ಬೆಂಗಳೂರು: ‘ಮುಡಾ ಪ್ರಕರಣದ ವಿಚಾರಣೆಯ ಮಾಹಿತಿಯನ್ನು ಬದಿಗೆ ಸರಿಸಲು ಜೈಲಿನಲ್ಲಿರುವ ನಟ ದರ್ಶನ್ ಅವರ ಚಿತ್ರಗಳು ಮತ್ತು ಮಾಹಿತಿಯನ್ನು ಸರ್ಕಾರವೇ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದೆ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
‘ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕರಣವನ್ನು ಮರೆ ಮಾಚಲು ತಂತ್ರಗಾರಿಕೆ ನಡೆಸಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ದರ್ಶನ್ ಅವರಿಂದ ನಡೆದ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ, ದರ್ಶನ್ ಪೊಲೀಸ್ ಠಾಣೆಯಲ್ಲಿದ್ದ ಮತ್ತು ಜೈಲಿನಲ್ಲಿರುವ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಸರ್ಕಾರ ಯಾವ ಉದ್ದೇಶಕ್ಕಾಗಿ ಚಿತ್ರ ಬಿಡುಗಡೆ ಮಾಡುತ್ತಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಪೊಲೀಸರು ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡುವ ಬದಲು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಕಾರಣವೇನು? ಇದು ಕಾನೂನು ಬಾಹಿರವಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.