ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 2,500 ಚಿರತೆಗಳು ಪತ್ತೆ

ನೇಚರ್ ಕನ್ಸರ್ವೇಷನ್ ಫೌಂಡೇಷನ್ ಅಧ್ಯಯನ
Last Updated 26 ಸೆಪ್ಟೆಂಬರ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾಮೆರಾ ಟ್ರ್ಯಾಪ್‌ ತಂತ್ರಜ್ಞಾನ ನೆರವಿನಿಂದ ರಾಜ್ಯದಲ್ಲಿ 2,500 ಚಿರತೆಗಳ ಇರುವಿಕೆ ಪತ್ತೆ ಹಚ್ಚಲಾಗಿದೆ. ಈ ಪ್ರಾಣಿಗಳ ಸಂಖ್ಯೆ ಅಂದಾಜಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ.

ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್‌ನ ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಮತ್ತು ತಂಡವು ಅರಣ್ಯ ಇಲಾಖೆಯ ಸಹಯೋಗದಲ್ಲಿ ಈ ಅಧ್ಯಯನ ನಡೆಸಿದೆ. ಕ್ಯಾಮೆರಾ ಟ್ರ್ಯಾಪ್‌ನಿಂದ ಪಡೆದುಕೊಂಡ 363 ಚಿರತೆಗಳ ಚಿತ್ರಗಳನ್ನು ಅರಣ್ಯ ಇಲಾಖೆಗೆ ಇತ್ತೀಚೆಗೆ ಹಸ್ತಾಂತರಿಸಿದೆ.

ರಕ್ಷಿತಾರಣ್ಯಗಳು, ಕಾಯ್ದಿಟ್ಟ ಅರಣ್ಯಗಳು, ಕಲ್ಲುಬಂಡೆಗಳ ಗುಡ್ಡಗಳು, ಖಾಸಗಿ ಜಮೀನು ಸೇರಿದಂತೆ ಚಿರತೆಗಳ ಆವಾಸಸ್ಥಾನಗಳಲ್ಲಿ 2012ರಿಂದ ಅಧ್ಯಯನ ನಡೆಸಲಾಗಿದೆ. ಇಲ್ಲಿಯವರೆಗೆ ಮಲೆಮಹದೇಶ್ವರ ಬೆಟ್ಟ, ಕಾವೇರಿ, ಬಿಳಿಗಿರಿರಂಗನಬೆಟ್ಟ ಹಾಗೂ ತಿಮ್ಮಲಾಪುರ ವನ್ಯಜೀವಿಧಾಮಗಳು, ಜಯಮಂಗಲಿ ಸಂರಕ್ಷಿತ ಪ್ರದೇಶ, ತುಮಕೂರು, ರಾಮನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಭದ್ರಾವತಿ, ಬಳ್ಳಾರಿ ಮತ್ತು ಚಿತ್ರದುರ್ಗ ವಿಭಾಗಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ.

ಚಿರತೆ ಮೈಮೇಲಿರುವ ವಿಶಿಷ್ಟ ಚುಕ್ಕೆಗಳ ಆಧಾರದಿಂದ ಸಂಖ್ಯಾಶಾಸ್ತ್ರ ವಿಧಿವಿಧಾನಗಳನ್ನು ಉಪಯೋಗಿಸಿ ಪ್ರದೇಶದ ಅವುಗಳ ಸಂಖ್ಯೆ ಮತ್ತು ಸಾಂದ್ರತೆಯನ್ನು (ಒಂದು ಏಕಾಂಶ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ) ಲೆಕ್ಕಾಚಾರ ಮಾಡಲಾಗಿದೆ. ‘ಸೆರೆ ಹಿಡಿ- ಮರು ಸೆರೆಹಿಡಿ’ ವಿಧಾನ ಅನುಸರಿಸಿ ಚಿರತೆಗಳ ಸಾಂದ್ರತೆಯನ್ನು ಅಂದಾಜಿಸಲಾಗಿದೆ. ಉತ್ತರ ಅಮೆರಿಕದಲ್ಲಿ ಮೀನುಗಳ ಸಂಖ್ಯೆಯನ್ನು ಅಂದಾಜಿಸಲು ಮೊದಲ ಬಾರಿಗೆ ಈ ವಿಧಾನವನ್ನು ಬಳಸಲಾಗಿತ್ತು.

ಚಿರತೆಗಳ ಸಾಂದ್ರತೆ ಹೆಚ್ಚಿರುವ ಭದ್ರಾವತಿ ವಿಭಾಗದ ಕುಕ್ಕಾವಾಡಿ- ಉಬ್ರಾಣಿ, ಹಾದಿಕೆರೆ, ಹಣ್ಣೆ, ರಂಗಯ್ಯನಗಿರಿ ಕಾಡುಗಳನ್ನು, ತುಮಕೂರು ವಿಭಾಗದಲ್ಲಿ ಸಣ್ಣ ಹುಲ್ಲೆ, ಚಿರತೆ, ಕತ್ತೆಕಿರುಬ, ಕೊಂಡುಕುರಿಗಳಿರುವ ಬುಕ್ಕಾಪಟ್ಟಣದ (ಬುಕ್ಕಾಪಟ್ಟಣ, ಮುತ್ತಗದಹಳ್ಳಿ, ಸುವರ್ಣಾವತಿ ಮತ್ತು ಇತರೆ) ಕಾಡುಗಳನ್ನು ವನ್ಯಜೀವಿಧಾಮಗಳನ್ನಾಗಿ ಘೋಷಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಂಜಯ್‌ ತಿಳಿಸಿದರು.

ಅಧ್ಯಯನ ತಂಡದಲ್ಲಿ ಹರೀಶ್ ಎನ್.ಎಸ್., ಪೂರ್ಣೇಶ ಎಚ್.ಸಿ., ಆಶ್ರಿತ ಅನೂಪ್, ರಶ್ಮಿ ಭಟ್, ಸಂದೇಶ ಅಪ್ಪು ನಾಯ್ಕ್, ಜ್ಞಾನೇಂದ್ರ.ಎಲ್., ರವಿದಾಸ್ ಜಿ. ಇದ್ದರು.

*
ಮಧ್ಯ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಚಿರತೆಗಳ ಅಧ್ಯಯನಕ್ಕೆ ಒತ್ತು ನೀಡಲಾಗುತ್ತದೆ. ಅವುಗಳ ಜೀವನಶೈಲಿ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುತ್ತದೆ.
-ಸಂಜಯ ಗುಬ್ಬಿ, ವನ್ಯಜೀವಿ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT