ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಪರಿವರ್ತನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ವ್ಯವಸ್ಥೆ ಜಾರಿ

ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಈ ಯೋಜನೆ
Last Updated 17 ಸೆಪ್ಟೆಂಬರ್ 2018, 20:34 IST
ಅಕ್ಷರ ಗಾತ್ರ

ಬೆಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಪರಿವಭಾವಿತ ಭೂಪರಿವರ್ತನೆ (ಡೀಮ್ಡ್‌ ಕನ್ವರ್ಷನ್‌)ಪ್ರಕ್ರಿಯೆಗೆ ಇನ್ನು ಮುಂದೆ ಸಾರ್ವಜನಿಕರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಕಂದಾಯ ಇಲಾಖೆ ಇದಕ್ಕಾಗಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಭೂಪರಿವರ್ತನೆ ಪ್ರಕ್ರಿಯೆ ಸುಗಮವಾಗಿ ಮತ್ತು ತ್ವರಿತವಾಗಿ ನಡೆಸಲು ಅನುಕೂಲವಾಗುವಂತೆ ಈಗಾಗಲೇ 1964 ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 95 ಕ್ಕೆ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಮೂಲಕ ಪರಿಭಾವಿತ ಭೂಪರಿವರ್ತನೆ ಪ್ರಕ್ರಿಯೆ ಸರಳ ಮಾಡಬಹುದಾಗಿದೆ ಎಂದು ಅವರು ಹೇಳಿದರು.

ಭೂಪರಿವರ್ತನೆಯು 1961 ರ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ’ದಡಿ ಸರ್ಕಾರವು ಪ್ರಕಟಿಸಿರುವ ಮಾಸ್ಟರ್‌ ಪ್ಲ್ಯಾನ್‌ಗೆ ಅನುಗುಣವಾಗಿ ಇದ್ದರೆ, ಅಂತಹ ಪ್ರಕರಣಗಳನ್ನು ಡೀಮ್ಡ್‌ ಕನ್ವರ್ಷನ್‌ ಎಂದು ಪರಿಗಣಿಸಲಾಗುತ್ತದೆ ಎಂದು ದೇಶಪಾಂಡೆ ಹೇಳಿದರು.

ಭೂಪರಿವರ್ತನೆಗೆ ಒಳಪಡುವ ಜಮೀನು ಸ್ಥಳೀಯ ಯೋಜನಾ ಪ್ರದೇಶದ ಒಳಗಿದ್ದು, ಪ್ರಸ್ತಾವಿತ ಭೂಪರಿವರ್ತನೆಯ ಉದ್ದೇಶವು ಮಾಸ್ಟರ್‌ ಪ್ಲ್ಯಾನ್‌ನಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕೆ ಅನುಗುಣವಾಗಿರಬೇಕು. ಇದನ್ನು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಉದ್ದೇಶದಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ಹೇಳಿದರು.


ಆನ್‌ ಲೈನ್‌ ಪ್ರಕ್ರಿಯೆ ಹೀಗಿರುತ್ತದೆ:

* ಅರ್ಜಿದಾರರು ಸಂಬಂಧಪಟ್ಟ ಜಮೀನಿನ ಸರ್ವೆ ಸಂಖ್ಯೆ ಮತ್ತು ಅಗತ್ಯ ವಿವರಗಳನ್ನು ಒಳಗೊಂಡ ಮನವಿ ಸಲ್ಲಿಸಬೇಕು

*ಇದರೊಂದಿಗೆ ಪ್ರಮಾಣ ಪತ್ರ ಮತ್ತು 11 ಇ ನಕ್ಷೆಯನ್ನು ಸಲ್ಲಿಸಬೇಕು

* ಬಳಿಕ ಮನವಿ ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಕಳಿಸಲಾಗುವುದು. ಅಲ್ಲಿನ ಅಧಿಕಾರಿಗಳು, ಈ ಮನವಿಯನ್ನು ಪರಿಶೀಲಿಸಿ ಮಾಸ್ಟರ್‌ ಪ್ಲ್ಯಾನ್‌ಗೆ ಅನುಗುಣವಾಗಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ.

*ನಗರಾಭಿವೃದ್ಧಿ ಪ್ರಾಧಿಕಾರದಿಂದ ಸ್ವೀಕೃತವಾಗುವ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲೆಗಳ ನೈಜತೆ ಪರಿಶೀಲಿಸಿ ಭೂಪರಿವರ್ತನೆಗೆ ಸಂಬಂಧಿಸಿದ ಶುಲ್ಕ ಮತ್ತು ದಂಡವನ್ನು ನಿಗದಿಪಡಿಸಲಾಗುವುದು.

* ಅರ್ಜಿದಾರನು ಆನ್‌ಲೈನ್‌ ಮೂಲಕ ನಿಗದಿತ ಶುಲ್ಕ ಮತ್ತು ದಂಡವನ್ನು ಪಾವತಿಸಿ ಗಣಕೀಕೃತ ತಾತ್ಕಾಲಿಕ ಶುಲ್ಕ ಸ್ವೀಕೃತಿಯ ವಿವರದ ಮಾಹಿತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

* ಅರ್ಜಿದಾರನ ಮನವಿಯಲ್ಲಿ ಭಾಗಶಃ ಭೂಪರಿವರ್ತನೆಗೆ ಸಂಬಂಧಿಸಿದಲ್ಲಿ, ಪಹಣಿಯಲ್ಲಿ ಒಬ್ಬರಿಗಿಂತ ಹೆಚ್ಚು ಖಾತೆದಾರರ ಹೆಸರು ನಮೂದಾಗಿದ್ದರೆ ಮತ್ತು ಮನವಿಯು ‘ಪೈಕಿ ಪಹಣಿ’ ಒಳಗೊಂಡಿದ್ದರೆ ಮಾತ್ರ 11 ಇ ನಕ್ಷೆ ಸಲ್ಲಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT