೆ ಈ ವಿಚಾರ ತಿಳಿಸಿದ್ದೇನೆ’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಹಿರಿಯ ಸಚಿವರಲ್ಲಿ ಒಬ್ಬರಾದ ಕೆ.ಜೆ.ಜಾರ್ಜ್ ಅವರೊಂದಿಗೂ ಇವರ ಬವಣೆ ವಿವರಿಸಿದ್ದೇನೆ. ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬ ಗಾದೆಗೆ ಸೂಕ್ತವಾಗಿದೆ ಇವರ ಇಂದಿನ ಸ್ಥಿತಿ - ಗತಿ ಎಂದರು.

ಕೆಪಿಎಸ್‌ಸಿ ಆಯೋಗದ ಮತ್ತು ಕಾರ್ಯದರ್ಶಿಗಳ ನಡುವಿನ ವಿರಸ ಈ ಯುವಕರನ್ನು ಅಕ್ಷರಶಃ ಬೀದಿ ಪಾಲು ಮಾಡಿದೆ. ಇವರೆಲ್ಲ ಅದೆಷ್ಟು ಬಾರಿ ಕೆಪಿಎಸ್‌ಸಿ ಗೇಟಿನ ಬಳಿ ಹೋಗಿದ್ದಾರೋ ಲೆಕ್ಕವೇ ಇಲ್ಲ. ಇವರನ್ನು ಕೆಪಿಎಸ್‌ಸಿ ಗೇಟ್ ಒಳಗೆ ಬಿಡುವುದೂ ಇಲ್ಲ. ಇವರಿಗೆ ಸರಿಯಾದ ಮಾಹಿತಿ ದೊರಕುವುದೂ ಇಲ್ಲ. ದೂರ ದೂರದ ಊರುಗಳಿಂದ ತಮ್ಮ ನೇಮಕಾತಿ ಆದೇಶಕ್ಕಾಗಿ ಬರುವ ಜನರು ಅದೆಷ್ಟು ದುಡ್ಡು ಖರ್ಚು ಮಾಡಿಕೊಂಡಿದ್ದರೋ, ರಾತ್ರಿ ಹೊತ್ತು ಮಲಗಲು ಅದೆಷ್ಟು ಕಷ್ಟ ಪಟ್ಟಿದ್ದಾರೋ ತಿಳಿಯದು ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

‘ಉದ್ಯೋಗ ಸೌಧ‘ ಎಂದು ಹೆಸರಿಟ್ಟುಕೊಂಡಿರುವ ಈ ಕಟ್ಟಡದಿಂದ ಈ ಯುವಕರಿಗೆ ನಿರಂತರ ಅನ್ಯಾಯವಾಗುತ್ತಿದೆ. ಇವರೆಲ್ಲ ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಹಳ ದೀರ್ಘ ಸಮಯ ಕೆಲಸ ಮಾಡಬೇಕಿದೆ ಎಂಬುದನ್ನೂ ನಾವು ಗಮನಿಸಬೇಕು. ಇವರುಗಳು ಸಂಪೂರ್ಣ ಹತಾಶೆಗೊಂಡು ಸಿನಿಕರಾಗುವುದು ನಾಡಿನ ಆರೋಗ್ಯಕ್ಕೆ ಒಳಿತಲ್ಲ ಎಂದು ತಿಳಿಸಿದ್ದಾರೆ.

‘ನಾನು (ಸುರೇಶ್‌) ಹೋಗಿ ಮಾತನಾಡಿದಾಗ ಆಯೋಗದ ಅಧ್ಯಕ್ಷರು ಭರವಸೆ ಮಾತನ್ನು ಆಡುತ್ತಾರೆ’ ಆದರೆ ಸಂತ್ರಸ್ತರಿಗೆ ಬೇಕಾಗಿರುವುದು ತಮಗೆ ನ್ಯಾಯಯುತವಾಗಿ ಸಿಗಬೇಕಿರುವ ಫಲಿತಾಂಶ ಅಥವಾ ನೇಮಕಾತಿ ಪತ್ರ ಮಾತ್ರ ಎಂದು ಹೇಳಿದ್ದಾರೆ.

‘ಹೊಟ್ಟೆ ತುಂಬಿರುವ ಉದ್ಯೋಗ ಸೌಧದ ಒಳಗಿನ ಜನಕ್ಕೆ ಕಟ್ಟಡದ ಹೊರಗಡೆ ಇರುವ ಈ ಯುವಕರ ಬವಣೆ ಅರ್ಥವಾಗುತ್ತಿಲ್ಲ’ ಎಂದು ಕುಟುಕಿದ್ದಾರೆ.

ನಾಳೆ (ಮಂಗಳವಾರ) ಬೆಳಿಗ್ಗೆ 10 ಗಂಟೆಗೆ ಸಂತ್ರಸ್ತರ ಪರವಾಗಿ ನ್ಯಾಯ ಕೇಳಲು ‘ಉದ್ಯೋಗ ಸೌಧ‘ದ ಮುಂದೆ ಕೂರುತ್ತೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT